ಸೆ.2 ವಿಶ್ವ ತೆಂಗಿನ ದಿನ: ಬಹೂಪಯೋಗಿ ತೆಂಗಿನ ಮೌಲ್ಯವರ್ಧನೆಯಿಂದ ಬೆಳೆಗಾರರ ಬದುಕು ಹಸನಾಗಿಸಲಿ

Upayuktha
0

ಬಲ್ಲವರೇ ಬಲ್ಲರು, ತೆಂಗಿನ ಮರ ಕೇವಲ ಮರವಲ್ಲ, ಕಲ್ಪವೃಕ್ಷ



ಕಲ್ಪವೃಕ್ಷ-ಬಹೂಪಯೋಗಿ ತೆಂಗು

ಬಲ್ಲವರೇ ಬಲ್ಲರು, ತೆಂಗಿನ ಮರ ಕೇವಲ ಮರವಲ್ಲ, ಅದೊಂದು “ಕಲ್ಪವೃಕ್ಷ”. ತೆಂಗಿನ ಗಿಡದ ಬೇರು, ಕಾಂಡ, ಹೂ, ಎಲೆ, ಕಾಯಿ, ಚಿಪ್ಪು, ನಾರು ಎಲ್ಲವೂ ಮನುಷ್ಯನ ಉಪಯೋಗಕ್ಕೆ ಬರುತ್ತದೆ. ಆಹಾರಕ್ಕೆ ಹೆಚ್ಚಿನ ರುಚಿಯನ್ನು ನೀಡುವ ತೆಂಗಿನ ಕಾಯಿಯ ತಿರುಳನ್ನು ಒಣಗಿಸಿ, ಸಂಸ್ಕರಿಸಿ ಚಾಕೋಲೇಟ್, ಬಿಸ್ಕಿಟ್ ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ತೆಂಗಿನ ಎಣ್ಣೆಯನ್ನು ಆಯುರ್ವೇದ ತೈಲ, ಸಾಬೂನು ಹಾಗೂ ಸೌಂದರ್ಯವರ್ಧಕಗಳ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಆಹಾರಕ್ಕೆ ಹೆಚ್ಚಿನ ರುಚಿಯನ್ನು ನೀಡುವ ತೆಂಗಿನ ಕಾಯಿಯ ತಿರುಳನ್ನು ಒಣಗಿಸಿ, ಸಂಸ್ಕರಿಸಿ ಚಾಕೋಲೇಟ್, ಬಿಸ್ಕಿಟ್ ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ತೆಂಗಿನ ಹಿಂಡಿ ಜಾನುವಾರುಗಳಿಗೆ ಪೌಷ್ಟಿಕ ಮೇವಾಗಿದೆ. ತೆಂಗಿನ ಮರದಿಂದ ಕಂಬ, ಚಿಪ್ಪಿನಿಂದ ಕರಕುಶಲ ವಸ್ತುಗಳ ತಯಾರಿ, ಇದ್ದಿಲು ತಯಾರಿ, ಸೋಗೆಯಿಂದ ಚಪ್ಪರ, ಕಸಬರಿಕೆ ತಯಾರಿ, ತೆಂಗಿನ ನಾರಿನಿಂದ ಹಗ್ಗ, ಚಾಪೆ ಹೀಗೆ ಹೀಗೆ ತೆಂಗಿನ ಕಾಯಿ ಹಾಗೂ ಮರದ ಪ್ರತಿಯೊಂದು ಭಾಗವೂ ಬಹೂಪಯೋಗಿ.


ವಿಶ್ವ ತೆಂಗಿನಕಾಯಿ ದಿನ 

ವಿಶ್ಯಾದ್ಯಂತ ಸೆ.2 ವಿಶ್ವ ತೆಂಗಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಿಪ್ಪೆ ಹಾಗೂ ಗೆರಟೆಯೊಳಗಿನ ಮುಷ್ಠಿ ಗಾತ್ರದ ತೆಂಗು ಉಪಬೆಳೆಯಾದರೂ  ಅದು ರೈತರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿದೆ. ಈ ವರ್ಷದ ಘೋಷವಾಕ್ಯ 'ತೆಂಗಿನಕಾಯಿಗಳು: ಜೀವನವನ್ನು ಪರಿವರ್ತಿಸುವುದು'. ತಮ್ಮ ಜೀವನೋಪಾಯ ಮತ್ತು ಆರ್ಥಿಕತೆಗಾಗಿ ತೆಂಗಿನ ಕೃಷಿಯನ್ನು ಹೆಚ್ಚು ಅವಲಂಬಿಸಿರುವ ದೇಶಗಳಿಗೆ ಈ ದಿನವು ವಿಶೇಷವಾಗಿ ಮುಖ್ಯವಾಗಿದೆ.


