ಗುರುವಿನಿಂದ ಅರಿವು

Upayuktha
0


ತ್ತಮ ರಾಷ್ಟ್ರ ನಿರ್ಮಾಣದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದಲ್ಲಿ ಪ್ರಬಲ ಪಾತ್ರ ವಹಿಸುವವರು ಶಿಕ್ಷಕರು. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮುಖ್ಯವಾದದ್ದು. ದೇಶವೊಂದರ ಭವಿಷ್ಯ ಅಲ್ಲಿರುವ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ ಎನ್ನುತ್ತದೆ ಕೊಠಾರಿ ಶಿಕ್ಷಣ ಆಯೋಗ. ಅದು ಸಾಧ್ಯವಾಗುವುದು ಒಬ್ಬ ಸಮರ್ಥ ಶಿಕ್ಷಕನಿಂದಲೇ ಹೊರತು ಶಾಲಾ ಕಾಲೇಜಿನ ಕಟ್ಟಡ ಅಥವಾ ಕೊಠಡಿಯ ಭವ್ಯತೆಯಿಂದ ಅಲ್ಲ ಎನ್ನುವ ಕಟು ವಾಸ್ತವತೆಯನ್ನು ಅರ್ಥಮಾಡಿಕೊಳ್ಳಬೇಕಾದುದು ಇಂದಿನ ಅನಿವಾರ್ಯತೆಯೂ ಹೌದು. 


ಭಾರತ ದೇಶದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಡಾ ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಭಾರತ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ಕಲ್ಪಿಸುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಇವರ ಜನ್ಮ ದಿನವಾದ ಸೆಪ್ಟೆಂಬರ್ 5 ನೇ ತಾರೀಖನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. 


ಗುರು ಶಿಷ್ಯ ಪರಿಕಲ್ಪನೆ

ಸಂಸ್ಕೃತದಲ್ಲಿ, ಗುರು ಪದವು ’ಗು’ ಮತ್ತು’ರು’ ಎಂಬ ಎರಡು ಮೂಲ ಪದಗಳಿಂದ ಮಾಡಲ್ಪಟ್ಟಿದೆ. ಗು ಎಂದರೆ ಕತ್ತಲೆ, ಮತ್ತು ರು ಎಂದರೆ ಹೋಗಲಾಡಿಸುವವನು. ಕತ್ತಲೆ ಎಂದರೆ ಬೆಳಕಿನ ಕೊರತೆ. ಅದು ನಮಗೆ ತರುವ ಸ್ಪಷ್ಟತೆಗಾಗಿ ನಾವು ಬೆಳಕನ್ನು ಗೌರವಿಸುತ್ತೇವೆ. ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ "ಗುರು". ಅಜ್ಞಾನ ಕತ್ತಲೆಯ ಸಂಕೇತವಾದರೆ, ಜ್ಞಾನ ಬೆಳಕಿನ ಸಂಕೇತವಾಗಿದೆ. ಹೊರಗಿನ ಕತ್ತಲೆ ಕಳೆಯಲು ಹೇಗೆ ಸೂರ್ಯ ಅಗತ್ಯವಿದೆಯೋ ಒಳಗಿನ ಕತ್ತಲೆ ಕಳೆಯಲು ಗುರುವಿನ ಅವಶ್ಯಕತೆಯೋ ಅಷ್ಟೇ ಇದೆ. ನಾವು ಸಿದ್ಧರಿದ್ದರೆ ಗುರುವು ಪ್ರತಿಯೊಂದು ಅಂಶದ ಮೇಲೆ ಪ್ರಭಾವ ಬೀರಬಹುದು.


ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಗುರುಗಳಷ್ಟೇ ಅಲ್ಲ. ಮನೆಯಲ್ಲಿ ತಾಯಿ ತಂದೆ ಅಜ್ಜ ಅಜ್ಜಿಯರು, ಬಂಧು ಬಳಗದವರು ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನೂ, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು, ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು.


ಮನಸ್ಸು ಎಲ್ಲ ಕಡೆಗೂ ಓಡುತ್ತಿರುತ್ತದೆ. ಆದರೆ ಅಂತಹ ಮನಸ್ಸಿಗೆ ಸರಿಯಾದ ದಾರಿ ತೋರುವ, ಬುದ್ದಿಯನ್ನು ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡುವ ಮಾರ್ಗದರ್ಶನ ತೋರಿಸುವ ಶಕ್ತಿಯಿರುವುದು ಕೇವಲ ಗುರುವಿನಲ್ಲಿ ಮಾತ್ರ. ಪುರಾಣದ ಕತೆಗಳನ್ನು ನೋಡಿದರೆ ನಮ್ಮ ಪ್ರಾಚೀನರು ಗುರುಗಳಿಗೆ ಎಂತಹ ಮಹತ್ವವನ್ನು ನೀಡಿದ್ದರು ಎಂದು ತಿಳಿಯುತ್ತದೆ.


