ನಾಮಸ್ಮರಣೆ ಮಾತ್ರದಿಂದ ರಾಮ- ಕೃಷ್ಣರ ಅಭಯ ಪ್ರಾಪ್ತಿ: ಪೇಜಾವರ ಶ್ರೀ
ಮೈಸೂರು: ಮೈಸೂರಿನಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 36ನೇ ಚಾತುರ್ಮಾಸ್ಯದ ಅಂಗವಾಗಿ ನಾಡಿನಾದ್ಯಂತ ಲಕ್ಷಾಂತರ ಶಾಲಾ ವಿದ್ಯಾರ್ಥಿಗಳೂ ಸೇರಿದಂತೆ ಲಕ್ಷಾಂತರ ಮಂದಿಯಿಂದ ಯಾವ ಖರ್ಚೂ ಇಲ್ಲದೆ ದಶಕೋಟಿ ರಾಮಮಂತ್ರ ಜಪಯಜ್ಞ (ಶತಕೋಟಿಗೂ ಮೀರಿತ್ತು) ಮತ್ತು ನಿರಂತರ ಪ್ರಸಿದ್ಧ ವಿದ್ವಾಂಸರಿಂದ ಶ್ರೀ ಮದ್ಭಾಗವತ ಪ್ರವಚನ ಸತ್ರ ಹಮ್ಮಿಕೊಳ್ಳಲಾಗಿತ್ತು. ಅದರ ಪರಿಸಮಾಪ್ತಿಯ ಅಂಗವಾಗಿ ಭಾನುವಾರ ಶ್ರೀರಾಮತಾರಕ ಯಜ್ಞ ಮತ್ತು ಶ್ರೀ ಮದ್ಭಾಗವತ ಉದ್ಯಾಪನಾ ಯಾಗಗಳು ಸರಸ್ವತಿಪುರಂ ನ ಕೃಷ್ಣಧಾಮದಲ್ಲಿ ಸಂಪನ್ನಗೊಂಡಿತು.
ಈ ಯಾಗಗಳ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಶ್ರೀಗಳು ಕಲಿಯುಗಕ್ಕೆ ಅತ್ಯಂತ ಆಪ್ತವಾದ ಎರಡು ಭಗವಂತನ ರೂಪಗಳು ರಾಮ ಮತ್ತು ಕೃಷ್ಣ. ಈ ಯುಗದಲ್ಲಿ ನಾವೆಲ್ಲ ಮಾಡುವ ಅಪರಾಧ ಸಹಸ್ರಗಳು, ಸಕಲ ದುರಿತಗಳೂ ಕೇವಲ ರಾಮ ಮತ್ತು ಕೃಷ್ಣರ ನಾಮ ಜಪ ಮತ್ತು ಸ್ಮರಣೆ ಮಾತ್ರದಿಂದ ಪರಿಹಾರವಾಗಿ ಸಕಲ ಶ್ರೇಯಸ್ಸು ಸನ್ಮಂಗಲಗಳು ಸಿದ್ಧಿಸುವುವು ಎಂಬುದಾಗಿ ಸ್ವಯಂ ಭಗವಂತನೇ ತಿಳಿಸಿದ್ದಾನೆ.
ಅದರಂತೆ ದಶಕೋಟಿ ರಾಮಜಪಯಜ್ಞ ಮತ್ತು ಭಾಗವತ ಪ್ರವಚನ ಸತ್ರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಭಗವಂತನ ಅಭಯದ ರಕ್ಷೆ ಸಿದ್ಧಿಸಿ ನಾಡು ದೇಶದಲ್ಲಿ ಶಾಂತಿ ಸುಭಿಕ್ಷೆ ಸಮೃದ್ಧಿಗಳು ನೆಲೆಗೊಳ್ಳಲಿ. ಸಮಸ್ತರೂ ಇಲ್ಲಿಗೇ ರಾಮ ಮಂತ್ರ ಜಪ ನಿಲ್ಲಿಸದೇ ನಿತ್ಯ ನಿರಂತರ ಮನೆ ಮನೆ ಗಳಲ್ಲಿ ಯಥಾಶಕ್ತಿ ನಡೆಸಬೇಕು ಎಂದರು.
ವಿದ್ವಾನ್ ರಾಜಗೋಪಾಲ ಆಚಾರ್ಯ ಮತ್ತು ವಿದ್ವಾನ್ ಕೃಷ್ಣ ಕುಮಾರ ಆಚಾರ್ಯರ ನೇತೃತ್ವದಲ್ಲಿ ವೈದಿಕರಿಂದ ಯಾಗಗಳು ನೆರವೇರಿದವು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶ್ರೀಗಳ ಚಾತುರ್ಮಾಸ್ಯ ಸಮಿತಿ ಮತ್ತು ಶ್ರೀ ಕೃಷ್ಣ ಮಿತ್ರ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