."ಕಾಮುಕ ವೃದ್ಧರಾಜ ಕೈಕೇಯಿಯನ್ನೊಲಿಸಿಕೊಳ್ಳಲು ಇನ್ನಷ್ಟು ಅಧರ್ಮ ಕಾರ್ಯಗಳನ್ನು ಮಾಡಿಯಾನು"
. "ಕೈಕೇಯಿಯು ರಾಜಮಾತೆಯಾದ ಬಳಿಕ ನಮ್ಮ ತಾಯಂದಿರ ಬದುಕು ನರಕ ಸದೃಶವಾಗಬಹುದು"
. "ರಾಜನಾದ ಬಳಿಕ ಭರತನೂ ಅಯಾಚಿತವಾಗಿ ಬಂದ ಅಧಿಕಾರ ಬಲದಿಂದ ಸುಖಲೋಲುಪನಾಗಿ ತಂದೆಯ ಹಾದಿಯನ್ನೇ ತುಳಿದಾನು"
ಇವು ಲಕ್ಷ್ಮಣನ ಮಾತುಗಳಲ್ಲ! ಮತ್ತೆ?? ರಾಮನ ಮಾತುಗಳು!.ಹೌದು!.ರಾಮನದ್ದೇ ಮಾತುಗಳು!!ಲಕ್ಷ್ಮಣನನ್ನೂ ಅಯೋಧ್ಯೆಗೆ ಕಳುಹಿಸಲು ಹೂಡಿದ ತಾಂತ್ರಿಕ ಮಾತುಗಳು.ಆದರೆ ಲಕ್ಷ್ಮಣನ-"ನೀರಿಲ್ಲದೆ ಮೀನು ಬದುಕದು.ನೀನಿಲ್ಲದ ಸ್ವರ್ಗವೂ ನನಗೆ ಬೇಡ.."ಎಂಬ ಖಚಿತ ರಾಮಪ್ರೀತಿಯ ಮಂತ್ರಮಾತುಗಳು ರಾಮತಂತ್ರವು ಸೋಲುವಂತೆ ಮಾಡಿದವು.
"ರಾಮ ಸೀತೆ ಲಕ್ಷ್ಮಣ"ರ ವನವಾಸಕ್ಕೆ ರಾಮಾಜ್ಞೆಯಾಯಿತು! ಅರಣ್ಯದಲ್ಲಿ ಮುಂದುವರೆಯುತ್ತಾ ಗಂಗೆ ಯಮುನೆಯರ ಸಂಗಮ ಸ್ಥಳವಾದ ಪ್ರಯಾಗದ ಬಳಿಯಲ್ಲಿರುವ ಭರಧ್ವಾಜರ ಆಶ್ರಮಕ್ಕೆ ಹೋದರು.ಅದು ದಿವ್ಯಾಶ್ರಮ!ಮನುಷ್ಯರಂತೆ ಪ್ರಾಣಿ ಪಕ್ಷಿಗಳು ಅಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದವು.ಭರಧ್ವಾಜರನ್ನು ವಂದಿಸಿದ ಬಳಿಕ ರಾಮನು ಪುಟ್ಟದಾಗಿ ನಡೆದ ಸಂಗತಿಯನ್ನು ಅರಿಕೆ ಮಾಡಿ ವನವಾಸಕ್ಕೆ ಯೋಗ್ಯವಾದ ಏಕಾಂತ ವನಪ್ರದೇಶವನ್ನು ತೋರಿಸಲು ವಿನಂತಿಸಿದನು.ರಾಮನಿಗೆ ಋಷಿಯೋಗ್ಯ ಸತ್ಕಾರವನ್ನು ಮಾಡಿದ ಭರಧ್ವಾಜರು ಚಿತ್ರ ಕೂಟ ಪರ್ವತದ ಮಹತ್ವವನ್ನು ಹೇಳಿ ಅಲ್ಲೇ ವನವಾಸವನ್ನು ಪೂರೈಸಬಹುದು ಎಂಬ ಸಲಹೆಯನ್ನು ಮಾಡಿದರು.
ಮರುದಿನವೇ ರಾಮ ಸೀತೆ ಲಕ್ಷ್ಮಣರು ಹೊರಟು ನಿಂತರು. ಭಾರದ್ವಾಜರು ಅವರಿಗೆ ಸ್ವಸ್ತಿ ವಾಚನ ಮಾಡಿದರು.ಬಳಿಕ ಚಿತ್ರಕೂಟದ ದಾರಿಯನ್ನು ತೋರಿಸಿದರು.ದಾರಿಯಲ್ಲಿ ಎದುರಾದ ಯಮುನೆಯನ್ನು ದಾಟುವಾಗ ವನವಾಸದ ಯಶಸ್ಸಿಗೆ ಅವಳನ್ನೂ ಪೂಜಿಸಿ ಪ್ರಾರ್ಥಿಸಿದರು.
ಲಕ್ಷ್ಮಣ ಸೀತೆ ರಾಮ ಹೀಗೆ ಸರದಿಯಲ್ಲಿ ನಡೆಯುತ್ತಿದ್ದಾಗ ಕಣ್ಣಿಗೆ ಕಾಣುವ ಮರ ಗಿಡ ಬಳ್ಳಿಗಳು, ಹೂಹಣ್ಣುಗಳು.. ಎಲ್ಲವುಗಳ ಪರಿಚಯವನ್ನು ಸೀತೆಗೆ ಮಾಡಿಕೊಡುತ್ತಾ,ಅವಳು ಬಯಸಿದುದನ್ನು ತಂದುಕೊಡುತ್ತಾ ಸಂತೋಷದಿಂದ ಚಿತ್ರಕೂಟವನ್ನು ಸೇರಿದರು.ಅಲ್ಲೇ ವಾಸಿಸುತ್ತಿರುವ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಹೋಗಿ ಅವರ ಆತಿಥ್ಯವನ್ನು ಸ್ವೀಕರಿಸಿದರು.ರಾಮನು ತಾನು ಬಂದ ಉದ್ದೇಶವನ್ನು ತಿಳಿಸಿದನು.ಅವರ ಅಪ್ಪಣೆಯನ್ನು ಪಡೆದು ಅಲ್ಲೇ ಸಮೀಪದಲ್ಲಿ ಲಕ್ಷ್ಮಣನು ಎಲೆಮನೆ(ಪರ್ಣಕುಟೀರ)ಯನ್ನು ನಿರ್ಮಿಸಿದನು.ಮಂದಾಕಿನೀ ನದಿಯು ಪಕ್ಕದಲ್ಲೇ ಹರಿಯುತ್ತಿತ್ತು.ಎಲೆಮನೆಯಲ್ಲಿ ವಾಸಿಸಲು ಮಾಡಬೇಕಾದ ವಾಸ್ತುಹೋಮ-ಬಲಿ ಮುಂತಾದವುಗಳನ್ನು ಸ್ವತಃ ರಾಮನೇ ಲಕ್ಷ್ಮಣನ ಸಹಾಯದಿಂದ ಮಾಡಿ ಎಲೆ ಮನೆಯಲ್ಲಿ ವಾಸ ಹೂಡುವ ಮೂಲಕ ಅಧಿಕೃತವಾಗಿ ವನವಾಸದ ಆರಂಭ ಮಾಡಿದರು.ಪ್ರಕತಿಮಾತೆಯ ಮಡಿಲಲ್ಲಿ ಎಲ್ಲಾ ನೋವುಗಳನ್ನು ಮರೆತರು.ಆನಂದವನ್ನು ಅನುಭವಿಸ ತೊಡಗಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