ತೆಂಗಿನಕಾಯಿ ಭಾರತದಲ್ಲಿ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ. ದೇಶವು ಪ್ರತಿವರ್ಷ ಸಾಕಷ್ಟು ತೆಂಗಿನಕಾಯಿಯನ್ನು ಉತ್ಪಾದಿಸುತ್ತದೆ. ತೆಂಗಿನಕಾಯಿಯಿಂದ ಸಿಹಿ ತಿನಿಸುಗಳನ್ನು ತಯಾರಿಸುವುದರಿಂದ ಹಿಡಿದು ಹಗ್ಗಗಳನ್ನು ತಯಾರಿಸಲು ತೆಂಗಿನಕಾಯಿಯನ್ನು ಬಳಸುತ್ತಾರೆ. ತೆಂಗಿನಕಾಯಿಯ ಪ್ರತಿಯೊಂದು ತುಂಡನ್ನು ಬಳಸಬಹುದು, ಮತ್ತು ಇದು ಹೆಚ್ಚು ಪೌಷ್ಟಿಕಾಂಶದ ಆಹಾರವಾಗಿದೆ. ಪ್ರತಿ ವರ್ಷ, ಈ ಹಣ್ಣಿನ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಜಾಗೃತಿ ಮೂಡಿಸಲು ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ತಮಿಳುನಾಡು, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ತೆಂಗು ಬೆಳೆಯುವ ಪ್ರಮುಖ ರಾಜ್ಯಗಳು.


ತೆಂಗು ಅತ್ಯಂತ ಪ್ರಾಚೀನವಾದ ಹಾಗೂ ಬಹು ಉಪಯೋಗಿ ಉಷ್ಣವಲಯದ ಬೆಳೆ. ತೆಂಗು ಬೆಳೆಯುವ ದೇಶಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ ಹೊಂದಿದ್ದು, ಇಂಡೋನೇಷ್ಯಾ ಹಾಗೂ ಫಿಲಿಫೈನ್ಸ್ ಮೊದಲೆರಡು ಸ್ಥಾನ ಪಡೆದಿವೆ. ಭಾರತದಲ್ಲಿ ತೆಂಗಿನ ಬೆಳೆಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು, ಕೇರಳ ಎರಡನೇ ಸ್ಥಾನದಲ್ಲಿದ್ದು ಕರ್ನಾಟಕ ಮೂರನೇ ಸ್ಥಾನದಲ್ಲಿದೆ.


ಪಾರಂಪರಿಕ ಗೌರವ

ಕೃಷಿ ಪ್ರಧಾನವಾದ ನಮ್ಮ ನಾಡಿನಲ್ಲಿ ಬೆಳೆದ ಫಲವಸ್ತುಗಳಿಗೆ ರಾಜಮರ್ಯಾದೆ. ದೇವಸ್ಥಾನದ ಹೊರೆಕಾಣಿಕೆ, ಶುಭ ಸಮಾರಂಭ ಹಾಗೂ ವಿಶೇಷ ದಿನಗಳಲ್ಲಿ ತೆಂಗಿನದೇ ಪಾರುಪತ್ಯ. ಹೊಸ ಅಕ್ಕಿ ಊಟದಂದು ತೆಂಗಿನ ತುರಿ ಕಡೆದು ಹಾಕಿದ ಊಟವೇ ಆಗಬೇಕು. ಪಾಯಸ ಯಾವುದಾದರೇನು, ಅದರ ರುಚಿ ಹೆಚ್ಚಿಸಲು ತೆಂಗಿನ ಹಾಲೇ ಬೇಕು.


