ಪುತ್ತೂರು: ಸಂಸ್ಕೃತ ಅಂದರೆ ಚಿಪ್ಪು ಒಡೆದು ಮುತ್ತು ಪಡೆಯುವ ಕೆಲಸ. ಚಿಪ್ಪು ಒಡೆದು ಮುತ್ತು ಪಡೆದಾಗ ಸಿಗುವುದೇ ಸಂಸ್ಕೃತ. ಬದುಕು ಮತ್ತು ಬದುಕಿನಾಚೆಯ ವಿಚಾರವನ್ನು ತಿಳಿಸಲು ಸಂಸೃತ ಬೇಕು. ಹಾಲನ್ನು ಕುದಿಸಿ, ಹೆಪ್ಪು ಹಾಕಿ, ಬೆಣ್ಣೆ ತೆಗೆದು, ಬೆಣ್ಣೆಯನ್ನು ತುಪ್ಪ ಮಾಡುವ ಕೆಲಸದಂತೆಯೇ ಸಂಸ್ಕೃತ ಕಲಿಯುವ ಕ್ರಮ. ಆ ತುಪ್ಪವೇ ಸಂಸ್ಕೃತ. ಸಂಸ್ಕೃತವನ್ನು ತೆರೆದ ಕಣ್ಣಿನಿಂದ ನೋಡಿ. ಇಂದಿನಿಂದ ನಾಲ್ಕು ಅಕ್ಷರ ಸಂಸ್ಕೃತ ಕಲಿಯುವ ಸಂಕಲ್ಪ ಮಾಡೋಣ. ಸಂಸ್ಕೃತವನ್ನು ಶ್ರದ್ಧೆಯಿಂದ ತಿಳಿದು ಸಮಾಜಕ್ಕೂ ಒಂದಷ್ಟು ವಿಚಾರಗಳನ್ನು ಕೊಡುವ ಕೆಲಸವಾಗಬೇಕು. ನಿನ್ನನ್ನು ನೀನು ತಿದ್ದಿಕೊಂಡರೆ ಜಗತ್ತಿನ ಒಬ್ಬ ಮೂರ್ಖ ಕಡಿಮೆಯಾಗುತ್ತಾನೆ ಎಂಬಂತೆ ನಮ್ಮನ್ನು ನಾವು ತಿದ್ದಿಕೊಳ್ಳೋಣ. ಭ್ರಾತೃತ್ವ ಸಾರುವ ರಕ್ಷಾಬಂಧನ ಸಾಮಾಜಿಕ ಭದ್ರತೆಯನ್ನು ಬಿಗಿಗೊಳಿಸುತ್ತದೆ. ತಮಗೆಲ್ಲರಿಗೂ ಸಂಸ್ಕೃತ ದಿವಸ ಹಾಗೂ ರಕ್ಷಾಬಂಧನದ ಶುಭಾಶಯಗಳು ಎಂದು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರೂ ಉತ್ತಮ ವಾಗ್ಮಿಗಳೂ ಆದ ಡಾ. ಶ್ರೀಶ ಕುಮಾರ್ ಶುಭ ಹಾರೈಸಿದರು. ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಸಂಸ್ಕೃತ ದಿವಸ ಹಾಗೂ ರಕ್ಷಾಬಂಧನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಕ್ಷಾಬಂಧನದ ಹಾಗೂ ಸಂಸ್ಕೃತ ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು.
ಭಾರತದ ಪ್ರಾಚೀನ ಹಾಗೂ ಅತ್ಯಂತ ಸಮೃದ್ಧ ಭಾಷೆ ಸಂಸ್ಕೃತ. ಸಂಸ್ಕೃತ ಕಲಿಯಿರಿ. ಸಂಸ್ಕೃತ ಶ್ಲೋಕ ಹೇಳುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ, ರಕ್ಷಣೆ ಸಿಗುವುದು. ಸಂಸ್ಕೃತ ಭಾಷೆ ಎಂದಿಗೂ ನಾಶವಾಗಲಾರದು. ಪ್ರಪಂಚದಾದ್ಯಂತ ಸಂಸ್ಕೃತ ಶ್ಲೋಕಗಳು ಪಠಿಸಲ್ಪಡುತ್ತವೆ. ಶ್ಲೋಕ ಪಠಣ ಮಾಡಿ. ದೇವಭಾಷೆ ಸಂಸ್ಕೃತ. ಶ್ಲೋಕ ಪಠಣದಿಂದ ಆರೋಗ್ಯ ಭಾಗ್ಯವೂ ಲಭ್ಯವಾಗುವುದು. ಕಲಿಯುವ ಆಸಕ್ತಿ ನಿಮ್ಮದಾಗಲಿ - ಶುಭವಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷ ಪೀಠವನ್ನಲಂಕರಿಸಿದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೊಜ ಅವರು ಶುಭ ಹಾರೈಸಿದರು.
ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಉಪಪ್ರಾಚಾರ್ಯರಾದ ಶೈನಿ ಕೆ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಕೃತ ಉಪನ್ಯಾಸಕರಾದ ಆದರ್ಶ ಗೋಖಲೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳು ಸಂಸ್ಕೃತದ ಮಹತ್ವ ಸಾರುವ ಹಾಗೂ ರಕ್ಷಾಬಂಧನದ ಮಹತ್ವವನ್ನು ತಿಳಿಸುವ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ವಿದ್ಯಾರ್ಥಿ ಶ್ರೀಕರ ಶಗ್ರಿತ್ತಾಯ ಪ್ರಾರ್ಥಿಸಿ, ವಿಕೇಶ್ ಪ್ರಭು ಸ್ವಾಗತಿಸಿದರು. ವಿದ್ಯಾರ್ಥಿನಿ ವರಲಕ್ಷ್ಮಿ ಧನ್ಯವಾದ ಸಮರ್ಪಿಸಿ ಪವನ್ ಮತ್ತು ಮಹತಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