ಭಾರತ ವೈವಿಧ್ಯ ಕಲೆಗಳ ಬೀಡು
ನಮ್ಮ ಸೃಜನಾತ್ಮಕ ಅಭಿವ್ಯಕ್ತಿಯ ಕರಕುಶಲಗಳು ಶ್ರೀಮಂತ ಸಂಸ್ಕೃತಿಯ ಹೆಗ್ಗುರತು. ಭಾರತದ ಅಭಿವೃದ್ಧಿ ಯಾನದಲ್ಲಿ ಹಳ್ಳಿಗಳ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸುವುದು ಅಗತ್ಯ. ನುರಿತ ಕುಶಲಕರ್ಮಿಗಳು ಸ್ವಾವಲಂಬಿ ಭಾರತದ ನೈಜ ಚೈತನ್ಯದ ಸಂಕೇತಗಳು. ನಿಸರ್ಗದಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಕೈ ಹಾಗೂ ಸರಳ ಉಪಕರಣಗಳೊಂದಿಗೆ ತಯಾರಾಗುವ ವಿಶೇಷ ಕರಕುಶಲ ವಸ್ತುಗಳು ನಮ್ಮ ಗ್ರಾಮೀಣ ಬದುಕಿನೊಂದಿಗೆ ಹಾಸುಹೊಕ್ಕಾಗಿವೆ.
ಸ್ಥಳೀಯ ಕರಕುಶಲ ವಸ್ತುಗಳ ಉತ್ಪಾದನೆಯಲ್ಲಿ ಸಣ್ಣ ಕುಶಲಕರ್ಮಿಗಳ ಪಾತ್ರ ಮಹತ್ವದ್ದು. ತಮ್ಮ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಗುರು-ಶಿಷ್ಯ ಪರಂಪರೆಯ ಕುಶಲಕರ್ಮಿಗಳ ಮತ್ತು ಕಲೆಗಾರರ ತಲತಲಾಂತರಗಳಿಂದ ತಮ್ಮ ಮೂಲಕಸುಬಿನಲ್ಲಿ ತೊಡಗಿಸಿಕೊಂಡು ನಮ್ಮ ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ.
ನಮ್ಮ ಶ್ರೀಮಂತ ವೈಭವದ ಸಂಸ್ಕೃತಿಯ ಬುನಾದಿಯೇ ಆದ ಮಣ್ಣಿನ ಪರಿಕರಗಳು, ಶಿಲಾಶಿಲ್ಪಗಳು, ಕಾಷ್ಠ ಶಿಲ್ಪಗಳು, ಗೊಂಬೆಗಳು, ಬೆತ್ತದ ಬಟ್ಟ ಚಾಪೆಗಳು ಹೀಗೆ ಭಿನ್ನವಾದ ಆಲಂಕಾರಿಕ ಹಾಗೂ ನಿತ್ಯೋಪಯೋಗ ವಸ್ತುಗಳು ಇಂದು ಮರೆಯಾಗುತ್ತದೆ.
ನಮ್ಮ ರಾಜ್ಯದಲ್ಲೇ ಕರಕುಶಲ ಕಲೆಗಳಲ್ಲಿ ವೈವಿಧ್ಯ ಮೇಳೈಸಿದೆ. ಚಿತ್ರಕಲೆ, ಕುಂಭಕಲೆ, ಮರದ ಕೆತ್ತನೆ, ಕಲ್ಲು ಕೆತ್ತನೆ, ಲೋಹ ಶಿಲ್ಪ, ಆಭರಣಗಳ ತಯಾರಿಕೆ, ಮಣ್ಣಿನ ಮೂರ್ತಿ, ಮಡಕೆ-ಕುಡಿಕೆಗಳ ತಯಾರಿಕೆ, ದಂತ ಕೆತ್ತನೆ, ಜಾನಪದ ಗೊಂಬೆ, ಕೈಮಗ್ಗ, ಕಸೂತಿ ಕೆಲಸ, ಆಟಿಕೆ, ಬುಟ್ಟಿ, ಚಾಪೆ ಹೆಣೆಯುವುದು ಹೀಗೆ ಪಟ್ಟಿ ಮುಂದುವರಿಯುತ್ತದೆ.
