ಜ್ಞಾನ ಪರಂಪರೆ ಉಳಿಯಲು ಶ್ರುತ ಸಂಸ್ಕೃತಿಯ ಕೊಡುಗೆ ಅಪಾರ

Upayuktha
0

ಸಂಘಟನಾ ಚಾತುರ್ಮಾಸ್ಯ ಶ್ರೀಸಂದೇಶದಲ್ಲಿ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ




ಗೋಕರ್ಣ: ವಿಶ್ವದಲ್ಲೇ ಅತ್ಯಪೂರ್ವ ಎನಿಸಿದ ಜ್ಞಾನಸಾಮ್ರಾಜ್ಯ ಭಾರತದಲ್ಲಿ ಉಳಿದುಕೊಂಡಿರುವುದು ಬಹುಶ್ರುತದ ಕಾರಣದಿಂದ. ಭಗವದ್ಗೀತೆ, ಮಹಾಭಾರತ, ರಾಮಾಯಣ, ಭಾಗವತದಂಥ ಅಮೂಲ್ಯ ಜ್ಞಾನಧಾರೆ ಕಿವಿಯಿಂದ ಕಿವಿಗೆ ಹರಿದು ಬಂದಿದೆ. ವೇದ, ಶಾಸ್ತ್ರ, ಪುರಾಣ, ಇತಿಹಾಸ ಹರಿದು ಬಂದ ಈ ಶ್ರುತ ಪರಂಪರೆ ಮುಂದುವರಿಯಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.


ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಶನಿವಾರ ರಾಮಾಯಣ ಶ್ರೀಪಾಠ ಮಾಲಿಕೆಯಲ್ಲಿ 'ಬಹುಶ್ರುತ' ಎಂಬ ವಿಷಯದ ಬಗ್ಗೆ ಶ್ರೀಸಂದೇಶ ನೀಡಿದರು. ಹಿರಿಯರು ಹೇಳಿದ್ದನ್ನು ನಾವು ಕೇಳಬೇಕು. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.


"ಕೇಳುವ ಮನಸ್ಸು ನಮ್ಮದಾಗಬೇಕು; ಜೀವನದಲ್ಲಿ ಕೊನೆಯವರೆಗೂ ಕೇಳುವುದರಿಂದ ವಿಮುಖವಾಗಬಾರದು; ಉಸಿರಾಟ ಎಷ್ಟು ಮುಖ್ಯವೋ ಕೇಳುವಿಕೆಯೂ ಅಷ್ಟೇ ಮಹತ್ವದ್ದು. ಕೇಳುವ ಮನಸ್ಸು ಇಲ್ಲದಿದ್ದರೆ ಆತನ ವಿಕಾಸ ಸಾಧ್ಯವಿಲ್ಲ. ನಮಗೆ ಒಂದು ಬಾಯಿ, ಒಂದು ನಾಲಿಗೆ ಇದ್ದರೆ ದೇವರು ಎರಡು ಕಿವಿ ಕೊಟ್ಟಿದ್ದಾನೆ. ನಾವು ಮಾತನಾಡುವ ಕನಿಷ್ಠ ಎರಡು ಪಟ್ಟಾದರೂ ನಾವು ಕೇಳಬೇಕು ಎನ್ನುವುದು ಇದರ ಸೂಚ್ಯಾರ್ಥ" ಎಂದು ಬಣ್ಣಿಸಿದರು.


"ನಮ್ಮ ಹಿರಿಯರು ಕಂಡು ಅನುಭವಿಸಿದ್ದನ್ನು ನಾವು ಕಂಡಿರಲು ಸಾಧ್ಯವಿಲ್ಲ; ಅಂತೆಯೇ ನಮ್ಮ ಜೀವಿತಾವಧಿಯ ಎಷ್ಟೋ ವಿಷಯಗಳು ಮುಂದಿನ ಪೀಳಿಗೆಯವರಿಗೆ ಲಭ್ಯವಾಗದಿರಬಹುದು. ನಮ್ಮ ಹಿರಿಯರ ಅನುಭವಗಳು ನಮಗೆ ಪಾಠವಾಗಬಹುದು. ನಮ್ಮ ಹಿರಿಯರು ಅದೆಷ್ಟೋ ತಲೆಮಾರುಗಳ ಜ್ಞಾನ ಪರಂಪರೆಯನ್ನು, ಕುಟುಂಬ ಪದ್ಧತಿ, ಸಂಪ್ರದಾಯ, ಚರಿತ್ರೆಗಳನ್ನು ನಮಗೆ ಧಾರೆ ಎರೆದಿದ್ದಾರೆ. ಹೀಗೆ ಕೇಳುವುದರಿಂದ ಬಹಳಷ್ಟು ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದು ವಿಶ್ಲೇಷಿಸಿದರು.


