ರಾಮನು ದೋಣಿಯೇರಿ ಅತ್ತ ಹೋಗಲು ಗುಹ ಸುಮಂತ್ರರಿಬ್ಬರೂ ಕಣ್ಣಿಂದ ದೋಣಿ ಕಣ್ಮರೆಯಾಗುವ ತನಕ ನೋಡಿ ಶೋಕದ ನಿಟ್ಟುಸಿರಿನೊಂದಿಗೆ ಗುಹನ ನೆಲೆಗೆ ಹಿಂದಿರುಗಿದರು.ಅಲ್ಲಿ ಸುಮಂತ್ರನು ಮೂರುದಿನಗಳ ಕಾಲ ತಂಗಿದ್ದು ರಾಮನು ಚಿತ್ರಕೂಟದಲ್ಲಿ ವಾಸಿಸತೊಡಗಿದನೆಂಬ ಸುದ್ದಿಯನ್ನು ಗುಹನ ಸೇವಕರು ಬಂದು ಹೇಳಿದ ಬಳಿಕ ಅಯೋಧ್ಯೆಯತ್ತ ರಥದಲ್ಲಿ ಹೋದನು.
ರಥದ ಶಬ್ದದಿಂದಲೇ ರಾಮರಥ ಬಂತು ಎಂದು ತಿಳಿದ ಪುರಜನರು ರಾಮರಹಿತ ರಥವನ್ನು ನೋಡಿ ಗೋಳಾಡತೊಡಗಿದರು.ಮತ್ತೆ ರಾಮನು ವನವಾಸಕ್ಕೆ ಹೊರಟಾಗ ಆದ ರೋದನಗಳ ಪುನರಾವರ್ತನೆ! ಜನರಿಗೆ ಮೊಗ ತೋರಿಸಲಾರದೆ ಸುಮಂತ್ರನು ಮೊಗಕ್ಕೆ ಬಟ್ಟೆ ಮುಸುಕು ಹಾಕಿ ದಶರಥನಿದ್ದ ಕೌಸಲ್ಯೆಯ ಅಂತ:ಪುರಕ್ಕೆ ಹೋದನು.ಮೌನ.ಸ್ಮಶಾನ ಮೌನ.ಸುಮಂತ್ರನೊಬ್ಬನನ್ನೇ ಕಂಡು ಅಳಿದುಳಿದ ಎಲ್ಲಾ ಆಸೆಗಳನ್ನು ಕಳಕೊಂಡ ದಶರಥನು ಎಚ್ಚರ ತಪ್ಪಿದರೆ ಕೌಸಲೆಯು ಕಣ್ಣೀರಾದಳು.ಸುಮಿತ್ರೆಯು ಕೌಸಲ್ಯೆಗೆ ಸಾಂತ್ವನದ ಮಾತುಗಳನ್ನು ಹೇಳಿದಳು.
ಸುಮಂತ್ರನು ದಶರಥ- ಕೌಸಲ್ಯೆಯರಿಗೆ ರಾಮನ ಯೋಗಕ್ಷೇಮ ಮತ್ತು ಆತನಿತ್ತ ಸಂದೇಶವನ್ನು ಹೇಳಿದನು.
ಕೌಸಲ್ಯೆಯು ಶೋಕವನ್ನು ತಾಳಲಾರದೆ ದಶರಥನನ್ನು ನಿಂದಿಸಿದಳು."ಅರಣ್ಯದಲ್ಲಿರುವ ಸಿಂಹವು ಇತರ ಪ್ರಾಣಿಗಳು ಕೊಂದು ಹಾಕಿದ ಪ್ರಾಣಿಗಳ ಮಾಂಸವನ್ನು ತಿನ್ನುವುದಿಲ್ಲ.ಹಾಗೆಯೇ ಪುರುಷಸಿಂಹನಾದ ರಾಮನು ಭರತನಿಂದ ಆಳಲ್ಪಟ್ಟ ಈ ರಾಜ್ಯವನ್ನು ಅನುಭವಿಸನು" ಕೌಸಲ್ಯೆಯ ಈ ಮಾತು ದಶರಥನನ್ನು ತುಂಬಾ ನೋಯಿಸಿತು.ದಶರಥನು ಕೌಸಲ್ಯೆಯ ಕ್ಷಮೆ ಕೇಳಿದನು.ಇದರಿಂದ ತನ್ನ ತಪ್ಪನ್ನು ಅರಿತುಕೊಂಡ ಕೌಸಲ್ಯೆಯು ದಶರಥನ ಕಾಲಿಗೆ ಬಿದ್ದು ಕ್ಷಮಿಸೆಂದು ಪ್ರಾರ್ಥಿಸಿದಳು. ದುಃಖದಿಂದಿರುವ ಪತಿಯನ್ನು ತಾನೇ ಸಮಾಧಾನದ ಮಾತುಗಳನ್ನು ಹೇಳುತ್ತಾ ರಾಮನು ತನಗೆ ಹೇಳಿ ಕಳಿಸಿದ ಸಂದೇಶದಂತೆ ನಡೆದುಕೊಂಡಳು.
ದಶರಥನು ಆತ್ಮಾವಲೋಕನ ಮಾಡತೊಡಗಿದನು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