ಮಾಹಿತಿಯ ಯುಗದಲ್ಲಿ ವಿಸ್ಮೃತಿ:

ಮಾಹಿತಿಯ ಯುಗದಲ್ಲಿ ವಿಸ್ಮೃತಿಯ ಅಂಚಿಗೆ ಸಾಗುತ್ತಿರುವ ಗುರು ಪರಂಪರೆಯ ಮಹತ್ವವನ್ನು ಈ ದಿನ ನಮಗೆ ಮತ್ತೆ ನೆನಪು ಮಾಡಿಕೊಡುತ್ತಿದೆ. ಇದು ಮಾಹಿತಿಯ ಕಾಲ. ಗುರುವಿಗೆ ಕಂಪ್ಯೂಟರುಗಳನ್ನು ಪರ್ಯಾಯವೆಂದು ಭಾವಿಸುತ್ತಿರುವ ಕಾಲವಿದು. ಮಾಹಿತಿಯನ್ನು ತಾಂತ್ರಿಕ ಉಪಕರಣಗಳ ಮೂಲಕ ಪರಿಷ್ಕರಿಸುವ ಕ್ರಿಯೆಯಲ್ಲೇ ಜ್ಞಾನವನ್ನು ಕಾಣುತ್ತಿರುವ ಈ ಕಾಲದಲ್ಲಿ ಗುರು ಎಂಬ ಪರಿಕಲ್ಪನೆಯನ್ನು ಮರು ಶೋಧಿಸಬೇಕಿರುವುದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯ. ಮಾಹಿತಿಯ ಮಹಾಪೂರದಲ್ಲಿ ತೇಲುತ್ತಿರುವ ನಮಗೆ ಎಲ್ಲದರ ಕುರಿತ ಮಾಹಿತಿಯೂ ನಮಗೆ ಬೇಕಿರುವುದಕ್ಕಿಂತ ಹೆಚ್ಚೇ ಸಿಗುತ್ತಿದೆ. ಆದರೆ ಈ ಮಾಹಿತಿಗಳು ನಮ್ಮನ್ನು ನಿರ್ದಿಷ್ಟ ಗುರಿಯತ್ತ ಕೊಂಡೊಯ್ಯುತ್ತಿಲ್ಲ. ನಮ್ಮ ಕಾಲದ ಸಾಮಾಜಿಕ ವಾಸ್ತವಗಳ ಸಂದರ್ಭಕ್ಕೆ ಅಗತ್ಯವಿರುವ ಯಾವ ಮೌಲ್ಯಗಳನ್ನೂ ಇದು ನಮ್ಮಲ್ಲಿ ಬಿತ್ತುತ್ತಿಲ್ಲ.


ಪ್ರಸ್ತುತ ಪಲ್ಲಟಗಳು:

ಆದರೆ ಇಂದು ಸಮಾಜ ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದೆ. ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ.. ಬದಲಾದ ಕಾಲಘಟ್ಟದಲ್ಲಿ ಗುರುಗಳ ಮೇಲಿನ ಗೌರವ ಮೊದಲಿನಂತಿಲ್ಲ. ಅಂದು ಗುರುವೇ ನಮಃ ಎಂದಿದ್ದದ್ದು ಇಂದ ಗುರುವೇನು ಮಹಾ? ಎಂದು ಕೇಳುವಂತಾಗಿದೆ. ಇದಕ್ಕೆ ಕೇವಲ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ. ಆಧುನೀಕರಣ, ಒಂದು ಸ್ಪರ್ಷದಲ್ಲಿ ಸಿಗುವ ಮಾಹಿತಿ, ತಂದೆ-ತಾಯಿಯರು ತಮ್ಮ ಮಕ್ಕಳ ಬಗ್ಗೆ ತೋರುವ ದೃತರಾಷ್ಟ್ರ ಪ್ರೇಮ, ನಮ್ಮ ಸಾಮಾಜಿಕ ವ್ಯವಸ್ಥೆ, ಮಾದ್ಯಮಗಳೂ ಸಹ ಕಾರಣ. ಇಂದು ಶಿಕ್ಷಕರನ್ನೇ ಅವಲಂಬಸಿ ಕಲಿಯಬೇಕಾದ  ಅನಿವಾರ್ಯತೆ ಇಲ್ಲ. ಬದಲಾಗುತ್ತಿರುವ ಸಮಾಜದಲ್ಲಿ ಸಹಜವಾಗಿ ಶಿಕ್ಷಕರೂ ಬದಲಾಗುತ್ತಿದ್ದಾರೆ.