ಬೇರೆ ಬೇರೆ ಮೂಲಗಳಿಂದ ಸಾಧ್ಯವಾದಷ್ಟೂ ನಾವು ಕೇಳಿ ತಿಳಿದುಕೊಳ್ಳಬೇಕು. ಹೆಚ್ಚು ಕೇಳುವವನ ಜೀವನ ವಿಕಾಸವಾಗುತ್ತಾ ಹೋಗುತ್ತದೆ. ಹಿರಿಯರು ಹೇಳಿದ್ದನ್ನು ನಾವು ಕೇಳದೇ ಇದ್ದರೆ ಆ ಜ್ಞಾನಪರಂಪರೆಯೇ ಅಳಿಸಿಹೋಗುವ ಅಪಾಯ ಇದೆ ಎಂದು ಎಚ್ಚರಿಸಿದರು.


"ನಮ್ಮ ಕಣ್ಣುಗಳು ಸಮಕಾಲೀನ ಘಟನೆಗಳನ್ನಷ್ಟೇ ನೋಡಬಲ್ಲವು. ಆದರೆ ಕಿವಿಗಳ ಮೂಲಕ ಹಿಂದೆ ನಡೆದದ್ದನ್ನೂ ಕೇಳಿ ತಿಳಿದುಕೊಳ್ಳಲು ಸಾಧ್ಯವಿದೆ. ಆದ್ದರಿಂದ ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳೋಣ. ಇದು ನಮ್ಮ ವಿಕಾಸಕ್ಕೆ ಮಾರ್ಗ" ಎಂದು ಅಭಿಪ್ರಾಯಪಟ್ಟರು.


ಶ್ರುತಿ ಎಂದರೆ ವೇದ ಎಂಬ ಅರ್ಥ. ವೇದಗಳು ಅಂತರಂಗದ ಸ್ಥಿತಿಗೆ ಕೇಳಿಸಿದಂಥವು. ಈ ಅಮೂಲ್ಯ ಜ್ಞಾನಪರಂಪರೆ ಕಿವಿಯಿಂದ ಕಿವಿಗೆ ಪ್ರಸರಣವಾಗಿದೆ. ಲವಕುಶರು 24 ಸಾವಿರ ಶ್ಲೋಕಗಳ ರಾಮಾಯಣವನ್ನು ಕೇಳಿ ತಿಳಿದುಕೊಂಡ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿದೆ. ಲಿಪಿ ಬಂದಿರುವುದು ನಮ್ಮ ಮೇಧಾಶಕ್ತಿ ಕ್ಷೀಣಗೊಂಡಾಗ. ಲಿಪಿ ಬರುವವರೆಗೂ ಅದೆಷ್ಟೋ ತಲೆಮಾರುಗಳ ಕಾಲ ಇದು ಕಿವಿಯಿಂದ ಕಿವಿಗೆ ಹರಿದಿದೆ ಎಂದು ಹೇಳಿದರು.


ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಬೆಂಗಳೂರು ಪ್ರಾಂತ ಉಪಾಧ್ಯಕ್ಷ ಜಿ.ಜಿ.ಹೆಗಡೆ ತಲಕೇರಿ, ಮಂಗಳೂರು ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.


ಇದಕ್ಕೂ ಮುನ್ನ ಕಾರ್ತಿಕಶ್ಯಾಮ ಮುಂಡೋಳುಮೂಲೆ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ವಿದ್ವಾನ್ ವೇಣುಗೋಪಾಲ ಶ್ಯಾನುಭಾಗ್ ವಯೊಲಿನ್‍ನಲ್ಲಿ, ಅಕ್ಷಯ ನಾರಾಯಣ ಕಾಂಚನ ಮೃದಂಗದಲ್ಲಿ ಸಾಥ್ ನೀಡಿದರು. ಸುಬ್ರಾಯ ಅಗ್ನಿಹೋತ್ರಿ ಮತ್ತು ವಿನಾಯಕ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರು ಮಂಡಲದ ಕೃಷ್ಣರಾಜ, ವರ್ತೂರು, ಭುವನಗಿರಿ ಮತ್ತು ಸಂಜಯ ವಲಯಗಳಿಂದ ಶ್ರೀಗಳಿಗೆ ಶ್ರೀಗುರುಭಿಕ್ಷಾಸೇವೆ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 14 ಮಂದಿಗೆ ಸಾಧಕ ಗೌರವ ಸಲ್ಲಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top