ಗುಡಿಕೈಗಾರಿಕೆ, ಹಸ್ತಶಿಲ್ಪ, ಕರಕುಶಲ ಕಲೆ ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಇದೊಂದು ಸೃಜನಾತ್ಮಕ ಅಭಿವ್ಯಕ್ತಿ. ಏಕಾಗ್ರತೆ, ನಿಪಣತೆ ಬೇಡುವ ಪಾರಂಪರಕವಾಗಿ ಬಂದಿರುವ ಈ ಕಲೆಗಳು ಇಂದಿನ ಯಂತ್ರ ಸಂಸ್ಕೃತಿಯ ಸ್ಪರ್ಧಾತ್ಮಕ ಮಾರುಕಟ್ಟೆ ಯುಗದಲ್ಲಿ ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದು ಹಲವಾರು ಚಟುವಟಿಕೆಗಳು ಅಳಿವಿನ ಅಂಚಿನಲ್ಲಿದೆ. ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಈ ಕಸುಬುಗಳಿಗೆ ತಂತ್ರಜ್ಞಾನದ ಲೇಪ ಬೇಕು.
ಆಧುನಿಕ ಯುಗದಲ್ಲೂ ತಮ್ಮ ಕುಲಕಸುಬನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವವರ ಬದುಕು ದುಸ್ತರವಾಗಿದೆ. ಆಧುನಿಕತೆಯ ಭರಾಟೆಯ ನಡುವೆ ಗ್ರಾಮೀಣ ಕುಲಕಸುಬುಗಳು ನೇಪಥ್ಯಕ್ಕೆ ಸರಿಯುತ್ತಿವೆ. ಇಂದು ಇವರ ಜೀವನವೂ ಡೋಲಾಯಮಾನ ಸ್ಥಿತಿಯಲ್ಲಿದೆ. ಜಾಗತಿಕರಣದ ಫಲವಾಗಿ ಕುಲಕಸುಬುಗಳು ಇಂದು ವಿನಾಶದ ಅಂಚಿಗೆ ತಲುಪುತ್ತಿದ್ದು, ಸಾವಿರಾರು ಕುಟುಂಬಗಳಿಗೆ ಕೈ ಕೆಲಸವಿಲ್ಲದೆ, ಮಾಡಲು ಬೇರೆ ಕೆಲಸವೂ ಬಾರದೇ ಅತ್ತ ಹಾವು ಇತ್ತ ಹುಲಿ ಎಂಬ ಸ್ಥಿತಿ ಅವರದ್ದಾಗಿದೆ.
ರಕ್ತಗತವಾಗಿ ಬಂದ ಕೌಶಲಗಳನ್ನು ಬಳಸಿ ಕಸುಬು ಮಂದುವರಿಸುತ್ತಿದ್ದ ಕರಕುಶಲಿಗಳಿಗೆ ನೂತನ ಆವಿಷ್ಕಾರಗಳೇ ಆತಂಕವನ್ನು ತಂದೊಡ್ಡಿದೆ. ಯುವಕರು ಕುಲಕಸುಬಿಗೆ ಬೆನ್ನು ಹಾಕಿ ಇತರ ಉದ್ಯೋಗಗಳನ್ನು ಸಹಜವಾಗಿ ಅರಸುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಪ್ರಗತಿಪರ ಭಾರತ ಕಟ್ಟುವಲ್ಲಿ ಕರಕುಶಲಕರ್ಮಿಗಳ ಪಾತ್ರವನ್ನು ಗುರುತಿಸಿ, ಅಗತ್ಯ ಬೆಂಬಲ ನೀಡಿ ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ತರಬೇಕಾದ ಅಗತ್ಯತೆ ಇದೆ.