ಅಂಕಗಳಿಗಾಗಿ ಓಟ ಬೇಡ:

ಸ್ಪರ್ಧಾತ್ಮಕ ಪರೀಕ್ಷೆಗಾಗಿ ನಡೆಸುವ ಓಟ ಜೀವನೋಪಾಯದ ಬಗ್ಗೆ ಇರುವ ಅರಿವು ಮತ್ತು ಅವಕಾಶಗಳ ಕೊರತೆಯನ್ನು ಎತ್ತಿ ತೋರಿಸುತ್ತದೆ. ಶಾಲೆಗಳು ಮಗುವಿನ ಶಿಕ್ಷಣವನ್ನು ಪ್ರಮಾಣೀಕರಿಸಬಹುದು. ಆದರೆ ನಮ್ಮ ದೇಶದ ಸಂವಿಧಾನ ಖಾತರಿಪಡಿಸುವ ಗೌರವಯುತ ಮತ್ತು ಯೋಗ್ಯ ಬದುಕಿನ ಭರವಸೆಯನ್ನು ನೀಡುವಲ್ಲಿ ವಿಫಲವಾಗಿದೆ. ನಮ್ಮ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಗುರುತಿಸಿ, ಅಗತ್ಯ ಪ್ರೇರಣೆ ನೀಡಿ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳ ಬಗ್ಗೆ ಗಮನಹರಿಸಬೇಕಾಗದೆ.


ಜನಸಂಖ್ಯಾ ಸಂಪನ್ಮೂಲವಾಗಲಿ

ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಒಂದೆಡೆ ಸವಾಲಾದರೆ, ಇನ್ನೊಂಡೆಡೆ ಅದು ಬೆಳವಣಿಗೆಗೆ ಅವಕಾಶವನ್ನೂ ಒದಗಿಸಿಕೊಡುತ್ತದೆ. ಅಧಿಕ ಸಂಖ್ಯೆಯಲ್ಲಿರುವ ಯುವ ಶಕ್ತಿ ಭಾರತದ ವರ್ತಮಾನ ಮತ್ತು ಭವಿಷ್ಯ. ಮಾನವ ಬಂಡವಾಳದ ಸದ್ಬಳಕೆಯ ಮೂಲಕ ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ತಲುಪುವಂತಾದಾಗ ಮಾತ್ರ ಸುಸ್ಥಿರ ಹಾಗೂ ಅರ್ಥಪೂರ್ಣ ಅಭಿವೃದ್ಧಿ ಸಾಧ್ಯ. ಆದರೆ ಇದು ವಾಸ್ತವವಾಗಬೇಕಾದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಅಗತ್ಯವಾಗಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಿಕ್ಷಣವನ್ನು ಕೊಡಮಾಡವುದು ಕೂಡಾ ಶಿಕ್ಷಣ ಕ್ಷೇತ್ರದ ಹಾಗೂ ಶಿಕ್ಷಕರ ಸಮಕಾಲೀನ ಹೊಣೆಗಾರಿಕೆಯೂ ಹೌದು.


ಕೊನೆಯ ಮಾತು:

ಇಂದಿನ ಮಕ್ಕಳೇ ನಮ್ಮ ಭವ್ಯ ಭಾರತವನ್ನು ಬೆಳಗಿಸಲಿರುವ ಪ್ರಜೆಗಳು. ಜನಸಂಖ್ಯೆಯನ್ನು ಮಾನವ ಸಂಪನ್ಮೂಲ ಆಗಿ ಪರಿವರ್ತಿಸುವ ಆದ್ಯ ಹೊಣೆಗಾರಿಕೆ ಇಂದು ನಮ್ಮ ಮೇಲಿದೆ. ಒಂದು ಮಗುವಿನ ಜೀವನದ ಅಮೂಲ್ಯವಾದ ಸಮಯವನ್ನು ನಾವು ಅತ್ಯಂತ ಅನುಭೂತಿ ಮತ್ತು ಕಾಳಜಿಯಿಂದ ಅರ್ಥ ಮಾಡಿಕೊಳ್ಳಬೇಕಾಗಿದೆ. ಇದಕ್ಕೆ ನಿರಂತರ ಶ್ರಮ ಮತ್ತು ಉತ್ಸಾಹದ ಅಗತ್ಯ ಇದೆ. ವೇಗವಾಗಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳ ಬಗ್ಗೆ ಗಮನಹರಿಸಬೇಕಾಗಿದೆ. 


