ಆಳ್ವಾಸ್ ಪ್ರಗತಿ: 1,871 ಮಂದಿಗೆ ಉದ್ಯೋಗ

Upayuktha
0

3,259 ಜನರು ಮುಂದಿನ ಹಂತಕ್ಕೆ ಆಯ್ಕೆ | 198 ಕಂಪನಿಗಳು ಭಾಗಿ



ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸುವ ಬೃಹತ್ ಉದ್ಯೋಗ ಮೇಳವಾದ 'ಆಳ್ವಾಸ್ ಪ್ರಗತಿ'ಯ 13ನೇ ಆವೃತಿಯು ಎರಡು ದಿನಗಳ ಕಾಲ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ನಡೆದಿದ್ದು, ಶನಿವಾರ ಸಮಾರೋಪಗೊಂಡಿದೆ. ಈ ಪ್ರತಿಷ್ಠಿತ ಉದ್ಯೋಗ ಮೇಳದಲ್ಲಿ  1,871 ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲಿಯೇ ನೇಮಕಗೊಂಡಿದ್ದಾರೆ.

ಭಾಗವಹಿಸಿದ ಒಟ್ಟು 198 ಕಂಪನಿಗಳ ಪೈಕಿ 174 ಕಂಪನಿಗಳು, 3,259 ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ 2,284 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು ಎರಡು ದಿನಗಳ ಉದ್ಯೋಗ ಮೇಳದಲ್ಲಿ 10,252 ಅಭ್ಯರ್ಥಿಗಳು ಭಾಗವಹಿಸಿದರು.


ಅಮೆರಿಕಾದ ಮೂಲದ ಫ್ಯಾಕ್ಟ್ಸೆಟ್ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ ಕಂಪೆನಿಯು ಒಬ್ಬನನ್ನು ವಾರ್ಷಿಕ ವೇತನ 7.1 ಲಕ್ಷ ರೂಪಾಯಿಗೆ ಹಾಗೂ 20 ಅಭ್ಯರ್ಥಿಗಳನ್ನು ತಲಾ ವಾರ್ಷಿಕ  3.4 ಲಕ್ಷ   ವೇತನಕ್ಕೆ ಸಂಶೋಧನಾ ವಿಶ್ಲೇಷಕರ ಹುದ್ದೆಗೆ ಆಯ್ಕೆ ಮಾಡಿದೆ. 

ಇಎಕ್ಸ್ಎಲ್ ಕಂಪೆನಿಯು ಒಟ್ಟು 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಒಬ್ಬನಿಗೆ ಸುಮಾರು 7 ಲಕ್ಷ ರೂಪಾಯಿ ವಾರ್ಷಿಕ ವೇತನದ ಭರವಸೆ ನೀಡಿದೆ. ಉಳಿದ 38 ಅಭ್ಯರ್ಥಿಗಳಿಗೆ ತಲಾ ವಾರ್ಷಿಕ ಸುಮಾರು 4 ಲಕ್ಷ ರೂಪಾಯಿ ವೇತನದ ಭರವಸೆ ನೀಡಿದೆ. ಬ್ಲ್ಯೂಸ್ಟೋನ್ ಜ್ಯುವೆಲ್ಲರಿಯು ವಾರ್ಷಿಕ ವೇತನ 5 ಲಕ್ಷ ರೂಪಾಯಿಯ ಹುದ್ದೆಗೆ 16 ಮಂದಿಯನ್ನು ಆಯ್ಕೆ ಮಾಡಿದೆ. ಆರೋಗ್ಯ ಸಂಬಂಧಿತ ಕಲ್ಟ್ಫಿಟ್ ಕಂಪೆನಿಯು ವಾರ್ಷಿಕ ತಲಾ 4 ಲಕ್ಷ ರೂಪಾಯಿ ವೇತನಕ್ಕೆ 16 ಜನರನ್ನು ಆಯ್ಕೆ ಮಾಡಿದೆ. ಅಜೆಕ್ಸ್ ಕಂಪೆನಿಯು ವಾರ್ಷಿಕ ತಲಾ 3.5 ಲಕ್ಷ ರೂಪಾಯಿ ವೇತನಕ್ಕೆ 22 ಮಂದಿಯನ್ನು ಆಯ್ಕೆ ಮಾಡಿದೆ. ಸ್ವಿಚ್‌ಗಿಯರ್ ಕಂಪೆನಿಯು ವಾರ್ಷಿಕ ತಲಾ ವೇತನ 3.2 ಲಕ್ಷ ರೂಪಾಯಿಯಂತೆ  36 ಮಂದಿಗೆ ಉದ್ಯೋಗ ನೀಡಿದೆ. ಟ್ರಿಪ್ ಫ್ಯಾಕ್ಟರಿಯು ವಾರ್ಷಿಕ ತಲಾ 3 ಲಕ್ಷ ರೂಪಾಯಿ ವೇತನಕ್ಕೆ 37 ಮಂದಿಯನ್ನು ಆಯ್ಕೆ ಮಾಡಿದೆ. ಸ್ನೈಡರ್ ಎಲೆಕ್ಟ್ರಿಕ್ ಇಂಡಿಯಾ ಕಂಪೆನಿಯು ವಾರ್ಷಿಕ ತಲಾ 2.5 ಲಕ್ಷ ರೂಪಾಯಿ ವೇತನಕ್ಕೆ  18 ಜನರನ್ನು ಆಯ್ಕೆ ಮಾಡಿದೆ. 


