ಗುರುರ್ಬ್ರಹ್ಮ, ಗುರುರ್ವಿಷ್ಣು,
ಗುರುರ್ದೇವೋ ಮಹೇಶ್ವರಾ।
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ||
ಮಾತೃದೇವೋ ಭವ...
ಪಿತೃದೇವೋ ಭವ.......
ಆಚಾರ್ಯ ದೇವೋ ಭವ..
ತಾಯಿಯೇ ಮೊದಲ ಗುರು, ಗುರುವಿಲ್ಲದೆ ನಾವು ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ, ಜಗತ್ತಿನಲ್ಲಿ ಗುರುವಿನ ಸ್ಥಾನವನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗಿದೆ, ಎಲ್ಲ ದೇವರುಗಳಿಗಿಂತ ಜಗತ್ತಿನಲ್ಲಿ ಸರ್ವಶ್ರೇಷ್ಠವಾದದ್ದು ಗುರುವಿನ ಅನುಬಂದ.
ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ; ಆದರೆ ವಿಶ್ವ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ 5 ರಂದು ಆಚರಿಸುವರು. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಹಾಗೂ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದವರು ಮತ್ತು ಶ್ರೇಷ್ಠ ವಿದ್ವಾಂಸರೂ, ಆದರ್ಶ ಶಿಕ್ಷಕರೂ, ಭಾರತರತ್ನ ಪುರಸ್ಕೃತರೂ ಮತ್ತು ಹೆಸರಾಂತ ಶಿಕ್ಷಣತಜ್ಞರಾಗಿದ್ದರು.
1962 ರಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿಯಾದರು. ಸೆಪ್ಟೆಂಬರ್ 5 ರಂದು ಬರುವ ಅವರ ಜನ್ಮದಿನವನ್ನು ಆಚರಿಸಲು ಅವಕಾಶ ನೀಡುವಂತೆ ಅವರ ಕೆಲವು ಸ್ನೇಹಿತರು ಹಾಗೂ ಮಾಜಿ ವಿದ್ಯಾರ್ಥಿಗಳು ವಿನಂತಿಸಿಕೊಂಡರು, ಇವರೆಲ್ಲರ ವಿನಂತಿಯ ಮೇರೆಗೆ ರಾಧಾಕೃಷ್ಣನ್ ಅವರು ಅವರ ಜನ್ಮದಿನವನ್ನು ಆಚರಿಸುವ ಬದಲಾಗಿ ಅಂದು ಎಲ್ಲಾ ಶಿಕ್ಷಕರಿಗೂ ಗೌರವ ಸಲ್ಲಿಸುವ ಸಲುವಾಗಿ ಅಂದು ಶಿಕ್ಷಕರ ದಿನವನ್ನಾಗಿ ಆಚರಿಸಲು ಅನುಮತಿ ನೀಡಿದರೆಂದು ಹೇಳಲಾಗಿದೆ.
ಶಿಕ್ಷಕರ ದಿನವನ್ನು ಭಾರತದಲ್ಲಿ ಮಾತ್ರ ಆಚರಿಸಲಾಗುವುದಿಲ್ಲ, ವಿವಿಧ ದೇಶಗಳಲ್ಲಿ ಈ ದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ ಹಾಗೆ ಶಿಕ್ಷಣದ ಮಹತ್ವವನ್ನು ಪ್ರಶಂಸಿಸಲು ಪ್ರಪಂಚದಾದ್ಯಂತ ಈ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ನಮ್ಮ ದೇಶದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ಆಯಾ ವೃತ್ತಿಯಲ್ಲಿ ಯಶಸ್ವಿಯಾಗಲು ಸಹಾಯ ಮಾಡುವಲ್ಲಿ ಶಿಕ್ಷಕರ ಪ್ರಮುಖ ಪಾತ್ರವಿದೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಆಧಾರ ಸ್ತಂಭಗಳಿದ್ದಂತೆ, ಅವರು ಬಿತ್ತುವ ಶಿಕ್ಷಣವೆಂಬ ಬೀಜದ ಬೆಳೆ ಮುಂದೊಂದು ದಿನ ಉತ್ಕೃಷ್ಟವಾಗಿ ಎತ್ತರಕ್ಕೆ ಬೆಳೆದು ನಾಲ್ಕಾರು ಜನಕ್ಕೆ ಫಸಲು ನೀಡಬೇಕೆಂದರೆ ವಿದ್ಯಾರ್ಥಿಗಳಿಗೆ ಅವರು ನೀಡುವ ಮೌಲ್ಯಯುತ ಮಾರ್ಗದರ್ಶನಗಳು ಬಹಳ ಅತ್ಯಗತ್ಯ ಹಾಗೂ ಅತ್ಯಮೂಲ್ಯವಾದುದಾಗಿರುತ್ತದೆ ಮತ್ತು ಶಿಕ್ಷಕರನ್ನೇ ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಷ್ಟರಮಟ್ಟಿಗೆ ಶಿಕ್ಷಕರು ಮಕ್ಕಳಿಗೆ ಆದರ್ಶಮಯವಾಗಿರಬೇಕು ಎನ್ನುವುದು ಎಲ್ಲರ ಅಭಿಮತವೂ ಹೌದು.
