ಮಂಗಳೂರು: 2023ನೇ ಸಾಲಿನ ದ.ಕ ಜಿಲ್ಲಾ ವ್ಯಾಪ್ತಿಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ರಾಮಕೃಷ್ಣ ಭಟ್ ಚೊಕ್ಕಾಡಿ ಬೆಳಾಲು ಭಾಜನರಾಗಿದ್ದಾರೆ.
ಒಬ್ಬ ಪರಿಪೂರ್ಣ ಶಿಕ್ಷಕರಾಗಿ ತಮ್ಮ ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಾಧಿಸಿ ತೋರಿಸಿದ್ದಾರೆ. ಅಂಕ ಆಧಾರಿತ ಶಿಕ್ಷಣವನ್ನು ಅವರು ಬಲವಾಗಿ ವಿರೋಧಿಸುತ್ತಾರೆ. ಪುಸ್ತಕದ ಶಿಕ್ಷಣಕ್ಕಿಂತ ನೈತಿಕ ಮೌಲ್ಯಗಳಿಗೆ ಮತ್ತು ಜೀವನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸುತ್ತಾರೆ. ಈ ನಿಟ್ಟಿನಲ್ಲಿ ಬಹಳಷ್ಟು ಯಶಸ್ಸನ್ನೂ ಅವರು ಕಂಡಿದ್ದಾರೆ.
ಇವತ್ತು ಶಿಕ್ಷಣ ಒಂದು ಬಹು ದೊಡ್ಡ ಉದ್ಯಮವಾಗಿ ಭೂತಾಕಾರವಾಗಿ ಬೆಳೆದು ನಿಂತಿದೆ. ವಿದ್ಯಾರ್ಥಿ ಗ್ರಾಹಕನಾಗಿ ಬದಲಾಗಿದ್ದಾನೆ. ಶಿಕ್ಷಣ ಸೊರಗಿದೆ. ಶಿಕ್ಷಕ ದುರ್ಬಲನಾಗಿದ್ದಾನೆ. ಶಿಕ್ಷಣ ಅಸಹ್ಯಕರ ರೀತಿಯಲ್ಲಿ ವ್ಯಾಪಾರೀಕರಣಗೊಂಡಿದೆ. ಇಂತಹ ಸಮಯದಲ್ಲಿಯೂ ಶಿಕ್ಷಕರ ರಾಜ ಧರ್ಮವನ್ನು ಪಾಲಿಸುವ ಬೆರಳೆಣಿಕೆಯ ಶಿಕ್ಷಕರಲ್ಲಿ ಇವರೂ ಒಬ್ಬರು ಎಂದು ನಿಸ್ಸಂಶಯ. ನಿವೃತ್ತಿಯ ಅಂಚಿನಲ್ಲಿ ಇರುವ ಇವರಿಗೆ ಅರ್ಹವಾಗಿಯೇ ಪ್ರಶಸ್ತಿ ಅರಸಿಕೊಂಡು ಬಂದಿವೆ. ಅರ್ಜಿ ಹಾಕದೆ ಬಂದ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯ ಮೌಲ್ಯ ಇಮ್ಮಡಿ ಯಾಗಿದೆ.
ರಾಷ್ಟ್ರೀಯ ಪ್ರಶಸ್ತಿಗೆ ಅರ್ಹತೆ ಇರುವ ಇವರಿಗೆ ಕೊನೆಗೂ ಜಿಲ್ಲಾ ಪ್ರಶಸ್ತಿ ಬಂದಿರುವುದು ಇವತ್ತಿನ ಸಾಮಾಜಿಕ ಮತ್ತು ಶಿಕ್ಷಣ ವ್ಯವಸ್ಥೆಗೆ ಹಿಡಿದು ಕೈಗನ್ನಡಿ. ಇವರ ಸಾಧನೆ ತಿಳಿಯ ಬಳಸುವವರು ಓಮ್ಮೆ ಅವರು ಬೋಧಿಸುವ ಬೆಳಾಲು ಶಾಲೆಗೆ ಭೇಟಿ ನೀಡಿದರೆ ಸಾಕು.
-ಡಾ. ಮುರಲಿ ಮೋಹನ್ ಚೂಂತಾರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