ಎಂ.ಕೆ. ಅನಂತರಾಜ್ ಒಳಾಂಗಣ ಕ್ರೀಡಾ ಸಂಕೀರ್ಣದ ಉದ್ಘಾಟನೆಯಲ್ಲಿ ಡಾ. ಮೋಹನ ಆಳ್ವ
ವಿದ್ಯಾಗಿರಿ: ‘ಹೃದಯಕ್ಕೆ ಚಿಕಿತ್ಸೆ ಮಾಡಬಹುದು. ಆದರೆ, ಹೃದಯದಿಂದ ಕಟ್ಟಿದ ಬದುಕಿಗೆ ಅಲ್ಲ. ಬದುಕು ಯಾವತ್ತೂ ಸಮಾಜಮುಖಿ. ಅದುವೇ ಶಾಶ್ವತ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಬುಧವಾರ ನಡೆದ ‘ಕೀರ್ತಿಶೇಷ ಎಂ.ಕೆ. ಅನಂತರಾಜ್ ಒಳಾಂಗಣ ಕ್ರೀಡಾ ಸಂಕೀರ್ಣ- ವ್ಯವಸ್ಥಿತ ಈಜುಕೊಳ, ಶಟಲ್ ಬ್ಯಾಡ್ಮಿಂಟನ್ ಕೋರ್ಟ್, ಪರಿಪೂರ್ಣ ಕಬಡ್ಡಿ ಅಂಗಣದ ಉದ್ಘಾಟನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.
ಹೃದಯ ಚಿಕಿತ್ಸೆಗೆ ಒಳಗಾದ ಅನುಭವವನ್ನು ಹಂಚಿಕೊಂಡ ಅವರು, ‘ಯಾವುದೇ ಅಪಾಯ ಬಂದಾಗ ನಾವು ಧೃತಿಗೆಡಬಾರದು. ಅದು ನಮಗೆ ಬಂದ ಎಚ್ಚರಿಕೆ ಎಂದು ಜಾಗೃತಗೊಳ್ಳಬೇಕು. ಬದುಕನ್ನು ನಾವು ಸಾಧ್ಯವಾದಷ್ಟು ಪ್ರೀತಿಸಬೇಕು. ಜೀವನಪ್ರೀತಿಯೇ ನಮ್ಮನ್ನು ಬೆಳೆಸುತ್ತದೆ’ ಎಂದರು.
‘ನನ್ನ ಆರೋಗ್ಯದ ಬಗ್ಗೆ ಕುಟುಂಬದವರು, ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು, ಊರವರು ಸೇರಿದಂತೆ ಎಲ್ಲರೂ ಕಾಳಜಿ ವಹಿಸುತ್ತಿದ್ದರು. ಅವರ ಕಾಳಜಿಯನ್ನು ನೋಡಿದಾಗ ನನಗೆ ‘ಎನ್ನಾತೆಕೆ ಬದುಕಿಯರ ಬುಡ್ಲೆ’ ಎಂಬ ನಾಟಕದ ನೆನಪಾಯಿತು’ ಎಂದು ಚಟಾಕಿ ಹಾರಿಸಿದರು.
‘ಆದರೆ, ನನಗೆ ತಿನ್ನಿಸುವುದು- ತಿನ್ನುವುದು, ನಗಿಸುವುದು- ನಗುವುದು, ಜೊತೆಯಾಗಿ ದುಡಿಯುವುದು ಇಷ್ಟ. ವಯಸ್ಸಾದಂತೆ ತಿನ್ನುವುದು ಸ್ವಲ್ಪ ಕಷ್ಟ’ ಎಂದು ದಿನಚರಿಯನ್ನು ಮೆಲುಕು ಹಾಕಿದರು.
ಎಂ.ಕೆ. ಅನಂತರಾಜ್ ಅವರ ಕ್ರೀಡಾ ಕೊಡುಗೆಯನ್ನು ಕೊಂಡಾಡಿದ ಆಳ್ವರು, ‘ಅನಂತರಾಜ್ ಪುತ್ರ ಅಭಯಚಂದ್ರ ಜೈನ್ ಸ್ವತಃ ಕ್ರೀಡಾ ಸಚಿವರಾಗಿದ್ದರೂ, ತಮ್ಮ ತಂದೆಯ ಹೆಸರನ್ನು ಯಾವುದೇ ಕ್ರೀಡಾಂಗಣ, ಈಜುಕೊಳ ಅಥವಾ ಕ್ರೀಡಾ ಸಮುಚ್ಚಯಗಳಿಗೆ ಇಡಲಿಲ್ಲ’ ಎಂದು ಬದ್ಧತೆಯನ್ನು ಪ್ರಶಂಸಿಸಿದರು.
ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್, ‘ಜೈನಕಾಶಿ ಆಗಿದ್ದ ಮೂಡುಬಿದಿರೆಯನ್ನು ಶಿಕ್ಷಣ ಕಾಶಿ, ಸಾಂಸ್ಕೃತಿಕ ಕಾಶಿ ಆಗಿ ರೂಪಿಸಿದ ಡಾ.ಮೋಹನ ಆಳ್ವರು ಈಗ ಕ್ರೀಡಾಕಾಶಿಯನ್ನಾಗಿ ಮಾಡಿದ್ದಾರೆ’ ಎಂದರು.
