ಶಿವಮೊಗ್ಗದ ಉಸಿರು ನಾಡಿಗೆ ಹೆಸರು- ಶರಾವತಿ

Upayuktha
0


ರ ಸರನೆ ಹಾವಿನಂತೆ ಹರಿಯುತ್ತಾ ಧುಮುಕುತ, ಕಿಕ್ಕಿರಿದ ಹಸಿರ ಸಿರಿಯ ಸ್ಪರ್ಶಿಸುತ ಶರ ವೇಗದಲ್ಲಿ ಆಗಸದ ಮೋಡಗಳಿಗಿಂತ ವೇಗವಾಗಿ ಮುನ್ನುಗ್ಗುತ್ತಾ ಅಲ್ಲಲ್ಲಿ ಜಾಗವನ್ನು ಆವರಿಸುತ್ತಾ ಬಾಗಿ ಸೊರಗಿ ಹೋದ ಗಿಡಗಳನ್ನು ಬೇಧಿಸಿ ಮುನ್ನಡೆಯುತ್ತಾ ಬರಡಾದ ಭೂಮಿಗಳಿಗೆ ಹೊಸ ಹುಮ್ಮಸ್ಸನ್ನು ನೀಡುತ್ತಾಳೆ ಕರ್ನಾಟಕದ ಪ್ರಮುಖ ಜೀವನದಿ ಶರಾವತಿ. ದಟ್ಟ ಕಾಡುಗಳ ಇಕ್ಕೆಲಗಳಲಿ ಒಮ್ಮೊಮ್ಮೆ ಪ್ರಶಾಂತವಾಗಿ ಒಮ್ಮೊಮ್ಮೆ ಭೋರ್ಗರೆಯುತ್ತ ಜುಳು ಜುಳು ನಾದದಿ ಹಿತವನ್ನು ಉಣಿಸುತ್ತಿದ್ದಾಳೆ ಈಕೆ. ಕನ್ನಡ ನಾಡಿಗೆ ಅತಿ ಹೆಚ್ಚು ಅನುಕೂಲತೆಗಳನ್ನು ಒದಗಿಸಿ ಅಪಾರ ಆರ್ಥಿಕ ಚಟುವಟಿಕೆಗಳಲ್ಲಿ ತನ್ನದೇ ಆದ ಹೆಸರು ಗಳಿಸಿದ್ದಾಳೆ ಶರಾವತಿ.




ಈ ನದಿಯು ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿದ್ದು ತನ್ನದೇ ಆದ ಪುರಾಣದ ಹಿನ್ನಲೆಯನ್ನು ಹೊಂದಿದೆ. ಸೀತಾ ಮಾತೆಗೆ ಬಾಯಾರಿಕೆ ಆದಾಗ ರಾಮನು ತನ್ನ ಬಾಣವನ್ನು ನೆಲಕ್ಕೆ ತಾಗಿಸಿದಾಗ ಭೂಮಿಗೆ ಅಪ್ಪಳಿಸಿದಾಗ ನೀರು ಚಿಮ್ಮಿತು. ಈ ರೀತಿ ಘಟನೆಯಿಂದ ಹುಟ್ಟಿದ ನದಿಗೆ ಶರಾವತಿ ಎಂದು ಕರೆಯಲಾಗಿದೆ. ಶರಾ ಎಂದರೆ ಬಾಣ ಎಂದರ್ಥ. ಇದು ಸಣ್ಣ ತೊರೆಯಾಗಿ ಹುಟ್ಟಿ ಬರಬರುತ್ತ ನೀರಿನ ಸೆಲೆಯು ಹೆಚ್ಚಿ ನದಿಯಾಯಿತು. ದಟ್ಟವಾದ ಕಾನನದಲ್ಲಿ ವಯ್ಯಾರದಂತೆ ಹರಿದು ಕಣಿವೆಗಳ ಮೂಲಕ ಹರಿಯುತ್ತಾ ಮುಂದೆ ಸಾಗುತ್ತ ಸಕಲ ಜೀವಿರಾಶಿಗಳಿಗೆ ವರದಾನವಾಗುತ್ತ ಹಾಗೆಯೇ ಮುಂದೆ ಸಾಗುತ್ತ ಅಲ್ಲಲ್ಲಿ ಕಿರಿದಾದ ವಿಸ್ತಾರದ ಮೂಲಕ ಹರಿಯುತ್ತದೆ.