ಪಿಎಂ ವಿಶ್ವಕರ್ಮ ಯೋಜನೆ
ವಿಶ್ವಕರ್ಮ ಮಹೋತ್ಸವದ ದಿನ (ಸೆಪ್ಟೆಂಬರ್ 18) ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ವಿಶೇಷವಾಗಿ ಹಿಂದುಳಿದ ಸಮುದಾಯಗಳಿಗೆ ಪ್ರಯೋಜನವಾಗುವ ದೇಶದ ಬೃಹತ್ ಸಾಮಾಜಿಕ ಭದ್ರತಾ ಕಾರ್ಯಕ್ರಮ 'ಪಿ.ಎಂ ವಿಶ್ವಕರ್ಮ' ಯೋಜನೆಗೆ ಯಶೋಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಶ್ರೀಮಂತ ಕರಕುಶಲ ಸಂಪ್ರದಾಯಗಳನ್ನು ಉಳಿಸುವ ಗುರಿ ಹೊಂದಿದೆ. ಕುಶಲಕರ್ಮಿಗಳು ಮತ್ತು ಕರಕುಶಲ ಮೌಲ್ಯ ಸರಪಳಿಯ ಭಾಗವಾದಾಗ ಅವರನ್ನು ಇನ್ನಷ್ಟು ಬಲಪಡಿಸಬಹುದು ಮತ್ತು ಅವರಲ್ಲಿ ಅನೇಕರು ನಮ್ಮ ಎಂಎಸ್ಎಂಇ ವಲಯಕ್ಕೆ ಪೂರೈಕೆದಾರರು ಮತ್ತು ಉತ್ಪಾದಕರಾಗಬಹುದು. ಈ ಯೋಜನೆ ಸ್ಥಳೀಯ ಕೈಗಾರಿಕೆಗಳಿಗೆ ಬೆಂಬಲ ನೀಡಲಿದೆ ಮತ್ತು ಹಣಕಾಸು ಒಳಗೊಳ್ಳುವಿಕೆಗೆ ಉತ್ತೇಜನ ಕೊಡಲಿದೆ, ಲಿಂಗ ಸಮಾನತೆ ಮತ್ತು ಸಶಕ್ತ ಹಾಗೂ ಒಳಗೊಳ್ಳುವ ಆರ್ಥಿಕತೆಯತ್ತ ಹೆಜ್ಜೆಯನ್ನು ಬಲಪಡಿಸುತ್ತದೆ.
ಕುಶಲಕರ್ಮಿಗಳ ಉತ್ಪಾದನಾ ಗುಣಮಟ್ಟವನ್ನು ಸುಧಾರಿಸುವುದರೊಂದಿಗೆ ಅವರ ಉತ್ಪನ್ನಗಳು ಮತ್ತು ಸೇವೆಗಳ ವ್ಯಾಪ್ತಿಯನ್ನು ಜಾಗತಿಕವಾಗಿ ವಿಸ್ತರಣ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಪಿಎಂ ವಿಶ್ವಕರ್ಮ ಯೋಜನೆಯ ಪಕ್ಷಿನೋಟ: ಗಾತ್ರ ಮತ್ತು ವ್ಯಾಪ್ತಿ
ಕುಟುಂಬ ಆಧಾರಿತ ಸಾಂಪ್ರದಾಯಿಕ ಕೌಶಲ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಈ ಯೋಜನೆ ಹಣಕಾಸು ವರ್ಷ 2023-24 ರಿಂದ ಹಣಕಾಸು ವರ್ಷ 2027-28 ರ ಐದು ವರ್ಷಗಳ ಅವಧಿಯಲ್ಲಿ ರೂ.13,000 ಕೋಟಿಯನ್ನು ವಿನಿಯೋಗಿಸಲಿದೆ.
ಈ ಯೋಜನೆಯಡಿ 15 ದಿನಗಳ ತರಬೇತಿ ನೀಡಿ ವಾರ್ಷಿಕ ಶೇ.5 ರ ಬಡ್ಡಿದರದಲ್ಲಿ ರೂ. ಒಂದು ಲಕ್ಷದವರೆಗೆ ಸಾಲ ನೀಡುವ ವ್ಯವಸ್ಥೆ ಈಗ ಇದೆ. ನಂತರ ಹಂತ ಹಂತವಾಗಿ ರೂ.2 ಲಕ್ಷ ನೀಡುವ ವ್ಯವಸ್ಥೆ ಇದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ವ್ಯವಸ್ಥೆ ಇದೆ. ಈ ಯೋಜನೆಯನ್ನು ಮುಖ್ಯವಾಗ ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಸಹಾಯ ಮಾಡುವ ದೃಷ್ಠಿಯಂದ ಆರಂಭ ಮಾಡಲಾಗಿದೆ.
ಈ ಯೋಜನೆಯು ಆರಂಭಿಕವಾಗಿ ಮರಗೆಲಸ ಮಾಡುವವರು, ದೋಣಿ ತಯಾರಕರು, ಶಸ್ತ್ರಕಾರರು, ಕಮ್ಮಾರರು, ಬೀಗ ಮತ್ತು ಕೀಲಿ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಕಲ್ಲು ಒಡೆಯುವವರು, ಚಮ್ಮಾರರು, ಮೇಸ್ತ್ರಿಗಳು, ಬುಟ್ಟಿ ಹೆಣೆಯುವವರು, ಬೊಂಬೆ ತಯಾರಿಸುವವರು, ಕ್ಷೌರಿಕರು, ಹೂಮಾಲೆ ತಯಾರಕರು, ಅಗಸರು, ದರ್ಜಿಗಳು, ಮೀನಿನ ಬಲೆ ತಯಾರಕರು ಮೊದಲಾದ 18 ಸಾಂಪ್ರದಾಯಿಕ ಚಟುವಟಿಕೆಗಳಿಗೆ ಹಣಕಾಸಿನ, ಕೌಶಲವರ್ಧನೆ ಹಾಗೂ ಮಾರುಕಟ್ಟೆಯ ಬೆಂಬಲವನ್ನು ಒದಗಿಸುತ್ತದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸಾಂಪ್ರದಾಯಿಕ ಕಲೆಗಳನ್ನೂ ಈ ಯೋಜನೆಯ ವ್ಯಾಪ್ತಿಗೆ ತರುವ ಸಾಧ್ಯತೆ ಇದೆ.