******



ಸುವ್ಯವಸ್ಥಿತ ಆಯೋಜನೆಯ ಪ್ರಗತಿ

ಫ್ಯಾಕ್ಟ್ಸೆಟ್ ಇಂಡಿಯಾ ಪ್ರೈ. ಲಿ ಕಂಪೆನಿಗೆ ವಾರ್ಷಿಕ 7.1 ಲಕ್ಷ ವೇತನಕ್ಕೆ ಆಯ್ಕೆಯಾಗಿದ್ದು, ಬಹಳ ಖುಷಿಯಾಗಿದೆ. ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯನ್ನು    ಪೂರೈಸಿದ್ದು, ಕೆ.ಎಸ್. ಹೆಗ್ಡೆ ಕಾಲೇಜಿನಲ್ಲಿ ಎಂಬಿಎ ಪದವಿ ಪೂರೈಸಿದ್ದೇನೆ. ಆಳ್ವಾಸ್ ಪ್ರಗತಿಯು ಬಹಳ ಶಿಸ್ತು ಬದ್ಧವಾಗಿದ್ದು, ಸುವ್ಯವಸ್ಥಿತವಾಗಿ ಆಯೋಜಿಸಿದ್ದಾರೆ.  ಕಲರ್ ಕೋಡಿಂಗ್ ವ್ಯವಸ್ಥೆ, ಸ್ವಯಂಸೇವಕರ ಸಹಕಾರ ಎಲ್ಲವೂ ತುಂಬಾ ಖುಷಿ ನೀಡಿತು. ಇಲ್ಲಿನ ವಿದ್ಯಾರ್ಥಿಗಳು ವ್ಯವಹರಿಸುವ ರೀತಿಯು ಉದ್ಯೋಗದ ಸಂದರ್ಭದಲ್ಲಿ ಬಹಳ ನೆರವಾಗಲಿದೆ. 

-ಗೌರವ್ ಡಿಕೋಸ್ಟಾ, ಸಿದ್ಧಕಟ್ಟೆ


ಆಳ್ವಾಸ್ ಶಿಕ್ಷಣ, ಪ್ರಗತಿಯ ಉದ್ಯೋಗ 

ನಾನು ಮಧ್ಯಮ ವರ್ಗದ ಕೃಷಿ ಕುಟುಂಬದಿಂದ ಬಂದಿದ್ದು, ಅತ್ಯುತ್ತಮ ಶಿಕ್ಷಣ ಹಾಗೂ ತರಬೇತಿಗಾಗಿ ಆಳ್ವಾಸ್‌ಗೆ ಸೇರುವಂತೆ ನನಗೆ ಎಲ್ಲರೂ ಸಲಹೆ ನೀಡಿದ್ದರು. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎಗೆ ಸೇರಿದೆ. ಆಳ್ವಾಸ್ ಸೇರಿದಾಗ ನನ್ನನ್ನು ಬಾವಿಯಿಂದ ತೆಗೆದು ಸಮುದ್ರಕ್ಕೆ ಹಾಕಿದಂತಾಯಿತು. ಇಲ್ಲಿ ಗುಣಮಟ್ಟದ ಶಿಕ್ಷಣ ನೀಡಿ,  ಕಾಪೋರೇಟ್ ಸಂಸ್ಥೆಗೆ ಸಿದ್ಧಗೊಳಿಸುತ್ತಾರೆ. ಕಾಲೇಜಿನಲ್ಲಿ ನೀಡಿದ ತರಬೇತಿಯು ನನಗೆ ಕಂಪೆನಿಯ ಸಂದರ್ಶನ ಎದುರಿಸಲು ಆತ್ಮವಿಶ್ವಾಸ ನೀಡಿದ್ದು, ಸಹಕಾರಿಯಾಯಿತು.  