ಎಲ್ಲಾ ಗೌರವಾನ್ವಿತ ಶಿಕ್ಷಕರ ಶ್ರಮ ಹಾಗೂ ಬೋಧನೆಗಳನ್ನು ಗೌರವಿಸುವ ಸಲುವಾಗಿ ಈ ಶಿಕ್ಷಕರ ದಿನಾಚರಣೆಯನ್ನು ಆಚರಿಸಬೇಕು, ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ಆಸ್ತಿ ಎಂಬಂತೆ ಉತ್ತಮ ಶಿಕ್ಷಕರು ತಮ್ಮ ಮಾರ್ಗದರ್ಶನದಡಿಯಲ್ಲಿ ಸತ್ಪ್ರಜೆಗಳನ್ನು ರೂಪಿಸುವ ಹೊಣೆ ಹೊತ್ತಿ ದೇಶಕ್ಕೆ ಅಮೂಲ್ಯವಾದ ಸಂಪತ್ತನ್ನು ಮಕ್ಕಳ ಮುಖಾಂತರ ನೀಡುತ್ತಿರುವುದು ಶ್ಲಾಘನೀಯವಾದದ್ದು. ವಿದ್ಯಾರ್ಥಿಗಳು ದೇಶದ ಸತ್ಪ್ರಜೆಯಾಗಲು ಹಾಗೂ ಉತ್ತಮ ನಾಗರೀಕನಾಗಲು ಶಿಕ್ಷಕರ ಪಾತ್ರ ಬಹಳ ಮಹತ್ವವಾದದ್ದು.
ಶಿಕ್ಷಕರ ದಿನವು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಬಂದವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗುತ್ತದೆ, ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮೇಲಿನ ಪ್ರೀತಿ ಗೌರವವನ್ನು ಸೂಚಿಸಲು ಅಥವಾ ವ್ಯಕ್ತಪಡಿಸಲು ಈ ದಿನ ಒಂದು ಸುವರ್ಣ ಅವಕಾಶವಾಗಿರುತ್ತದೆ ಹಾಗೂ ತಮ್ಮ ಪ್ರೀತಿ ಪಾತ್ರ ಶಿಕ್ಷಕರುಗಳಿಗೆ ಯಾವುದಾದರೂ ಒಂದು ಉಡುಗೊರೆಯನ್ನು ನೀಡುವ ಮೂಲಕ ತಮ್ಮ ಅಭಿಮಾನ ಗೌರವವನ್ನು ಸೂಚಿಸಬಹುದಾಗಿದೆ. ದೇಶಕ್ಕೆ ಸತ್ಪ್ರಜೆಗಳನ್ನು ರೂಪಿಸುವಲ್ಲಿ ಮಹತ್ತರವಾದ ಪಾತ್ರದ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕ ವೃಂದದವರಿಗೆ ಪ್ರತಿ ದಿನವೂ ನಮನ ಸಲ್ಲಿಸಿದರೆ ತಪ್ಪಾಗುವುದಿಲ್ಲ, ಅಂತಹದರಲ್ಲಿ ಅವರಿಗಾಗಿ ವರುಷಕ್ಕೊಮ್ಮೆಯಾದರೂ ವಿಶೇಷವಾಗಿ ಶಿಕ್ಷಕರ ದಿನಾಚರಣೆಯ ಮುಖಾಂತರ ಎಲ್ಲರೂ ಅವರಿಗೆ ಗೌರವಪೂರಕವಾಗಿ ನಮನಗಳನ್ನು ಸಲ್ಲಿಸಬೇಕಾಗಿರುವುದು ಎಲ್ಲ ವಿದ್ಯಾರ್ಥಿಗಳ ಆದ್ಯ ಕರ್ತವ್ಯವೂ ಹೌದು.