ಪಟ್ಟಿ ಮಾಡಲಾಗಿರುವ ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಯೋಜನೆಯ ಪೋರ್ಟಲ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಿಎಂ ವಿಶ್ವಕರ್ಮ ಪೋರ್ಟಲ್ ಆಧಾರಿತ ಬಯೋಮೆಟ್ರಿಕ್ ಬಳಸಿ ನೋಂದಣಿ ಮಾಡಲಾಗುತ್ತದೆ.ಅದಾದ ಬಳಿಕ ಯೋಜನೆಯ ಪ್ರಮಾಣಪತ್ರ, ಗುರುತುಪತ್ರ ಸಿಗುತ್ತದೆ.
ಫಲಾನುಭವಿಗಳಿಗೆ 15,000 ರೂ ಮೊತ್ತದ ಟೂಲ್ಕಿಟ್ ಸಿಗುತ್ತದೆ. ನೊಂದಾಯಿಸಿಕೊಂಡವರಿಗೆ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಮೂಲ ತರಬೇತಿ ಮತ್ತು ಉನ್ನತ ಮಟ್ಟದ ತರಬೇತಿಯನ್ನು ಕೊಡಲಾಗುತ್ತದೆ. ಇವೆಲ್ಲವೂ ಉಚಿತವಾಗಿರುತ್ತದೆ. ತರಬೇತಿ ಸಂದರ್ಭದಲ್ಲಿ ರೂ.15000 ಗೌರವಧನ ನೀಡಲಾಗುವುದು. ತರಬೇತಿಯಷ್ಟೇ ಅಲ್ಲದೇ 10,000 ರೂನಿಂದ 10 ಲಕ್ಷ ರೂವರೆಗೆ ಹಣಕಾಸು ನೆರವನ್ನೂ ನೀಡಲಾಗುತ್ತದೆ.
ಯೋಜನೆಯ ಮೊದಲ ಹಂತದಲ್ಲಿ ಕುಶಲಕರ್ಮಿಗಳಿಗೆ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಲಲು ಶೇ. 5ರ ಬಡ್ಡಿದರದಲ್ಲಿ 1 ಲಕ್ಷ ರೂವರೆಗೂ ಸಾಲ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಅದೇ ಬಡ್ಡಿದರದಲ್ಲಿ 2 ಲಕ್ಷ ರೂವರೆಗೆ ಜಾಮೀನುರಹಿತ ಸಾಲ ಕೊಡಲಾಗುತ್ತದೆ. ಕುಶಲಕರ್ಮಿಗಳಿಗೆ ಡಿಜಿಟಲ್ ವ್ಯವಹಾರಕ್ಕೆ ಬೆಂಬಲ ಸಿಗಲಿದೆ. ಡಿಜಿಟಲ್ ವ್ಯವಹಾರದ ಉತ್ತೇಜಕವಾಗಿ ಪ್ರತಿ ತಿಂಗಳು ನೂರು ರೂಪಾಯಿವರೆಗಿನ ವ್ಯವಹಾರಗಳಿಗೆ ಒಂದು ರೂಪಾಯಿ ಇನ್ಸೆಂಟಿವ್ ಕೊಡಲಿದೆ.
ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸುವುದರ ಮೇಲೆ ಈ ಯೋಜನೆಯು ಕೇಂದ್ರೀಕರಿಸುತ್ತದೆ. ಇದು ಆರೋಗ್ಯ ವಿಮಾ ರಕ್ಷಣೆ ಮತ್ತು ನಿವೃತ್ತಿ ವಯಸ್ಸಿನ ನಂತರ ಸ್ಥಿರ ಪಿಂಚಣಿ ಬೆಂಬಲವನ್ನು ಒಳಗೊಂಡಿರುತ್ತದೆ.
