ರಾಮಾಯಣ ಹಕ್ಕಿನೋಟ-40: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0

                                                                        ಶ್ರೀರಾಮಾಯನಮ:



ರಾಮ ಸೀತೆಯರು ತರಗೆಲೆಗಳ ಹಾಸುಗೆಯಲ್ಲಿ ಮಲಗಿದ ಬಳಿಕ ಸ್ವಲ್ಪ ದೂರದಲ್ಲಿ ಗುಹ- ಲಕ್ಷ್ಮಣರು ಮಾತುಕತೆಯಲ್ಲಿ ತಲ್ಲೀನರಾದರು.ಮಾತಿನ ಕೇಂದ್ರ ಬಿಂದು ರಾಮ.ಪಟ್ಟಾಭೀಷೇಕದ ಸಂದರ್ಭದಲ್ಲಿ ಆದಂತಹ ಆಗು ಹೋಗುಗಳನ್ನು ಲಕ್ಷ್ಮಣ ಹೇಳಿದನು.ರಾಮನ ಮತ್ತು ತನ್ನ ಗೆಳೆತನದ ಓಡಾಟದ ಬಗ್ಗೆ ಗುಹನು ಹೇಳಿದನು.ಇರುಳು ಕಳೆಯಿತು.ರಾಮನ ಆಜ್ಞೆಯಂತೆ ಗುಹನು ಗಂಗಾ ನದಿಯನ್ನು ದಾಟಲು ದೋಣಿಯನ್ನು ಸಿದ್ಧಪಡಿಸಿದನು.

ಈಗ ರಾಮನನ್ನು ಬೀಳ್ಕೊಡಲಿರುವ ಸರದಿ ಸುಮಂತ್ರನದು.ನೋವಿನಿಂದ 'ಕಿಮಹಂ ಕರವಾಣಿ?' ಮುಂದೆ ನಾನೇನು ಮಾಡಲಿ? ಎಂದು ವಿನೀತನಾಗಿ ರಾಮನಲ್ಲಿ ವಿನಂತಿಸಿದಾಗ ರಾಮನು ಸುಮಂತ್ರನ ಹೆಗಲ ಮೇಲೆ ಕೈಯಿಟ್ಟು -

. ನಾವು ಕಾಲ್ನಡಿಗೆಯಲ್ಲಿ ಕಾಡಲ್ಲಿ ಹೋಗುವೆವು.ನೀನು ರಥದಲ್ಲಿ ಅಯೋಧ್ಯೆಗೆ ಹಿಂದಿರುಗು.ಅಲ್ಲಿ-

. ರಾಜನನ್ನು ಚೆನ್ನಾಗಿ ನೋಡಿಕೋ

. ಕೈಕೇಯಿಯ ಪ್ರೀತಿಗಾಗಿ ರಾಜನು ಏನು ಮಾಡಬೇಕು ಎಂದು ಹೇಳುತ್ತಾನೋ ಅದನ್ನು ಮಾಡು

. ಅರಣ್ಯದಲ್ಲಿ ನಾವು ಮೂವರೂ ಸುಖವಾಗಿದ್ದೇವೆ.ಹದಿನಾಲ್ಕು ವರ್ಷಗಳು ಮುಗಿದ ಕೂಡಲೇ ಬರುತ್ತೇವೆ ಎಂದು ರಾಜನಲ್ಲಿ ಹೇಳು

. ತಾಯಂದಿರು ದು:ಖಿಸದಂತೆ ನೋಡಿಕೋ

.ರಾಜನ ಅಭಿಪ್ರಾಯದಂತೆ ಆದಷ್ಟು ಬೇಗನೆ ಭರತನನ್ನು ಕರೆಸಿ ಪಟ್ಟಗಟ್ಟಬೇಕು

."ರಾಜನನ್ನು ನೋಡುವ ರೀತಿಯಲ್ಲೇ ಪ್ರೀತಿ ವಿಶ್ವಾಸಗಳಿಂದ ತಾಯಂದಿರನ್ನೂ ನೋಡಬೇಕು"-ಈ ಸಂದೇಶವನ್ನು ಭರತನಿಗೆ ಹೇಳಬೇಕು..


ಹೀಗೆ ಹೇಳಿ ಸುಮಂತ್ರನನ್ನು ತೆರಳಲು ಹೇಳಿದನು.ಒಲ್ಲದ ಸುಮಂತ್ರನು "ಭೃತ್ಯ (ಸೇವಕ)ವತ್ಸಲ- ಭಕ್ತವತ್ಸಲನಾದ ನಿನ್ನನ್ನು ಬಿಟ್ಟು ನಾನು ತೆರಳಲಾರೆ"ಎಂದನು.ಆಗ ರಾಮನು ಮತ್ತೊಮ್ಮೆ ಅವನ ಕರ್ತವ್ಯವನ್ನು ನೆನಪಿಸಿ ಅಯೋಧ್ಯೆಗೆ ಹಿಂತಿರುಗಲು ಹೇಳಿದನು.ಒಲ್ಲದ ಮನದಿಂದ ಹೋಗಲಾರದೆ ಸುಮಂತ್ರನು ರಥದಲ್ಲಿ ಅಯೋಧ್ಯೆಗೆ ತೆರಳಿದನು.


ಇತ್ತ ರಾಮನು ಆಲದ ಮರದ ಹಾಲಿನಲ್ಲಿ ತನ್ನ ಮತ್ತು ಲಕ್ಷ್ಮಣನ ತಲೆಗೂದಲನ್ನು ಜಟೆಯನ್ನಾಗಿಸಿ ತಪಸ್ವಿಗಳ ರೂಪವನ್ನು ತಾಳಿ ದೋಣಿಯನ್ನು ಏರಿದರು.ಗಂಗೆಯ ಮಧ್ಯದಲ್ಲಿ ಸುರಕ್ಷಿತ ವನವಾಸಕ್ಕಾಗಿ,ಮರಳಿ ಬರುವುದಕ್ಕಾಗಿ ಗಂಗಾಪೂಜೆಯನ್ನು ನೆರವೇರಿಸಿದರು.ಗಂಗೆಯನ್ನು ದಾಟಿದರು.ಗುಹನನ್ನೂ ಬೀಳ್ಕೊಟ್ಟು ಜನರಿಲ್ಲದ ದಟ್ಟ ಕಾಡನ್ನರಸುತ್ತಾ ಕಾಡಿನಲ್ಲಿ ಹೆಜ್ಜೆ ಹಾಕತೊಡಗಿದರು.ಮುಂದೆ ಲಕ್ಷ್ಮಣ; ಮಧ್ಯೆ ಸೀತೆ; ಹಿಂದೆ ರಾಮ!


ಪಟ್ಟವೇರದಿದ್ದರೂ ರಾಮ ರಾಜನೇ -ಜನರ ಹೃದಯ ಸಿಂಹಾಸನದಲ್ಲಿ ಅವನು ಎಂದೋ ಕುಳಿತಾಗಿತ್ತು. ಅಲ್ಲಿಂದ ಕಿತ್ತೆಸೆಯಲು ಯಾರಿಂದಲೂ ಸಾಧ್ಯವಾಗಿಲ್ಲ!ಅಂದೂ!ಇಂದೂ!!ಮುಂದೂ!!!

ಅಲ್ಲವೇ?


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top