ಪ್ರೇರಣಾ-7: ಅನ್ನ ದೇವರಿಗಿಂತ ಅನ್ಯ ದೇವರು ಉಂಟೆ...

Upayuktha
0

 


ಅನ್ನವೇ ದೇವರು, ಅನ್ನವೇ ಬದುಕು, ಅನ್ನವೇ ಸಂಸ್ಕೃತಿ, ಅನ್ನವೇ ಪ್ರಸಾದ. 'ಅನ್ನ ದೇವರ ಮುಂದೆ ಅನ್ಯ ದೇವರುಂಟೆ? ಅನ್ನವಿರುವತನಕ ಅಷ್ಟೇ ಪ್ರಾಣ ಈ ಜಗದೊಳಗೆ ಅನ್ನವೇ ದೈವ ಸರ್ವಜ್ಞ'. ಎಂಬ ಸರ್ವಜ್ಞನ ವಚನದಲ್ಲೇ ಅನ್ನದ ಮಹತ್ವದ ಬಗ್ಗೆ ವಿವರವಾಗಿ ಹೇಳಲಾಗಿದೆ. ಇದರ ಅರ್ಥ, ಅನ್ನವೆಂಬ ದೇವರ ಮುಂದೆ ಬೇರೆ ಯಾವ ದೇವರೂ ಇಲ್ಲ, ಎಲ್ಲಿಯವರೆಗೆ ಮನುಷ್ಯನಿಗೆ ತಿನ್ನಲು ಈ ಭೂಮಿಯಲ್ಲಿ ಅನ್ನ ದೊರೆಯುವುದೋ ಅಲ್ಲಿಯವರೆಗೆ ಮಾತ್ರ ಮನುಷ್ಯನ ಜೀವನ ಇರುತ್ತದೆ ಎಂದು. ಅನ್ನವೆಂದರೆ ಮನುಷ್ಯನ ಜೀವಧಾತುವಾಗಿದ್ದು, ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ 'ಅನ್ನದಾನ'. ಏಕೆಂದರೆ ಮನುಷ್ಯನಿಗೆ ಧನ, ಕನಕ, ಆಸ್ತಿ ಅಥವಾ ಎನ್ನನ್ನೇ ದಾನವಾಗಿ ನೀಡಿದರೂ ಆತನನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎನ್ನುವ ಲಾಲಸೆ ಆತನಿಗೆ ದೊರೆತಷ್ಟೂ ಹೆಚ್ಚುತ್ತಾ ಹೋಗುತ್ತದೆ. ಆದರೆ ಹಸಿದವನಿಗೆ ಅನ್ನವನ್ನು ಹೊಟ್ಟೆ ತುಂಬುಷ್ಟು ನೀಡಿದರೆ ಆತ ತೃಪ್ತನಾಗುತ್ತಾನೆ, ಹೊಟ್ಟೆ ತುಂಬಿದ ನಂತರ ಮತ್ತಷ್ಟು ಅನ್ನವನ್ನು ಆತನಿಗೆ ನೀಡಿದರೆ ಆತ ಮತ್ತಷ್ಟು ತಿನ್ನಲಾರ.


ಮನುಷ್ಯನ ದೇಹದ ರೋಗನಿರೋಧಕ ಶಕ್ತಿಯು ಅನ್ನದ ಅಗುಳಿನಲ್ಲಿಯೇ ಇದ್ದು, ದಿನದ ಮೂರು ಹೊತ್ತು ಊಟ ಮಾಡುವವರನ್ನು ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ. 'ಆಹಾರದ ರುಚಿಯನ್ನು ಹೆಚ್ಚಿಸುವುದು ಹಸಿವು; ಅದೇ ರೀತಿ ಪಾನೀಯದ ರುಚಿಯನ್ನು ಹೆಚ್ಚಿಸುವುದು ತೃಷೆ' ಎಂಬ ಮಾತನ್ನು ಸಾಕ್ರಟೀಸ್ ಹೇಳಿದ್ದಾರೆ. ಇದರ ಪ್ರಕಾರ ವ್ಯಕ್ತಿಯು ತಿನ್ನುವ ಆಹಾರದ ರುಚಿ ಮತ್ತು ಮೌಲ್ಯವನ್ನು ಹೆಚ್ಚಿಸುವುದು ಆ ವ್ಯಕ್ತಿಯ ಹಸಿವಿನ ಪ್ರಮಾಣ. ತೀರಾ ಹಸಿದು ಇನ್ನೇನು ಆತನ ಪ್ರಾಣ ಹೊರಟೇ ಹೋಗುತ್ತದೆ ಎನ್ನುವ ಸ್ಥಿತಿಯಲ್ಲಿರುವ ವ್ಯಕ್ತಿಗೆ ಒಣರೊಟ್ಟಿ ಅಥವಾ ಹಳಸಲು ಬ್ರೆಡ್ ಸಹಾ ಮೃಷ್ಟಾನ್ನ ಭೋಜನದಷ್ಟೇ ಮೌಲ್ಯದ್ದಾಗಿರುತ್ತದೆ. ಅದೇ ರೀತಿ ಹೊಟ್ಟೆ ತುಂಬಿರುವ ವ್ಯಕ್ತಿಗೆ ಆತನ ನೆಚ್ಚಿನ ಆಹಾರವನ್ನು ತಯಾರಿಸಿ ಬಡಿಸಿದರೂ ಆತ ಒಂದು ತುತ್ತೂ ತಿನ್ನಲಾರ ಮತ್ತು ಆ ಮೃಷ್ಟಾನ್ನ ಭೋಜನದ ನೈಜ ಸವಿಯನ್ನೂ ಅನುಭವಿಸಲಾರ. ಅದೇ ರೀತಿ ಕುಡಿಯುವ ಪಾನೀಯದ ರುಚಿಯನ್ನು ಹೆಚ್ಚಿಸುವುದು ಆತನ ತೃಷೆಯ ಆಳ. ಏಕೆಂದರೆ ಬಾಯಾರಿಕೆಯಿಂದ ಸಾಯುವ ಸ್ಥಿತಿಯಲ್ಲಿ ಇರುವವನಿಗೆ ಕೊಳಚೆ ಒಂದು ಗುಟುಕು ನೀರು ಸಿಕ್ಕರೂ ಅದು ಆತನಿಗೆ ಜೀವ ಜಲವೇ ಆಗುತ್ತದೆ.