ಪ್ರತಿಯೊಬ್ಬ ಯಶಸ್ವಿ ವಿದ್ಯಾರ್ಥಿಯ ಹಿಂದೆ ಅವನ ಗುರುವಿನ ಶ್ರಮ ಹಾಗೂ ಮಾರ್ಗದರ್ಶನವಿದ್ದೇ ಇರುತ್ತದೆ. ಆ ವಿದ್ಯಾರ್ಥಿಯು ತನ್ನ ಗುರುಗಳು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ತನ್ನ ಯಶಸ್ಸನ್ನು ಸಾಧಿಸುತ್ತಾನೆ. ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ.
ಶಿಕ್ಷಕ ವೃತ್ತಿಯೊಂದು ಪವಿತ್ರವಾದ ಕೆಲಸ, ದೇಶದ ಭವಿಷ್ಯ ರೂಪುಗೊಳ್ಳುವುದು ಶಾಲೆಗಳಲ್ಲೇ ಅಲ್ಲವೇ? ಇಂತಹ ಪವಿತ್ರವಾದ ಕೆಲಸವನ್ನು ಮಾಡುತ್ತಿರುವ ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು ಹಾಗೆ ಇಂತಹ ಪಾವಿತ್ರ್ಯತೆ ತುಂಬಿದ ಕೆಲಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಕೂಡ ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯೂ ಆಗಿದೆ. ಒಂದು ಮಗುವಿನ ಭವಿಷ್ಯ ರೂಪಿಸುವಲ್ಲಿ ಅವರ ತಂದೆ ತಾಯಿಯಗಳ ಜವಾಬ್ದಾರಿಗಿಂತ ಶಿಕ್ಷಕರ ಜವಾಬ್ದಾರಿ ಅಧಿಕವಾಗಿರುತ್ತದೆ. ಹಾಗೆ ಗುರುವಾದವರು ಕೇವಲ ಶಾಲೆಯ ಪಠ್ಯ ಪುಸ್ತಕಗಳಲ್ಲಿರುವುದನ್ನು ವಿದ್ಯಾರ್ಥಿಗಳಿಗೆ ಮನನ ಮಾಡಿಸುವುದಷ್ಟೇ ಅಲ್ಲದೆ ದೇಶಕ್ಕೆ ಒಳಿತಾಗುವಂತ ನೀತಿಯುಕ್ತ ಹಾಗೂ ಮೌಲ್ಯಯುಕ್ತ ಜ್ಞಾನವನ್ನು ಬಿತ್ತುವುದರಿಂದ ಸಮಾಜಕ್ಕೆ ಉತ್ತಮ, ವಿಧೇಯ ಹಾಗೂ ಸಂಸ್ಕಾರಯುಕ್ತ ಹಾಗೂ ನೀತಿಯುಕ್ತ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯವಾಗುವುದಲ್ಲದೆ ಉತ್ತಮ ಸಂಸ್ಕಾರವಂತರಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳು ದೇಶಕ್ಕೆ ಅಮೂಲ್ಯ ಸಂಪತ್ತಾಗುವುದಂತೂ ಖಂಡಿತಾ ಸತ್ಯ.
ಶೋಭಾ ಆರ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