ಸನಾತನ ಧರ್ಮ ಭಾರತದ ಸರ್ವಶ್ರೇಷ್ಠ ಆವಿಷ್ಕಾರ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಜಗತ್ತಿನ ವಿವಿಧೆಡೆ ಹಲವು ಆವಿಷ್ಕಾರಗಳು ನಡೆದಿವೆ. ಆದರೆ ಭಾರತದ ಸರ್ವಶ್ರೇಷ್ಠ ಆವಿಷ್ಕಾರ ಎನಿಸಿದ ಸನಾತನ ಧರ್ಮಕ್ಕೆ ಯಾವುದೂ ಸಾಟಿಯಾಗಲಾರದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಸೋಮವಾರ ಹೊನ್ನಾವರ ಮಂಡಲದ ಹೊನ್ನಾವರ, ಭಟ್ಕಳ, ಮರವಂತೆ ಮತ್ತು ಭವತಾರಿಣಿ ವಲಯಗಳ ಶಿಷ್ಯಭಕ್ತರಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.


ಧರ್ಮ ಎನ್ನುವ ಪರಿಕಲ್ಪನೆ ವಿಶ್ವದ ಇತರ ಯಾವ ಭಾಗಗಳಲ್ಲೂ ಇಲ್ಲ. ಇದಕ್ಕೆ ಸಮಾನಾರ್ಥಕ ಪದಗಳಲ್ಲೂ ಭಾರತ ಹೊರತುಪಡಿಸಿ ಇತರ ದೇಶಭಾಷೆಗಳಲ್ಲಿಲ್ಲ. ಧರ್ಮದಿಂದಲೇ ಸುಖ, ಸಂತೋಷ, ನೆಮ್ಮದಿ ಸಾಧ್ಯ ಎನ್ನುವುದನ್ನು ನಮ್ಮ ದೇಶದ ಸಾಧಕರು ಸಾಧಿಸಿ ತೋರಿಸಿದ್ದಾರೆ. ಧರ್ಮ ನಮಗೆ ಬದುಕಿನ ಸರಿದಾರಿಯನ್ನು ತೋರಿಸಿಕೊಡುತ್ತದೆ ಎಂದು ವಿಶ್ಲೇಷಿಸಿದರು.


ಧರ್ಮವನ್ನು ಮಕ್ಕಳಲ್ಲಿ ಎಳೆ ವಯಸ್ಸಿನಿಂದಲೇ ತುಂಬುವ ಕಾರ್ಯ ನಮ್ಮಲ್ಲಿ ಆಗುತ್ತಿದೆ. ರಾಮಾಯಣದಲ್ಲಿ ಬರುವ ಒಂದೇ ಕುಟುಂಬದ ಮೂವರು ಅಂದರೆ ವಿಭೀಷಣ, ರಾವಣ, ಕುಂಭಕರ್ಣ ಸತ್ವ, ರಜೋ ಹಾಗೂ ತಮೋಗುಣಗಳಿಗೆ ಸಾಕ್ಷಿ. ಧರ್ಮಾಚರಣೆಯಿಂದ ಯಾವ ಫಲ ಸಿಗುತ್ತದೆ ಎನ್ನುವುದನ್ನೂ ನಮ್ಮ ಶಾಸ್ತ್ರ ಪುರಾಣಗಳು ನಮಗೆ ತಿಳಿಸಿವೆ. ನಮ್ಮ ಮನಸ್ಸು ಎಂದೂ ಧರ್ಮವನ್ನು ಬಿಟ್ಟು ಹೋಗಬಾರದು ಎಂದು ಕಿವಿಮಾತು ಹೇಳಿದರು.


"ಧರ್ಮವಿದ್ದರೆ ಸೋಲು, ಸಾವಿನ ಭಯ ನಮ್ಮನ್ನು ಕಾಡುವುದಿಲ್ಲ. ತಪ್ಪು ಮಾಡಿದವರಿಗಷ್ಟೇ ಭೀತಿ ಇರುತ್ತದೆ. ಆದ್ದರಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಸನಾತನ ಧರ್ಮವನ್ನು ಉಳಿಸಿಕೊಳ್ಳಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.


ಈ ಸನಾತನ ಧರ್ಮದ ಅವಿಭಾಜ್ಯ ಅಂಗವೇ ಮಠದ ವ್ಯವಸ್ಥೆ. ಮಠಗಳು ನಾವು ಮುನ್ನಡೆಯಬೇಕಾದ ದಾರಿಯನ್ನು ತೋರಿಸುತ್ತವೆ. ಇಡೀ ಸಮಾಜ ಪೀಠಕ್ಕೆ ನಿಷ್ಠವಾದಾಗ ಭವಿಷ್ಯ ಉಜ್ವಲವಾಗುತ್ತದೆ. ಮಠದ ಸಾನ್ನಿಧ್ಯವನ್ನು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯೇ ಸಂಘಟನೆ. ಶ್ರೀಮಠದ ಸೇವೆ ಮಾಡುವ ರಾಮಸೇವಕರ ದೊಡ್ಡ ಸೈನ್ಯವೇ ನಮ್ಮೊಂದಿಗಿದೆ. ಆದರೆ ಇವರು ರಕ್ತ ಚೆಲ್ಲುವ ಸೈನಿಕರಲ್ಲ. ಶಾಂತಿ- ಪ್ರೀತಿಯನ್ನು ಪಸರಿಸುವವರು. ಶ್ರೀಮಠದ ಕಾರ್ಯಕರ್ತರು ಇಡೀ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಆಶಿಸಿದರು.


ದೇವರಿಗೆ ನೈವೇದ್ಯ ಮಾಡಿದ್ದು ಪ್ರಸಾದವಾಗುವಂತೆ ನಮ್ಮ ಶ್ರಮ, ಸಮಯ ಮತ್ತು ಸಂಪನ್ಮೂಲದ ಒಂದಂಶ ಪೀಠಕ್ಕೆ ಸಮರ್ಪಣೆಯಾದಾಗ ಅದು ಪವಿತ್ರವಾಗುತ್ತದೆ. ಈ ಮನೋಭಾವವನ್ನು ಬೆಳೆಸಿಕೊಂಡು ಶ್ರೀಶಂಕರರ ಧ್ಯೇಯೋದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.


ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ, ಪ್ರಧಾನ ಕಾರ್ಯದರ್ಶಿ ಕೇಶವ ಕಿರಣ, ವಿವಿವಿ ಸಿಇಓ ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 20 ಮಂದಿಗೆ ಸಾಧಕ ಸನ್ಮಾನ ನೆರವೇರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸುಬ್ರಾಯ ಅಗ್ನಿಹೋತ್ರಿ, ವಿನಾಯಕ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top