ಚಿತ್ರ, ಲೇಖನ: ಡಾ. ವಸಂತಕುಮಾರ ಪೆರ್ಲ
ಸುಮಾರು 1200 ವರ್ಷಗಳ ಹಿಂದೆ ಉತ್ತರ ಭಾರತದ ಕಡೆಗೆ ತೆರಳುತ್ತಿದ್ದ ಶ್ರೀಶಂಕರಾಚಾರ್ಯರು ಗೋಕರ್ಣ ಮತ್ತು ಅಶೋಕೆ ಪರಿಸರದಲ್ಲಿ ಹವ್ಯಕರು ಪ್ರಬಲವಾಗಿದ್ದುದನ್ನು ಕಂಡರು. ಅಲ್ಲಿನ ಮನೋಹರ ತಾಣದಲ್ಲಿ ಪ್ರಕೃತಿವಿಶೇಷಗಳು ಮಿಳಿತವಾಗಿ ಶಕ್ತಿ ಮತ್ತು ಕಾರಣಿಕವು ಸಹಜವಾಗಿಯೇ ಇರುವುದನ್ನು ಗುರುತಿಸಿ ಅಲ್ಲಿ ಮಠ ಸ್ಥಾಪಿಸಲು ಸಂಕಲ್ಪಿಸಿದರು. ಅದರಂತೆ ರಘೂತ್ತಮ ಮಠವನ್ನು ಸ್ಥಾಪಿಸಿ ಅದರ ಮೊದಲ ಆಚಾರ್ಯರಾಗಿ ಶ್ರೀ ವಿದ್ಯಾನಂದಾಚಾರ್ಯರನ್ನು ಪೀಠಾಧಿಪತಿಗಳಾಗಿ ನೆಲೆಗೊಳಿಸಿದರು. ಆದರೆ ಕೆಲವು ತಲೆಮಾರುಗಳ ಅನಂತರ ಯಾವುದೋ ಕಾರಣದಿಂದ ಅಶೋಕೆಯನ್ನು ಬಿಟ್ಟು ಹೊಸನಗರಕ್ಕೆ ಮಠವು ಸ್ಥಾನಾಂತರಗೊಂಡಿತು. ಮುಂದಕ್ಕೆ ಅದು ಶ್ರೀರಾಮಚಂದ್ರಾಪುರ ಮಠವೆಂದು ಪ್ರಸಿದ್ಧವಾಯಿತು.
ಅಶೋಕೆಯು ಸುತ್ತಲೂ ಕಾಡು ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು ನಡುವೆ ತಗ್ಗಾಗಿ ಬಟ್ಟಲಿನಾಕಾರದಲ್ಲಿ ನಯನ ಮನೋಹರವಾಗಿರುವ ಒಂದು ಪ್ರಕೃತಿ ರಮಣೀಯ ಸ್ಥಳ. ಒಂದು ಪಾರ್ಶ್ವದಲ್ಲಿ ಓಂ ಕಿನಾರೆ (ಓಂ ಬೀಚ್) ಮತ್ತು ಇನ್ನೊಂದು ಪಾರ್ಶ್ವದಲ್ಲಿ ಗೋಕರ್ಣ ದೇವಾಲಯವಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯವು ಹವ್ಯಕರು ಅರ್ಚಿಸುವ ಮತ್ತು ಹವ್ಯಕರ ಪಾರುಪತ್ಯದಲ್ಲಿ ಇರುವ ದೇವಸ್ಥಾನವಾಗಿದೆ.
ದಾಖಲೆಗಳಲ್ಲಿ ಹವ್ಯಕರ ಮೂಲಮಠ ಅಶೋಕೆಯೆಂದು ಉಲ್ಲೇಖಿತವಾಗಿದ್ದರೂ ಅದರ ಅವಶೇಷಗಳು ಎಲ್ಲಿ ಇದೆ ಎಂಬ ಬಗ್ಗೆ ನಿಖರ ಮಾಹಿತಿಗಳಿರಲಿಲ್ಲ. ಶ್ರೀ ರಾಮಚಂದ್ರಾಪುರ ಮಠದ ಈಗಿನ ಯತಿವರ್ಯರಾದ ಶ್ರೀ ರಾಘವೇಶ್ವರ ಭಾರತೀ ಶ್ರೀಪಾದರ ಸತತ ಪರಿಶ್ರಮದಿಂದ ಆ ಸ್ಥಳವನ್ನು ಸುಮಾರು ಎರಡು ದಶಕಗಳ ಹಿಂದೆ ಪತ್ತೆಹಚ್ಚಿ ನಿಧಾನವಾಗಿ ಅಭಿವೃದ್ಧಿಪಡಿಸಿಕೊಂಡು ಬರಲಾಯಿತು. ಈಗಲೂ ಅಭಿವೃದ್ಧಿ ಕಾರ್ಯ ಮುಂದುವರಿಯುತ್ತಿದೆ. ಪ್ರಸ್ತುತ ಶಿವದೇವಸ್ಥಾನ, ಶ್ರೀಮಠದ ಕೇಂದ್ರಸ್ಥಾನ, ಕಚೇರಿ, ಅತಿಥಿಗೃಹ, ಗುರುನಿವಾಸ ಸಿದ್ಧಗೊಂಡಿದ್ದು, ಗುರುದೃಷ್ಟಿ ಎಂಬ ಸುಸಜ್ಜಿತ ಸಭಾಭವನದ ನಿರ್ಮಾಣಕಾರ್ಯ ಭರದಿಂದ ನಡೆಯುತ್ತಿದೆ. ಸಮೀಪದಲ್ಲೇ ಮಹತ್ವಾಕಾಂಕ್ಷೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠವೂ ಸಿದ್ಧಗೊಂಡು ಕಾರ್ಯಾಚರಿಸುತ್ತಿದೆ.