ಕನ್ನಡನಾಡಿಗೆ ವಿದ್ಯುತ್ತಿನ ಬೆಳಕು ನೀಡುವ ಈ ನದಿ ಕನ್ನಡನಾಡಿನ ಭಾಗೀರಥಿ ಎಂದು ಪ್ರಸಿದ್ಧವಾಗಿದೆ. ಈ ನದಿಗೆ ವಿವಿಧ ರೀತಿಯ ಪೌರಾಣಿಕ ಹಿನ್ನೆಲೆಗಳು ಇವೆ. ಶಿವ ಪಾರ್ವತಿಯರು ಇಲ್ಲಿ ತಂಗಿದ್ದು ಶಿವಲಿಂಗವನ್ನು ಪೂಜಿಸುತ್ತಿದ್ದರು. ಈ ಲಿಂಗದ ಕೆಳಗಡೆ ನೀರು ಉದ್ಬವವಾಗಿ ಆಮೇಲೆ ಕೊಳವ ಸೇರುತ್ತಾ ಸಣ್ಣ ಸಣ್ಣ ಝರಿಗಳಾಗಿ ಸೇರಿ ಕೊನೆಗೆ ಶರಾವತಿ ನದಿಯನ್ನು ಕೂಡುತ್ತದೆ. ಈ ನದಿ ಉಗಮ ಸ್ಥಾನ ಶಿವನ ನೆಲೆಯಾಗಿದ್ದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಭಕ್ತರ ಪಾಲಿನ ಸ್ವರ್ಗವಾಗಿದ್ದು ಇದರ ಸುತ್ತಮುತ್ತಲಿನ ಪರಿಸರವು ಹಚ್ಚ ಹಸಿರಾಗಿದ್ದು ನೋಡಲೇರಡು ಕಣ್ಣು ಸಾಲದು. ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಈ ಸ್ಥಳ ಪ್ರಸಿದ್ಧತೆಯನ್ನು ಪಡೆದಿದೆ.



ಶರಾವತಿ ನದಿಯು ಮಲೆನಾಡಿನಲ್ಲಿ ಉಗಮಿಸಿದ್ದರಿಂದ ತನ್ನದೇ ಆದ ಸಿರಿವಂತಿಕೆಯಿಂದ ಕೂಡಿದೆ. ಪ್ರಕೃತಿಯನ್ನೇ ತನ್ನೊಡಲಲಿ ಪೋಷಿಸುತ ಸದಾ ಕಂಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಎರಡು ರೀತಿಯಲ್ಲಿ ಶರಾವತಿ ನದಿಯ ಉಗಮಸ್ತಾನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಒಂದೆಡೆ ಶಿವಲಿಂಗ ದೇವಸ್ಥಾನವು ಭಕ್ತರ ಪಾಲಿಗೆ ವರವಾದರೆ ಇನ್ನೊಂದೆಡೆ ಇಲ್ಲಿಯ ವಾತಾವರಣ ಹಸಿರ ಸಿರಿಯ ಸೌಂದರ್ಯತೆಯನ್ನು ಕಣ್ತುಂಬಿಕೊಳ್ಳುವುದು. ಯಾವಾಗಲೂ ಇಲ್ಲಿ ನೀರು ಬತ್ತುವುದಿಲ್ಲ ಅಲ್ಲದೆ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕಂಡು ಬರುತ್ತದೆ. ಇಲ್ಲಿಯ ನೀರನ್ನು ಸೇವಿಸಿದರೆ ರೋಗ ರುಜಿನಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೆ. ಇಂದಿಗೂ ಸಾಕಷ್ಟು ರೀತಿಯ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.



ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳಲ್ಲಿ ಇದು ಪ್ರಮುಖವಾಗಿದ್ದು ಹರಿಯುವ ಉದ್ದ ಸುಮಾರು 128 ಕಿಮೀ ಆಗಿದೆ. ಪ್ರವಾಸಿಗರ ಆಕರ್ಷಣೀಯ ಸ್ಥಳ ಹಚ್ಚ ಹಸಿರಿನ ಧಾಮವಾದ ಹೊನ್ನಾವರದಲ್ಲಿ ಅರಬಿ ಸಮುದ್ರವನ್ನು ಸೇರುತ್ತದೆ. ಈ ಸ್ಥಳವು ಇಂದಿಗೂ ಕೂಡ ದಟ್ಟವಾದ ಕಾನನ ಹೊಂದಿದ್ದು ಪರಿಸರಾತ್ಮಕ ಪ್ರವಾಸಿ ಕೇಂದ್ರಗಳನ್ನು ಸ್ಥಾಪಿಸಿ ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತಿದೆ. ಹೊನ್ನಾವರದಲ್ಲಿ ಈ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲಾಗಿದ್ದು ಈ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದವಾದ ಸೇತುವೆಯಾಗಿದೆ. ತನ್ಮೂಲಕವಾಗಿ ವಿವಿಧ ಪ್ರಸಿದ್ಧ ಜಲಪಾತಗಳ ಉಗಮಕ್ಕೂ ಈ ನದಿ ಕಾಣವಾಗಿದೆ. ಅಂತಹದರಲ್ಲಿ ಪ್ರಮುಖವಾಗಿದ್ಫು ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದ ಹಾಲಿನಂತೆ ಸದಾ ಎತ್ತರದಿಂದ ಧುಮುಕುತ್ತಿರುವ ಜಲಪಾತ. ಅಖಂಡವಾದ ಪ್ರಪಾತ ಪರಿಚಯಿಸುವ ರಮ್ಯ ಸೊಬಗಿನ ಗಂಗೆಯ ಒಡಲೇ ಜೋಗ ಜಲಪಾತ.