‘ಶಿಕ್ಷಣದ ಜೊತೆ ಪ್ರತಿ ಭಾಷಾಪೋಷಣೆ ಮಾಡಿದ ಸಾಧಕ ಡಾ.ಮೋಹನ ಆಳ್ವ. ಇಂದು ರಾಜ್ಯ ಮಾತ್ರವಲ್ಲ, ದೇಶ- ವಿದೇಶದಲ್ಲೂ ಮೂಡುಬಿದಿರೆ ಎಂದರೆ ‘ಆಳ್ವಾಸ್’ ಎನ್ನುತ್ತಾರೆ’ ಎಂದು ಶ್ಲಾಘಿಸಿದರು.
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಾತನಾಡಿ, ‘ಡಾ.ಮೋಹನ ಆಳ್ವ ಅವರು ಯಾವುದೋ ಒಂದು ಸಮುದಾಯಕ್ಕೆ ಸೀಮಿತ ವ್ಯಕ್ತಿಯಲ್ಲ, ಮನುಕುಲಕ್ಕೆ ಬದುಕು ಅರ್ಪಿಸಿದವರು’ ಎಂದರು.
‘ಅತ್ಯುತ್ತಮ ಕ್ರೀಡಾ ತಂಡವನ್ನು ತಯಾರು ಮಾಡಬಲ್ಲ ನಾಯಕ ಡಾ.ಎಂ. ಮೋಹನ ಆಳ್ವ’ ಎಂದರು.
ರಣಜಿ ಆಟಗಾರ ಚಿನ್ನಸ್ವಾಮಿ ಜೊತೆ ತಮ್ಮ ತಂದೆ ಎಂ.ಕೆ. ಅನಂತರಾಜ್ ಕ್ರಿಕೆಟ್ ಆಡಿದ ದಿನಗಳನ್ನು ನೆನಪಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್, ‘ಟೆನಿಸ್, ಫುಟ್‍ಬಾಲ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತಂದೆ ಸದಾ ನಿರತರಾಗಿರುತ್ತಿದ್ದರು. ಅವರು ಜೈನ್ ಹೈಸ್ಕೂಲ್ ಅಧ್ಯಾಪಕ ಎಂದೇ ಬಹುತೇಕರಿಗೆ ಗೊತ್ತು. ಆದರೆ, ಕಾನೂನು ಪದವೀಧರರೂ ಆಗಿದ್ದರು. ಅವರ ಬದುಕೇ ಕ್ರೀಡೆಗೆ ಸಮರ್ಪಿತವಾಗಿತ್ತು’ ಎಂದರು.
‘ತಂದೆ ಕ್ರೀಡಾಪಟುವಾಗಿದ್ದರೂ, ನಮಗೆ ಓದಲು ಒತ್ತಡ ಹಾಕುತ್ತಿದ್ದರು. ನಾನು ಓದಲು ಹಿಂದೇಟು ಹಾಕಿದೆ. ಆದರೆ, ಶಾಸಕನಾದೆ, ಸಚಿವನಾದೆ. ನಾನು ಕ್ರೀಡಾ ಮಂತ್ರಿ ಆಗುತ್ತೇನೆ ಎಂದು ಆಳ್ವರು ಮೊದಲೇ ಭವಿಷ್ಯ ನುಡಿದಿದ್ದರು’ ಎಂದರು.
ಸರೋಜ್ ಮೈದಾನದಲ್ಲಿ ಸರ್ಕಾರದಿಂದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಿಸಿದೆ. ಅದನ್ನು ಆಳ್ವರು ಸಾರ್ಥಕಗೊಳಿಸಿದರು. ನಾನು ಜನಪ್ರತಿನಿಧಿ ಆಗಿದ್ದ ಕಾರಣ, ತಂದೆಯ ಹೆಸರನ್ನು ಕ್ರೀಡಾಂಗಣಕ್ಕೆ ಇಡಲಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿರಿಯ ವಕೀಲ ಎನ್.ಕೆ.ವಿಜಯ ಕುಮಾರ್ ಮಾತನಾಡಿ, ಪ್ರಪಂಚದ 8ನೇ ಆಶ್ಚರ್ಯ ಡಾ.ಮೋಹನ ಆಳ್ವ. ಅನಂತರಾಜ್ ಅವರ ಸಂಪಾದನೆಗಿಂತ ಹೆಚ್ವು ಸಾಮಾಜಿಕ ಕೊಡುಗೆ ಇತ್ತು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಧಾ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ., ಎಂಸಿಎಸ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ನಾರಾಯಣ ಪಿ.ಎಂ., ಸೀತಾರಾಮ ಆಳ್ವ, ರಾಮಚಂದ್ರ ಶೆಟ್ಟಿ, ಶ್ರೀನಿವಾಸ ಆಳ್ವ ಇದ್ದರು.
ಡಿ.14ರಿಂದ 17ರ ವರೆಗೆ ನುಡಿಸಿರಿ
ಈ ಬಾರಿ ಡಿಸೆಂಬರ್ 14, 15, 16 ಮತ್ತು 17ರಂದು ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಗೌರವಾಧ್ಯಕ್ಷತೆ ಹಾಗೂ ಅಧ್ಯಕ್ಷತೆಯ ಸ್ವಾಗತ ಸಮಿತಿಯಿಂದ ಮೂಡುಬಿದಿರೆಯ ಹಬ್ಬದ ರೀತಿಯಲ್ಲಿ ‘ಆಳ್ವಾಸ್ ನುಡಿಸಿರಿ ವಿರಾಸತ್ ’ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪ್ರಕಟಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