ಅಶೋಕೆಯಲ್ಲಿ ಹವ್ಯಕರ ಮೂಲಮಠ ಇತ್ತು ಎಂಬ ಬಗ್ಗೆ ಉಲ್ಲೇಖವಿದ್ದರೂ ಆ ಮಠವಿದ್ದ ಅಧಿಕೃತ ಪಂಚಾಂಗದ ಜಾಗ ಮತ್ತು ಅವಶೇಷಗಳು ಪತ್ತೆಯಾಗಿರಲಿಲ್ಲ. ಅದನ್ನು ಕೂಡ ಈಗ್ಗೆ ಕೆಲವರ್ಷಗಳ ಹಿಂದೆ ಪತ್ತೆ ಹಚ್ಚಲಾಗಿದ್ದು, ಆ ಸ್ಥಳವು ಈಗಿನ ಕಟ್ಟಡ ಸಮುಚ್ಚಯಗಳಿಂದ ಸುಮಾರು ಅರ್ಧ ಕಿಲೋಮೀಟರ್ ಪೂರ್ವದಲ್ಲಿ ಕಾಣ ಸಿಗುತ್ತಿದೆ. ಮೂಲಮಠದ ಪಂಚಾಂಗಕಲ್ಲುಗಳು, ಆವರಣಗೋಡೆಯ ಕಲ್ಲುಗಳು, ಮಠದ ಮುಂಭಾಗದಲ್ಲಿದ್ದ ಅಂಗಳ, ಮೂರು-ನಾಲ್ಕು ಗದ್ದೆಗಳು, ಕೆರೆ ಮೊದಲಾದ ಸ್ಥಳಗಳು ಕಂಡುಬರುತ್ತಿವೆ. ಪಂಚಾಂಗವಿದ್ದ ಜಾಗದಲ್ಲಿ ಈಗ ಕಾಡು ಬೆಳೆದುಕೊಂಡಿದೆ. ಈ ಜಾಗವನ್ನು ಕೂಡ ಅಭಿವೃದ್ಧಿಪಡಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಕಲ್ಯಾಣಿಯು (ಕೆರೆ) ಸಿದ್ಧಗೊಂಡಿದ್ದು ಶುದ್ಧವಾದ ನೀರು ಸಂಗ್ರಹಗೊಂಡು ಸುಂದರವಾಗಿ ಕಾಣುತ್ತಿದೆ. ದೇವಸ್ಥಾನ, ಅತಿಥಿಗೃಹ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಮಾಡುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಗದ್ದೆಯಲ್ಲಿ ಬತ್ತದ ಕೃಷಿ ಮಾಡಿ ಪುನರುಜ್ಜೀವನಗೊಳಿಸಬೇಕಾಗಿದೆ. ಹಸುಗಳನ್ನು ಸಾಕಿ ಅವುಗಳು ಓಡಾಡಿಕೊಂಡಿರುವಂತೆ ನೋಡಿಕೊಳ್ಳಬೇಕಾಗಿದೆ.
ಈ ಲೇಖಕ ಮತ್ತು ಉಪಯುಕ್ತ ನ್ಯೂಸ್ ನ ಚಂದ್ರಶೇಖರ ಕುಳಮರ್ವ ಇತ್ತೀಚೆಗೆ ಅಶೋಕೆಗೆ ಭೇಟಿಯಿತ್ತ ಸಂದರ್ಭದಲ್ಲಿ ಶ್ರೀಗುರುಗಳ ಅನುಗ್ರಹ ಪಡೆದು ಮೂಲಮಠವಿದ್ದ ಸ್ಥಳ ಸಂದರ್ಶನ ಮಾಡಲಾಯಿತು.
ಮೂಲಮಠವು ಅಭಿವೃದ್ಧಿ ಹೊಂದಿ ಒಂದು ಜಾಗೃತಸ್ಥಾನವಾಗಲಿ, ಭಕ್ತಾದಿಗಳಿಗೆ ಅನುಕೂಲವಾಗಲಿ ಎಂಬ ಹಾರೈಕೆಯೊಂದಿಗೆ ಹಿಂದಿರುಗಿದೆವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