ಜೋಗ ಜಲಪಾತವು 900 ಅಡಿ ಎತ್ತರದಿಂದ ಧುಮುಕುತ್ತಿದ್ದು, ರಾಜಾ ರಾಣಿ ರೋರರ್ ರಾಕೆಟ್ ಎಂಬ ನಾಲ್ಕು ಪಥಗಳಿಂದ ನೀರು ಜೆಟ್ ನಂತೆ ಧುಮುಕಿ ಅಬ್ಬಾ ಎನ್ನುವಂತೆ ಆಶ್ಚರ್ಯ ಹುಟ್ಟಿಸುತ್ತದೆ. ಈ ಜಲಪಾತದ ಕೆಳಗೆ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಕರ್ನಾಟಕದಲ್ಲೆ ವಿದ್ಯುಚ್ಛಕ್ತಿಯನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುವ ಪ್ರಮುಖ ವಿದ್ಯುತ್ ಕೇಂದ್ರವಾಗಿದೆ. ಇಲ್ಲಿ ಭೇಟಿ ನೀಡುವುದು ಕೂಡ ಅದ್ಭುತ ಅನುಭವಗಳಲ್ಲಿ ಒಂದು. ಎಂಥವರನ್ನೂ ಕೂಡ ಈ ಜಲಪಾತವು ಅಯಸ್ಕಾಂತದಂತೆ ತನ್ನತ್ತ ಆಕರ್ಷಿಸಿ ಚೆಲುವಿನ ಸವಿಯನ್ನು ಉಣಿಸುತ್ತದೆ. ಅಲ್ಲದೆ ಕರ್ನಾಟಕ ಸರ್ಕಾರವು ಇದನ್ನು ಪ್ರವಾಸಿಗರ ಸ್ಥಳವಾಗಿ ಪರಿಗಣಿಸಿ ವಿಶಿಷ್ಟವಾದ ಸೌಲಭ್ಯಗಳನ್ನು ಒದಗಿಸಿ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.



ಸಾಗರದ ಹತ್ತಿರ ಲಿಂಗನಮಕ್ಕಿ ಜಲಾಶಯಕ್ಕೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದ್ದು ಇಲ್ಲಿಯೇ ಜಲವಿದ್ಯುದಾಗಾರ ಯೋಜನೆಯು ಕಾರ್ಯ ನಿರ್ವಹಿಸುತ್ತದೆ. ಮೊದಲೆಲ್ಲ ಇಡೀ ಕರ್ನಾಟಕಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ದೀರ್ಘಕಾಲಕ್ಕೆ ವಿದ್ಯುತ್ ನ್ನು ಇಲ್ಲಿಂದಲೇ ಪೂರೈಸಲಾಗುತ್ತಿತ್ತು. ಪ್ರಕಾಶಮಾನವಾಗಿ ಬೆಳಗುತ್ತ ನಾಡನ್ನು ಕತ್ತಲಿನಿಂದ ಮುಕ್ತಗೊಳಿಸಿತ್ತು. ಇಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಇರುವುದರಿಂದ ವಿದ್ಯುತ್ ಉತ್ಪಾದನೆ ಅತಿ ಸುಲಭವಾಗಿತ್ತು. ಇದರ ಸುತ್ತಮುತ್ತಲೂ ದಟ್ಟವಾದ ಅರಣ್ಯವಿದ್ದು ಹಲವು ಬಗೆಯ ಜೀವವೈವಿದ್ಯತೆಗಳು ಕಂಡು ಬಂದಿದ್ದು ಸಮೃದ್ದವಾಗಿವೆ. ಅಲ್ಲದೆ ಅನೇಕ ರೀತಿಯ ಪಕ್ಷಿ ಸಂಕುಲಗಳು, ಸಸ್ಯ ಸಂಕುಲಗಳು ನೆಲೆಸಿ ಪಕ್ಷಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿವೆ. ಅಲ್ಲದೆ ವೈವಿಧ್ಯಮಯ ಗಿಡ ಮೂಲಿಕೆಗಳು ಕೂಡ ಸಿಗುವುದರಿಂದ ವೈದ್ಯಕೀಯ ಕ್ಷೇತ್ರದ ಆಗರವಾಗಿದೆ.



