ದಣಿದು ಮಲಗಿದ ಪೌರರು ಬೆಳಗಾದಾಗ ಎಚ್ಚೆತ್ತರು.ನೋಡ್ತಾರೆ!ರಾಮನಿಲ್ಲ,ರಥವೂ ಇಲ್ಲ!ರಾಮನ ಸುಳಿವೂ ಇಲ್ಲ! ಮುಂದಿನ ದಾರಿ ತೋಚಲಿಲ್ಲ.ಭಾರವಾದ ಮನಗಳಿಂದ ಚಂದ್ರನಿಲ್ಲದ ಆಗಸದಂತಿರುವ, ನೀರಿಲ್ಲದ ಕಡಲಿನಂತಿರುವ ಅಯೋಧ್ಯೆಯತ್ತ ಹೆಜ್ಜೆ ಹಾಕತೊಡಗಿದರು.
ದಶರಥನಿಂದ ಉಪೇಕ್ಷಿತಳಾದ, ಪ್ರೀತಿಯ ರಾಮನ ವನವಾಸಕ್ಕೆ ಕಾರಣಳಾದ ಕೈಕೇಯಿಗೆ ಅವರಿವರೆನ್ನದೆ ಈಗ ಎಲ್ಲಾ ಪುರಜನರದ್ದು ಹಿಡಿಶಾಪ! ಪಟ್ಟವೇರಲಿರುವ ಭರತನ ತಾಯಿ ಎಂದರಿತರೂ ಅವರ ಆಕ್ರೋಶ ತಣಿಯಲಿಲ್ಲ.ಪ್ರಾಯಶ: ಅವರುಗಳಿಗೆ ಭರತನ ವ್ಯಕ್ತಿತ್ವದ ಅರಿವು ಚೆನ್ನಾಗಿರಬೇಕು.ರಾಮನನ್ನುಳಿದ ಅಯೋಧ್ಯೆಗೆ ಅವನೂ ಸಮ್ಮತಿಸಲಾರನೆಂಬ ವಿಶ್ವಾಸ ಅವರಿಗಿತ್ತು ಎಂದು ಕಾಣುತ್ತದೆ.ಅಯೋಧ್ಯೆಯ ಸ್ತ್ರೀಯರು ಪುತ್ರ ವಿಯೋಗದ ಸಂಕಟವನ್ನು ಅನುಭವಿಸುತ್ತಿದ್ದರು.
ಇತ್ತ ರಾಮನು ತನ್ನ ರಾಜ್ಯದ ಜನರು ತನ್ನ ವನವಾಸದ ಬಗ್ಗೆ ಮಾಡುತ್ತಿರುವ ಟೀಕೆ ವಿಮರ್ಶೆಗಳನ್ನು ಕೇಳುತ್ತಾ ರಥದಲ್ಲಿ ಮುಂದೆ ಮುಂದೆ ಹೋಗುತ್ತಿದ್ದನು. ವೇದಶ್ರುತಿ,ಗೋಮತೀ ಮತ್ತು ಸ್ಯಂದಿಕಾ ನದಿಗಳನ್ನು ದಾಟಿ ಪ್ರಯಾಣ ಮುಂದುವರೆಸಿ ದೇವಗಂಗೆಯ ಸನ್ನಿಧಿಯಲ್ಲಿ ಎರಡನೇ ಇರುಳನ್ನು ಕಳೆಯಲು ನಿರ್ಧರಿಸಿದನು.ಕಂಡ ಮಾತ್ರಕ್ಕೇ ಆನಂದವನ್ನೀವ ಗಂಗೆಯ ಮಡಿಲಲ್ಲಿ ಅವರು ತಂಗಿದರು.
ಶೃಂಗಬೇರಪುರ ಗಂಗಾತಟದಲ್ಲಿರುವ ಒಂದು ರಾಜ್ಯ.ಅದರ ರಾಜ ಗುಹ.ಅವನು ನಿಷಾದಾಧಿಪತಿಯೂ ಹೌದು.ರಾಮನ ಪ್ರಾಣ ಒಸ್ನೇಹಿತ.ರಾಮಾಗಮನದ ಸುದ್ದಿ ಕೇಳಿ ಸಂತಸದಿಂದ ತನ್ನ ಪರಿವಾರ ಸಹಿತ ರಾಮನಿದ್ದಲ್ಲಿಗೆ ಬಂದನು."ನಿನಗೆ ಅಯೋಧ್ಯೆ ಬೇರೆಯಲ್ಲ ಶೃಂಗಬೇರಪುರ ಬೇರೆಯಲ್ಲ.ಇದು ನಿನ್ನದೇ ರಾಜ್ಯ.ನಿನಗಾಗಿ ನಾನು ಏನು ಮಾಡಬೇಕೆಂಬುದನ್ನು ಆಜ್ಞಾಪಿಸು"ಎಂದು ಗುಹನು ರಾಮನಲ್ಲಿ ಪ್ರಾರ್ಥಿಸಿದನು.
ರಾಮನು ಗುಹನನ್ನು ಆಲಂಗಿಸಿ ಬಳಿಕ ಆತನ,ಆತನ ರಾಜ್ಯದ ಸಕಲ ಯೋಗಕ್ಷೇಮಗಳನ್ನು ವಿಚಾರಿಸಿದನು.ಬಳಿಕ ತನ್ನ ವನವಾಸ ವ್ರತವನ್ನು ಹೇಳುತ್ತಾ ನನ್ನ ಕುದುರೆಗಳಿಗೆ ಆಹಾರವನ್ನಿತ್ತರೆ ಸಾಕು ಎಂದು ಅವನು ತಂದ ವಿವಿಧ ತಿನಿಸುಗಳನ್ನು ನಯವಾಗಿ ತಿರಸ್ಕರಿಸಿದನು.ರಾಮಪರಿವಾರ,ಗುಹನ ಪರಿವಾರ ಅಂದಿರುಳು ಅಲ್ಲೇ ತಂಗಿದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