ನಂಬಿಕೆ ನಡವಳಿಕೆಗಳಲ್ಲೂ ತೆಂಗಿಗೆ ಅಗ್ರಸ್ಥಾನ. ಅರಿಶಿನ ಕುಂಕುಮವನ್ನು ತೆಂಗಿನಕಾಯಿ ಸಮೇತ ಕೊಡುವುದು ಮಂಗಳಕರ ಎಂಬುದು ಜನಪದ ನಂಬಿಕೆ. ಪೂಜಿಸಿ ಬಿಳಿಬಟ್ಟೆಯಲ್ಲಿ ಸುತ್ತಿ ಮನೆಯ ಮಾಡಿಗೆ ಕಟ್ಟಿದ ತೆಂಗಿನಕಾಯಿ ದೈವೀ ಶಕ್ತಿಯ ರೂಪದಲ್ಲಿ ರಕ್ಷಣಾ ಕವಚವಾಗುತ್ತದೆ. ಚೌತಿಯ ಸಂಜೆ ಚಂದ್ರನ ನೋಡಿದರೆ ಪ್ರಾಯಶ್ಚಿತ್ತಕ್ಕಾಗಿ ತೆಂಗಿನ ಮರ ದರ್ಶನ, ಬೆಳಗೆದ್ದು ತೆಂಗಿನ ಮರದ ತುದಿ ನೋಡಿದರೆ ಶುಭವಾಗುವುದು, ಅಷ್ಟಮಿಯಂದು ತೆಂಗಿನ ಗಿಡ ನೆಟ್ಟರೆ ಅಭಿವೃದ್ದಿಯೆಂಬ ನಂಬಿಕೆಯೂ ಅಚಲವಾಗಿದೆ. ಮನೆಯಂಗಳದ ತೆಂಗಿನ ಗರಿಯ ಚಪ್ಪರ ಶುಭ ಸಮಾರಂಭದ ದ್ಯೋತಕ.


ಶ್ರೀಫಲ

ತೆಂಗಿನಕಾಯಿಗೆ ಸಂಸ್ಕೃತದಲ್ಲಿ “ಶ್ರೀಫಲ” ಎಂದು ಕರೆಯುತ್ತಾರೆ. ಶ್ರೀಫಲ ಎಂದರೆ ದೇವಹಣ್ಣು ಅಥವಾ ದೇವರ ಹಣ್ಣು ಎಂದರ್ಥ. ಹೀಗಾಗಿ ತೆಂಗಿನಕಾಯಿಯನ್ನು ಒಡೆಯುವುದರ ಭಾವಾರ್ಥ ಏನೆಂದರೆ ನಮ್ಮ ಅಹಂನ್ನು ಭೇದಿಸಿ ದೇವರ ಎದುರು ಶರಣಾಗುವುದು ಎಂದರ್ಥ. ಅಜ್ಞಾನ ಮತ್ತು ಅಹಂ ಗಳ ಪ್ರತೀಕವಾಗಿರುವ ತೆಂಗಿನಕಾಯಿಯ ಗಟ್ಟಿಯಾದ ಚಿಪ್ಪನ್ನು ಒಡೆದು ಆ ಮೂಲಕ ಅಂತಃಶುದ್ಧಿ ಹಾಗೂ ಜ್ಞಾನದ ಹೊಂಬೆಳಕಿಗೆ ದಾರಿಮಾಡಿಕೊಡುವುದು ಎಂಬುದೇ ತೆಂಗಿನಕಾಯಿಯನ್ನು ಒಡೆಯುವುದರ ಹಿಂದಿರುವ ತಾತ್ಪರ್ಯ. ಕಾಯಿಯನ್ನು ಒಡೆದು ಒಳಗಿನ ಬಿಳಿ ಪದರವನ್ನು ಕಂಡುಕೊಳ್ಳುವುದೇ ಜ್ಞಾನ ಹಾಗೂ ಆತ್ಮಶುದ್ಧಿಯನ್ನು ಸಾಧಿಸಿದ್ದರ ಸಂಕೇತ. ಶುಭ ಸಂಕೇತವಾದ. ಪೂರ್ಣಕುಂಭ ತೆಂಗಿನಕಾಯಿ ಇಲ್ಲದೆ ಪೂರ್ಣವಾಗುವುದಿಲ್ಲ.


ಹೃದಯಾಘಾತ-ತಪ್ಪು ಕಲ್ಪನೆ

ಉತ್ತಮ ಪೋಷಕಾಂಶಗಳಿರುವ ತೆಂಗಿನ ಎಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ ಎಂದು ಡಂಗುರ ಹೊಡೆದು ತೆಂಗಿನ ಎಣ್ಣೆಯನ್ನು ಬಳಸಲು ಭಯಪಡುವಂತೆ ದಿಗಿಲು ಹುಟ್ಟಿಸಿದ ಸನ್ನಿವೇಶದ ಹಿಂದೆ ತೃತೀಯ ಜಗತ್ತಿನ ಮೇಲೆ ಸೋಯಾಬೀನ್ ಎಣ್ಣೆಯನ್ನು ಹೇರುವ ಪಿತೂರಿ ಬೆಳಕಿಗೆ ಬರುತ್ತಿದೆ.