ಈ ನದಿಯು ಹಲವಾರು ಅಣೆಕಟ್ಟುಗಳನ್ನು ಹೊಂದಿದೆ. ಅದರಲ್ಲಿ ಪ್ರಮುಖವಾದವು ಲಿಂಗನಮಕ್ಕಿ ಅಣೆಕಟ್ಟನ್ನು 1964ರಲ್ಲಿ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಯಿತು. ಗೇರುಸೊಪ್ಪ ಅಣೆಕಟ್ಟನ್ನು 2000ರಲ್ಲಿ ಕಟ್ಟಲಾಯಿತು. ಈ ನದಿಗೆ ಕಟ್ಟಲಾದ ಬಹಳಷ್ಟು ಅಣೆಕಟ್ಟುಗಳ ಪ್ರಮುಖ ಉದ್ದೇಶ ವಿದ್ಯುತ್ ಉತ್ಪಾದನೆ. ಅದರಂತೆ ಗೇರುಸೊಪ್ಪ ಜಲಾಶಯ ಹೆಚ್ಚು ವಿದ್ಯುತ್ ಉತ್ಪಾದಿಸುತ್ತದೆ. ಇದು ಉತ್ತರಕನ್ನಡ ಜಿಲ್ಲೆಯ ಬಳಿ ಕಂಡು ಬರುತ್ತದೆ. ಇದು 56 ಮಿ ಎತ್ತರವಾಗಿದ್ದು, 545 ಮೀಟರ್ ಉದ್ದವನ್ನು ಹೊಂದಿದೆ.



ಈ ನದಿಯು ಮಲೆನಾಡಲ್ಲಿ ಮೈದುಂಬಿ ಹರಿಯುವುದರಿಂದ ನದಿ ಬಹುಪಾಲು ಪಶ್ಚಿಮಘಟ್ಟವನ್ನೇ ಆವರಿಸಿದ್ದು, ಈ ನದಿ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತದೆ. ಜೂನ್‌ನಿಂದ ಸೆಪ್ಟೆಂಬರ ವರೆಗೆ ಶೇಕಡಾ 95%ರಷ್ಟು ಮಳೆಯಾಗಿ ಸಮೃದ್ಧಿಯಿಂದ ಸದಾ ಹಸಿರಿನ ಹಾಸಿಗೆಯಾಗಿ ಪ್ರಕೃತಿಯ ರಮಣೀಯ ದೃಶ್ಯವನ್ನು ದಯಪಾಲಿಸುತ್ತದೆ. ಈ ಪ್ರದೇಶವು ಜೀವವೈವಿದ್ಯತೆಯಿಂದ ಕೂಡಿದ್ದು ಹಲವಾರು ಜಾತಿಯ ಉಭಯಚರಗಳು ಕಂಡು ಬರುತ್ತವೆ. ಅದರಲ್ಲಿ ಪ್ರಮುಖವಾದವು- ಬಫೋನಿಡೆ, ಇಚ್ಛಿಯೋಫಿಡೆ, ಮೈಕ್ರೋಫಿಲಿಡೆ, ರಾಣಿಡೆ, ರಾಕೋಪೋರಿಡೆ ಅಂತಹ ವಿಭಿನ್ನ ಪ್ರಭೇದಗಳು ಕೂಡ ಇಲ್ಲಿ ನೆಲೆಯಾಗಿವೆ. ಹೊನ್ನೆಮರಡು ಜಲಾನಯನದ ದ್ವೀಪವಾಗಿದ್ದು ಜಲಕ್ರೀಡೆಗೆ ಉತ್ತಮವಾಗಿದೆ. ವಿವಿಧ ರೀತಿಯ ಜಲ ಕ್ರೀಡೆಗಳಾದ ಕ್ಯಾನೋಯಿಂಗ್, ಕಯಾಕಿಂಗ್ ಈ ರೀತಿಯ ಜಲಕ್ರೀಡೆಗಳು ಇಲ್ಲಿ ಪ್ರಸಿದ್ಧವಾಗಿವೆ.