ನನಗೆ ಲೆಕ್ಕಪರಿಶೋಧನೆಯಲ್ಲಿ ಮುಂದುವರಿಯಲು ಆಸಕ್ತಿ ಇತ್ತು. ಸಣ್ಣ ಸಣ್ಣ ಕಂಪೆನಿಗಳನ್ನೇ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆದರೆ, ಆಳ್ವಾಸ್ ಪ್ರಗತಿಯಲ್ಲಿ ಒಂದೇ ಕಡೆ ದೊಡ್ಡ ದೊಡ್ಡ ಕಂಪೆನಿಗಳಿದ್ದು, ನಮಗೆ ಆಯ್ಕೆಗೆ ಅವಕಾಶ ಇತ್ತು. ಇಎಕ್ಸ್ಎಲ್ ಕಂಪೆನಿಗೆ ಆಯ್ಕೆಯಾಗಿದ್ದು, ತುಂಬಾ ಖುಷಿಯಾಯಿತು.  

 

-ಅಶ್ವಿನಿ, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ, (ಇಎಕ್ಸೆಎಲ್‌ಗೆ ವಾರ್ಷಿಕ ವೇತನ ಸುಮಾರು 7 ಲಕ್ಷಕ್ಕೆ ಆಯ್ಕೆ) 


ಆಳ್ವಾಸ್‌ನಲ್ಲಿ ಸಿಕ್ಕಿದ ಶಿಕ್ಷಣ, ಕ್ರೀಡೆ ಜೊತೆ ಉದ್ಯೋಗ 

ನಮ್ಮ ಊರು ಬೆಳಗಾವಿಯ ರಾಯಭಾಗ್. ಆಳ್ವಾಸ್‌ನ ಕ್ರೀಡಾ ದತ್ತು ಯೋಜನೆ ಮೂಲಕ ಆಳ್ವಾಸ್ ಕಾಲೇಜಿಗೆ ಸೇರಿದೆ.  ಇಲ್ಲಿ ಸೇರಿದ ಬಳಿಕ ಮಲ್ಲಕಂಬದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದೇನೆ. ಇಲ್ಲಿನ ಶಿಕ್ಷಣ ಹಾಗೂ ಕ್ರೀಡಾ ತರಬೇತಿಯು ನಮ್ಮ ವ್ಯಕ್ತಿತ್ವ ಅಭಿವೃದ್ಧಿಗೆ ಸಹಕಾರಿಯಾಯಿತು. ನನಗೆ ಪ್ರಗತಿ ಬಗ್ಗೆ ಮೊದಲೇ ಮಾಹಿತಿ ಇತ್ತು. ಹೀಗಾಗಿ ನಾನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರ ಮಾರ್ಗದರ್ಶನದಲ್ಲಿ ಸಮರ್ಪಕವಾಗಿ ಸಿದ್ಧಗೊಂಡಿದ್ದೆನು. ಈಗ ಆಳ್ವಾಸ್ ಪ್ರಗತಿ ಮೂಲಕ ಉದ್ಯೋಗ ಪಡೆದಿದ್ದು, ಖುಷಿಯಾಗಿದೆ. 

-ವೀರಭದ್ರ ಎನ್. ಮುಧೋಳ್ , ಆಳ್ವಾಸ್ ಪದವಿ ಕಾಲೇಜು ವಿದ್ಯಾರ್ಥಿ ,  ಇಎಕ್ಸ್ಎಲ್‌ಗೆ ಆಯ್ಕೆ   



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top