ತೆಂಗಿನ ಬೆಲೆಯ ಹಾವು ಏಣಿಯಾಟ

ಹಬ್ಬಗಳ ಸಂದರ್ಭದಲ್ಲಿ ತೆಂಗಿನಕಾಯಿ ವ್ಯಾಪಾರ ಜೋರಾಗಿ ನಡೆಯುತ್ತದೆ. ಈ ಸಂದರ್ಭಗಳಲ್ಲಿ ತೆಂಗಿನಕಾಯಿ ಬೆಲೆ ಸಾಮಾನ್ಯ ದಿನಕ್ಕಿಂತ ಹೆಚ್ಚಿರುತ್ತದೆ. ಇನ್ನೊಂದೆಡೆ ತೆಂಗಿನ ಎಣ್ಣೆ ಧಾರಣೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸಿತ ಕಂಡಿದ್ದು, ದೇಶದಲ್ಲಿ ತೆಂಗಿನಕಾಯಿ ಮತ್ತು ಕೊಬ್ಬರಿ ದರ ಕುಸಿಯಲು ಮುಖ್ಯ ಕಾರಣ. ವಿದೇಶಿ ಉತ್ಪಾದಕರು ಕಡಿಮೆ ದರದಲ್ಲಿ ಕಡಿಮೆ ಗುಣಮಟ್ಟದ ತೆಂಗಿನಪುಡಿಯನ್ನು ಭಾರತಕ್ಕೂ ಪೂರೈಸುತ್ತಿರುವುದರಿಂದ ಉತ್ತರ ಭಾರತದಲ್ಲಿ ಇಲ್ಲಿನ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. ತೆಂಗಿನಕಾಯಿಯ ಬೆಲೆಯ ಅಸ್ಥಿರತೆ ಬೆಳಗಾರನಿಗೆ ಕಗ್ಗಂಟಾಗಿದೆ.


ಕಷ್ಟಪಟ್ಟು ಬೆಳೆದ ತೆಂಗಿನಕಾಯಿಗಳನ್ನು ಮರದಿಂದ ಕೀಳಲು ಕೂಡಾ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಳಲು ಹಲವರದು. ಇದೀಗ ತೆಂಗಿನ ಮರ ಏರುವ ಕೈಗೆಟಕುವ ದರದ ನವ ನವೀನ ಸಾಧನಗಳ ಆವಿಷ್ಕಾರ ಆಗುತ್ತಿರುವುದು ಆಶಾದಾಯಕ ವಿಚಾರ. ಕೇರಳದಲ್ಲಿ ಇಂತಹ ಸುಲಭ ಸಾಧನಗಳ ಸಹಾಯದಿಂದ ಮಹಿಳೆಯರು ಕೂಡಾ ತೆಂಗಿನ ಮರವೇರಿ ಕಾಯಿ ಕೀಳುತ್ತಿರುವುದು ಸಾಮಾನ್ಯವಾಗಿದೆ. ಸಾಮಾನ್ಯ ರೈತರಿಗೆ ಅನುಕೂಲಕರವಾಗಿರುವ ವೈಜ್ಞಾನಿಕ ಆವಿಷ್ಕಾರಗಳು, ತೆಂಗಿನ ಮೌಲ್ಯವರ್ಧನೆ ಹಾಗು ಮೌಲ್ಯವರ್ದಿತ ಉತ್ಪನ್ನಗಳ ನೇರ ಮಾರಾಟ ಪ್ರಯತ್ನಗಳು ಸುಸ್ಥಿರ ಅಭಿವೃದ್ಧಿಯಲ್ಲಿ ದಿಟ್ಟ ಹೆಜ್ಜೆಗಳೇ ಸರಿ.