ಏಷ್ಯಾದಲ್ಲೇ ಅತಿ ಹೆಚ್ಚು ವಿದ್ಯುತ್ ಇಲ್ಲಿಂದ ಉತ್ಪಾದಿಸಲಾಗುತ್ತಿದ್ದು ಮಾಣಿಯಲ್ಲಿ ವರಾಹ ಜಲಾಶಯ ನಿರ್ಮಿಸಲಾಗಿದೆ. ಶರಾವತಿ ಪಂಪ್ಡ್ ಯೋಜನೆ ಭಾರತದಲ್ಲೇ ಅತಿ ದೊಡ್ಡ ಯೋಜನೆಯಾಗಿದ್ದು, ತಲಕಳಲೆ ಮತ್ತು ಗೇರುಸೊಪ್ಪ ಜಲಾಶಯಗಳ ನಡುವೆ ಭೂಮಿ ಆಳದಲ್ಲಿ ಸುರಂಗ ಕೊರೆದು ದೊಡ್ಡ ವಿದ್ಯುದಾಗಾರ ನಿರ್ಮಿಸಲಾಗಿದೆ. ಇದಕ್ಕಾಗಿ ತಲಾ 250 ಮೆಗಾವ್ಯಾಟ್ ಸಾಮರ್ಥ್ಯದ 8 ಘಟಕಗಳನ್ನು ಸ್ಥಾಪಿಸಲಾಗಿದ್ದು ಕನ್ನಡನಾಡಿನ ಬೆಳಕಿನ ಕೇಂದ್ರವಾಗಿದೆ. ಈ ಯೋಜನೆಗೆ 800 ಎಕರದಷ್ಟು ಭೂಮಿ ನಾಶವಾಗಿದೆ ಎಂದು ಅಂದಾಜಿಸಲಾಗಿದ್ದು ಅರಣ್ಯ ಪ್ರಮಾಣವು ಕಡಿಮೆಯಾಗಿದೆ. ಹಾಗಾಗಿ ಸರ್ಕಾರವು ಕೂಡ ಯೋಜನೆಯ ಹೆಸರಲಿ ಭೂಮಿಗೆ ಧಕ್ಕೆ ಮಾಡದೆ ಹಸಿರ ಸಿರಿಯನ್ನು ಕಾಪಾಡಬೇಕಿದೆ. ಪರಿಸರವನ್ನು ರಕ್ಷಿಸಬೇಕಿದೆ.



ಶರಾವತಿ ನದಿಯು ಕನ್ನಡನಾಡಿನ ನದಿಗಳಲ್ಲೇ ವಿಶಿಷ್ಟ ಮತ್ತು ವೈಶಿಷ್ಟವಾದ ಸಕಲೋಪಯೋಗ ಗಳನ್ನು ಹೊಂದಿದೆ. ಜನರ ದಾಹವನ್ನು ತಣಿಸುವುದಲ್ಲದೆ ಸಾವಿರಾರು ಹೆಕ್ಟೇರ್ ಭೂಮಿಗಳಿಗೆ ನಿರುಣಿಸಿ, ಕರುನಾಡಿಗೆ ಬೆಳಕನು ಹರಿಸಿ ಜೀವ ವೈವಿಧ್ಯಗಳನ್ನು ಪೋಷಿಸಿ ಪರಿಸರದ ಚೆಲುವನ್ನು ಹೆಚ್ಚಿಸಿ ನಿಸರ್ಗಕೆ ಹಸಿರ ಸೀರೆ ತೊಡಿಸಿ, ಪ್ರವಾಸಿಗರನ್ನು ಆಕರ್ಷಿಸುವ ಕನ್ನಡನಾಡಿನ ಜೀವನದಿ ಶರಾವತಿ. ಈ ನದಿಯ ವಿಸ್ತಾರವೂ ಕಿರಿದಾಗುತ್ತಿದ್ದು ವಿವಿಧ ಧನೋಪಯೋಗಿ ಚಟುವಟಿಕೆಗಳ ಆಗರವಾಗಿ ತನ್ನ ಪ್ರಸಿದ್ಧಿ ಕಳೆದುಕೊಳ್ಳುತ್ತಿದೆ. ಹಾಗಾಗಿ ಈ ನದಿಗೆ ಯಾವುದೇ ಧಕ್ಕೆಯಾಗದಂತೆ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶರಾವತಿಯ ಸಂರಕ್ಷಿಸಿ ನಾಡಿನ ಗರಿಮೆ ಹೆಚ್ಚಿಸಬೇಕಿದೆ.




- ಅವಿನಾಶ ಸೆರೆಮನಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top