ಬೋಧನೆಯ ಸದಾಕಾಂಕ್ಷೆ ಮತ್ತು ಮಕ್ಕಳ ಜೀವನವನ್ನು ಪರಿವರ್ತನೆಗೊಳಿಸುವ ಏಕಮಾತ್ರ ಉದ್ದೇಶ ಶಿಕ್ಷಕರದ್ದಾಗಿರಬೇಕು. ಚಿಂತನಶೀಲ ವೃತ್ತಿಗಾರರಾಗಿ ಮಾತ್ರ ಶಿಕ್ಷಕರ ಅಭಿವೃದ್ಧಿಯನ್ನು ಅವರ ವೃತ್ತಿಪರ ಯಶಸ್ಸಿನ ಪರಾಕಾಷ್ಠೆ ಎಂದು ಪರಿಗಣಸಬೇಕಾಗುತ್ತದೆ. ಆದರೆ ಅವರ ಸ್ವಾಯತ್ತತೆಗೆ ಯಾವುದೇ ಧಕ್ಕೆ ಆಗದಿದ್ದಾಗ ಮಾತ್ರ ಈ ಸಾಧನೆ ಸಾಧ್ಯವಾಗುತ್ತದೆ. 


ಮಕ್ಕಳ ವಿಭಿನ್ನ ರೀತಿಯ ಅಗತ್ಯಗಳನ್ನ ಪೂರೈಸುವ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕರಿಗೆ ಸ್ವಾತಂತ್ರ್ಯ ನೀಡುವುದು ಅತ್ಯಗತ್ಯವಾಗಿದೆ. ಶಿಕ್ಷಣಾರ್ಥಿಗೆ ಅವಕಾಶ, ಸ್ವಾತಂತ್ರ್ಯ, ಹೊಂದಾಣಿಕೆ ಹಾಗೂ ಗೌರವ ಹೇಗೆ ಅಗತ್ಯವೋ ಅಷ್ಟೇ ಪ್ರಮಾಣದ ಅಗತ್ಯ ಶಿಕ್ಷಕರಿಗೂ ಇದೆ.


ಇತ್ತೀಚೆಗೆ ಬಹಳಷ್ಟು ಮಂದಿ ಶಿಕ್ಷಕ ವೃತ್ತಿ ಎಂದರೆ ಕೃತಜ್ಞತೆ ರಹಿತವಾದ ವೃತ್ತಿ ಎಂದುಕೊಳ್ಳುತ್ತಾರೆ. ಆದರೆ ನಿಜವಾಗಿ ಇಂದಿಗೂ ಶಿಕ್ಷಕ ವೃತ್ತಿ ಒಂದು ಉದಾತ್ತವಾದ, ಗೌರವಯುತವಾದ ಹಾಗೂ ಜವಾಬ್ದಾರಿಯುತವಾದ ಕಾಯಕ. ಇಂತಹ  ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿ ಇತರರಿಗೂ ಮಾರ್ಗದರ್ಶಕರಾದ ಅದೆಷ್ಟೋ ಮಂದಿ ಗುರುಗಳು ನಮ್ಮ ನಡುವೆ ಇದ್ದಾರೆ ಎಂಬುದು ಸಮಾಧಾನದ ಸಂಗತಿ. ಆದರ್ಶ ಗುರುಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿ. ನಮ್ಮ ದೇಶ ಪ್ರಗತಿಪಥದಲ್ಲಿ ಸದೃಡ ಹೆಜ್ಜೆ ಇಡಲು ಇದೊಂದು ಭದ್ರ ಬುನಾದಿಯೂ ಆಗಬಹುದು. ಈ ಮೂಲಕ ಮಾನವ ಸಂಪನ್ಮೂಲದ ಅಭಿವೃದ್ಧಿಯಾಗಿ ನಮ್ಮ ದೇಶ ಬೆಳಗಲಿ ಎಂಬುದೇ ನಮ್ಮ ಹಾರೈಕೆ.


- ಡಾ.ಎ. ಜಯ ಕುಮಾರ ಶೆಟ್ಟಿ

ನಿವೃತ್ತ ಪ್ರಾಂಶುಪಾಲರು 

ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ), ಉಜಿರೆ

9448154001

ajkshetty@sdmcujire.in


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top