ಆದ್ದರಿದ ಒಂದು ಅನ್ನದ ಅಗುಳಿನ ಮಹತ್ವ ಹಸಿದವನಿಗೆ ಚೆನ್ನಾಗಿ ತಿಳಿದಿರುತ್ತದೆ. ಅನ್ನವನ್ನು ತಿನ್ನುವ ಹಕ್ಕಿದೆಯೇ ವಿನಃ ಬಿಸಾಡುವ ಹಕ್ಕು ನಮಗ್ಯಾರಗೂ ಇಲ್ಲ. ನಾವು ತಿನ್ನುವ ಒಂದೊಂದು ಅನ್ನದ ಅಗುಳಿನ ಮೇಲೂ ಅದನ್ನು ತಿನ್ನುವವನ ಹೆಸರನ್ನು ಮೊದಲೇ ಬರೆದಿರಲಾಗುತ್ತದೆ ಎನ್ನುವ ಮಾತು ಜನಜನಿತ. ಆದರೆ ಇಂದು ಮನುಷ್ಯನ ಹೊಟ್ಟೆ ಸೇರಬೇಕಾದ ಅನ್ನ ಸ್ವಾಚ್ಛಾಚಾರ ಮತ್ತು ಪಾರ್ಟಿಗಳ ಹೆಸರಲ್ಲಿ ಕಸದ ತೊಟ್ಟಿ ಸೇರುತ್ತಿರುವುದು ವಿಷಾದದ ಸಂಗತಿ. ಅಕ್ಕಿಯು ಮಿಕ್ಕಿ ಉಳಿದರೆ ಇಂದಲ್ಲ ನಾಳೆ ಅದನ್ನು ಬೇಯಿಸಿ ತಿನ್ನಬಹುದು. ಆದರೆ ತಯಾರಿಸಿದ ಅನ್ನ ಅಥವಾ ಖಾದ್ಯ ಮಿಕ್ಕಿದರೆ ಅದು ಹಾಳಾಗಿ ಹೋಗುತ್ತದೆ.  ನಮಗೆಷ್ಟು ಬೇಕೋ ಅಷ್ಟನ್ನೇ ಬಳಸಬೇಕು. ಬದುಕಿಗೆ ನೀಡುವಷ್ಟೇ ಪ್ರಾಧಾನ್ಯತೆಯನ್ನು ಅನ್ನಕ್ಕೂ ನೀಡಬೇಕು. ಅನ್ನ ಪರಬ್ರಹ್ಮ ವಸ್ತು ಎಂಬ ಮಾತೇ ಇದೆ. ಅಂದರೆ ಪ್ರತಿಯೊಂದು ಅಗುಳಿಗೂ ಜೀವವನ್ನು ನೀಡುವ ಶಕ್ತಿಯಿದೆ. ಒಂದು ಅನ್ನದ ಅಗುಳೂ ತಿಪ್ಪೆಯನ್ನು ಸೇರದಿರಲಿ. ಜನರ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ಲಕ್ಷಗಟ್ಟಲೆ ಟನ್ ಆಹಾರ ಪೋಲಾಗುತ್ತಿದೆ.


ಒಂದು ಅನ್ನದ ಅಗುಳಿನ ಉಳಿತಾಯ ನೂರು ಅಗುಳುಗಳ ಉತ್ಪಾದನೆಗಿಂತಲೂ ದೊಡ್ಡದು ಎಂಬುವುದನ್ನು ಎಲ್ಲರೂ ಅರಿಯಬೇಕು. ನಾಲ್ಕು ಅಗುಳು ಕಡಿಮೆ ತಿಂದರೂ ಪರವಾಗಿಲ್ಲ, ಹತ್ತು ಅಗುಳು ಹಾಳಾಗದಂತೆ ನೋಡಿಕೊಳ್ಳಬೇಕು. ಹಸಿವಾದಾಗ ಅನ್ನ ಸಿಕ್ಕರೆ ಸಾಕೆನ್ನುವ ನಮ್ಮಂತೆಯೇ ಎಲ್ಲಾ ಜೀವಿಗಳಿಗೂ ಹಸಿವಿನ ಕೂಗು ಇದ್ದೆ ಇದೇ. ಮನೆ-ಮನೆಗಳಲ್ಲಿ ತಟ್ಟೆಯಲ್ಲಿಯೇ ಅನ್ನವನ್ನು ಬಿಟ್ಟು ಅದರಲ್ಲೇ ಕೈತೊಳೆಯುವ ಅದೆಷ್ಟೋ ಜನರಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು, ಆಹಾರವನ್ನು ಬಿಸಾಡದೆ ಅಗತ್ಯವಿರುವವರಿಗೆ ನೀಡೋಣ.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top