ಕಲ್ಪವೃಕ್ಷಕ್ಕೆ ಕಾಯಕಲ್ಪ-ಮೌಲ್ಯವರ್ಧನೆ

ಕೊಚ್ಚಿಯಲ್ಲಿರುವ ಭಾರತೀಯ ತೆಂಗು ಮಂಡಳಿ ಸುವಾಸಿತ ‘ಕುಡಿಯಲು ಸಿದ್ಧ’ ತೆಂಗಿನ ಹಾಲನ್ನು ವಿವಿಧ ಪರಿಮಳಗಳಲ್ಲಿ ಉತ್ಪಾದಿಸಿದೆ. ಫಿಲಿಫೈನ್ಸ್ ನಲ್ಲಿ ತೆಂಗಿನ ಮರದಿಂದ ತೆಂಗಿನ ಸಕ್ಕರೆ ಉತ್ಪಾದಿಸುತ್ತಾರೆ. ತೆಂಗಿನಪುಡಿ ಸೇರಿಸಿದ ಪಾನ್ ನಮ್ಮ ದೇಶದ ಪಾನ್ ಪ್ರಿಯರ ಉದರ ಸೇರುತ್ತಿದೆ. ಒಂದು ತೆಂಗಿನಕಾಯಿಯಿಂದ ಸುಮಾರು ಇಪ್ಪತ್ತು ಹೋಳಿಗೆಗಳನ್ನು ತಯಾರಿಸುತ್ತಾರೆ. ತೆಂಗಿನ ಕಾಯಿಯ ಅನ್ನ, ದೋಸೆ, ಬರ್ಫಿ ಜನಪ್ರಿಯವಾಗುತ್ತಿದೆ. ಕೇರಳದಲ್ಲಿ ಎಳನೀರು ಪ್ಯಾಕೇಜಿಂಗ್ ಉದ್ದಿಮೆಗಳು ತಲೆ ಎತ್ತಿವೆ. ಎಳನೀರಿನಲ್ಲಿರುವ ಗಂಜಿಯನ್ನು ತೆಗೆದು ಐಸ್ ಕ್ರೀಂನಲ್ಲಿ ಬಳಸುವ ಉದ್ದಿಮೆ ಯಶಸ್ಸನ್ನು ಕಂಡಿದೆ. ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರಿನ ತೆಂಗು ಬೆಳೆಗಾರರ ಸಂಘಟಿತ ಪ್ರಯತ್ನದ ಫಲವಾಗಿ ಆರಂಭವಾಗಿರುವ  “ಕೋಕನೆಟ್ ಕೆಫೆ” ಗಳು ತೆಂಗಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಹಕಸ್ನೇಹಿ ದರದಲ್ಲಿ ಮಾರಾಟ ಮಾಡುವ ಮೂಲಕ ಗಮನ ಸೆಳೆಯುತ್ತಿದೆ.


ಎಳನೀರು ಶಕ್ತಿಶಾಲಿ ಪೇಯ. ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾದಂತೆ ಎಳನೀರಿನ ಬಳಕೆ ಸಹಜವಾಗಿ ಹೆಚ್ಚಾಗುತ್ತಿದೆ. ಬಾಟ್ಲಿಯಲ್ಲಿ ಸಿಗುವ ಬಣ್ಣ ಬಣ್ಣದ ನೀರಿಗಿಂತ ಎಳನೀರು ಆರೋಗ್ಯದಾಯಕ  ಎನ್ನುವ ಕಾಳಜಿ ಹಾಗೂ ತಿಳುವಳಿಕೆ ಈಗೀಗ ಹೆಚ್ಚುತ್ತಿದೆ. ಕಲಬೆರಕೆ ದೊಡ್ಡ ಸವಾಲಾಗಿರುವ ಇಂದಿನ ದಿನಗಳಲ್ಲಿ ತೆಂಗಿನ ಬೆಳೆಗಾರರ ಸಂಸ್ಥೆಗಳೇ ತಾಜಾ ಮತ್ತು ವಿಶ್ವಾಸಾರ್ಹ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಿರುವುದು ಸ್ವಾಗತಾರ್ಹ.


“ಕೃಷಿತೋ ನಾಸ್ತಿ ದುರ್ಭಿಕ್ಷಂ” ನಾಣ್ಣುಡಿ ಸಾಕಾರವಾಗಲಿ

ತೆಂಗು ದಕ್ಷಿಣ ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮುಖ ಬಹು ಉಪಯೋಗಿ ವಾಣಿಜ್ಯ ಬೆಳೆ. ಸುಮಾರು 170 ಲಕ್ಷ ಜನರ ಜೀವನಕ್ಕೆ ಈ ಬೆಳೆ ಆಧಾರವಾಗಿದೆ. ವೈಜ್ಞಾನಿಕ ಸಂಶೋಧನೆಗಳು ಹಾಗೂ ಜನಜಾಗೃತಿ ಅಭಿಯಾನಗಳು ಕಲ್ಪವೃಕ್ಷಕ್ಕೆ ಕಾಯಕಲ್ಪ ನೀಡಲಿ. ತೆಂಗಿನ ಮರ ಇರುವವ ಬಡವನಲ್ಲ ಎಂಬ ಮಾತು ಸತ್ಯವಾಗಲಿ.


- ಡಾ. ಎ. ಜಯಕುಮಾರ ಶೆಟ್ಟಿ

ನಿವೃತ್ತ ಪ್ರಾಂಶುಪಾಲರು

ಶ್ರೀ.ಧ.ಮಂ. ಕಾಲೇಜು, ಉಜಿರೆ-574240

9448154001

ajkshetty@sdmcujire.in


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top