ಆತ್ಮನಿರ್ಭರ ಭಾರತಕ್ಕೆ ಪೂರಕವಾದ ಉದಾತ್ತ ಆಶಯ
ಆತ್ಮನಿರ್ಭರ ಭಾರತ ಸಂಕಲ್ಪದಡಿ ರೂಪುಗೊಂಡಿರುವ ಈ ಯೋಜನೆ ಕರಕುಶಲ ಉತ್ಪನ್ನಗಳ ತಯಾರಿಯಲ್ಲಿ ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳುವುದರ ಜೊತೆಜೊತೆಗೆ ಆಧುನಿಕ ಸ್ಪರ್ಷವನ್ನು ನೀಡುವುದು ಹಾಗೂ ಈ ಮೂಲಕ ಯುವಪೀಳಿಗೆಯನ್ನು ಈ ವೃತ್ತಿಗಳಲ್ಲಿಯೇ ಮುಂದವರಿಯುವಂತೆ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ಧೇಶ. ಕುಶಲಕರ್ಮಿಗಳಿಗೆ ಹಣಕಾಸಿನ ನೆರವಿನೊಂದಿಗೆ ಪ್ರಾಚೀನ ಕರಕುಶಲತೆಗಳು, ಸಂಸ್ಕೃತಿ, ಸ್ಥಳೀಯ ಉತ್ಪನ್ನಗಳಿಂದ ಶ್ರೀಮಂತವಾಗಿರುವ ನಮ್ಮ ಪರಂಪರೆಯನ್ನು ಸಂರಕ್ಷಿಸಿ, ಸಂವರ್ಧನೆ ಮಾಡುವ ಉದಾತ್ತ ಆಶಯ ಹೊಂದಿದೆ.
ಬೆಳವಣಿಗೆಯ ಶಕ್ತಿಶಾಲಿ ಅಂಶಗಳಾದ ಆರ್ಥಿಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಗುರಿಯೊಂದಿಗೆ ಭಾರತವು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ಕುಶಲಕರ್ಮಿಗಳ ಬದುಕು ಹಸನಾಗಿಸುವುದಲ್ಲದೇ, ಭಾರತದ ಸಾಂಪ್ರದಾಯಿಕ ಕಲಾ ಶ್ರೀಮಂತಿಕೆ ಇನ್ನಷ್ಟು ಉಜ್ವಲಗೊಳ್ಳಲು ಹಾಗೂ ಜಾಗತಿಕ ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸಲು ಇದು ನೆರವಾಗಲಿದೆ.
ಇದು ಕುಶಲಕರ್ಮಿ ಉತ್ಪನ್ನಗಳ ಸ್ಪರ್ಧಾತ್ಮಕತೆ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಭಾರತೀಯ ಕರಕುಶಲ ವಸ್ತುಗಳು ಪರಿಸರ ಸ್ನೇಹಿ ಆಯ್ಕೆಯನ್ನು ಪ್ರಸ್ತುತಪಡಿಸುತ್ತವೆ ಹಾಗೂ ಕಡಿಮೆ ಇಂಗಾಲದ ಹೆಜ್ಜೆಗುರುತನ್ನು ನೀಡುತ್ತವೆ.
ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಉಳಿಸಿ, ಅಂಚಿನಲ್ಲಿರುವ ಕರಕುಶಲ ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿ ಒಳಗೊಳ್ಳುವ ಬೆಳವಣಿಗೆ ಮತ್ತು ಸಬಲೀಕರಣವನ್ನು ಉತ್ತೇಜಿಸಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಗುರಿ ಸ್ವಾಗತಾರ್ಹ.
ಸಾಂಪ್ರದಾಯಿಕ ಕಲಾ ಶ್ರೀಮಂತಿಕೆಯ ಪುನರುಜ್ಜೀವನ ಅಭಿವೃದ್ದಿಯ ಅವಕಾಶಗಳ ಆಗರವೇ ಸೈ. ಒಂದೊಮ್ಮೆ ಸಮೃದ್ಧವಾಗಿದ್ದ ಸುಸ್ಥಿರ ಅಭಿವೃದ್ಧಿಯ ಕರಕುಶಲ ಕ್ಷೇತ್ರ ಈಗ ಮಗದೊಮ್ಮೆ ಪ್ರಭುತ್ವದ ಬೆಂಬಲದಿಂದ ಮತ್ತೆ ಗತವೈಭವಕ್ಕೆ ಮರಳುವಂತಾಗಲಿ.

- ಡಾ.ಎ. ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ), ಉಜಿರೆ
9448154001
ajkshetty@sdmcujire.in
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


