ಪಿತೃಪಕ್ಷ ವಿಶೇಷ – ಮಹಾಲಯ ಅಮಾವಾಸ್ಯೆ

Upayuktha
0



ಪಿತೃಪಕ್ಷದಲ್ಲಿ  ಶ್ರಾದ್ಧದ ಮಹಿಮೆ

ಪಿತೃಪಕ್ಷದಲ್ಲಿ ನಿತ್ಯವೂ ಶ್ರಾದ್ಧ ಮಾಡಬೇಕು. ಮಾಡಲು ಸಾಧ್ಯವಿಲ್ಲದಿದ್ದಾಗ ಒಂದು ದಿವಸವಂತೂ ಮಾಡಲೇಬೇಕು. ಒಂದೇ ಬಾರಿ ಶ್ರಾದ್ಧ ಮಾಡುವವರಿಗೆ ಯಾವ ದಿವಸಗಳು ನಿಷಿದ್ಧ ಮತ್ತು ಯಾವ ದಿವಸ ಶ್ರೇಷ್ಠ ಎಂದು ತಿಳಿಸುವ ಲೇಖನ.

ಪಿತೃಪಕ್ಷದ ನಿಮಿತ್ತ ವಿಶೇಷ ಲೇಖನ- ಶ್ರಾದ್ಧವನ್ನು ಮಾಡುವುದರ ಮಹತ್ವ

ಪಿತೃ ಪಕ್ಷದ ವೈಶಿಷ್ಟ್ಯವೇನು?

ಹಿಂದೂ ಪಂಚಾಂಗದಲ್ಲಿ ಪ್ರತಿ ಮಾಸದಲ್ಲೂ ಎರಡು ಪಕ್ಷಗಳಿವೆ. ಒಂದು ಶುಕ್ಲ ಪಕ್ಷ ಇನ್ನೊಂದು ಕೃಷ್ಣ ಪಕ್ಷ. ಶುಕ್ಲ ಪಕ್ಷವು ಅಮಾವಾಸ್ಯೆಯ ನಂತರ ಬಂದರೆ, ಹುಣ್ಣಿಮೆಯ ನಂತರ ಕೃಷ್ಣ ಪಕ್ಷ ಬರುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣ ಪಕ್ಷವನ್ನು ಪಿತೃ ಪಕ್ಷ ಎಂದೂ ಕರೆಯುತ್ತೇವೆ. ಅಂದರೆ, ಪಾಡ್ಯ ತಿಥಿಯಿಂದ ಮಹಾಲಯ ಅಮಾವಾಸ್ಯೆಯ ದಿನದವರೆಗೆ. ಈ 15 ದಿನಗಳಲ್ಲಿ ಮದುವೆ, ಉಪನಯನ, ಚೂಡಾಕರ್ಮ ಮುಂತಾದ ದೇವತಾ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಈ ದಿನ ಪಿತೃಗಳ ಕಾರ್ಯಕ್ಕಾಗಿ ಮೀಸಲಿಡಲಾಗಿದೆ.


ಮಾನವನ ಹುಟ್ಟಿನಿಂದ ಸಾವಿನವರೆಗೆ ಅವನಿಗೆ ಒಟ್ಟು 16 ಕರ್ಮಗಳನ್ನು ವಿಧಿಸಲಾಗಿದೆ. ಅವುಗಳಲ್ಲಿ ಮುಖ್ಯವಾದುವು ಜಾತ ಕರ್ಮ, ನಾಮಕರಣ, ಚೂಡಾ ಕರ್ಮ, ಉಪನಯನ, ಮದುವೆ ಮತ್ತು ಶ್ರಾದ್ಧ ಕರ್ಮ. ಈ ಶ್ರಾದ್ಧ ಕರ್ಮವನ್ನು ಹಿಂದೂಗಳಲ್ಲದೆ ದೇಶದ ಎಲ್ಲ ಧರ್ಮ, ಜಾತಿ, ಮತದವರೂ ಸಹ ಅವರವರ ಧರ್ಮಕ್ಕೆ ಅನುಗುಣವಾಗಿ ಆಚರಿಸುತ್ತಾರೆ.


ಶ್ರದ್ಧೆಯಿಂದ ಮಾಡುವ ಮಾತಾ ಪಿತೃಗಳ ಆರಾಧನೆಯನ್ನು ಶ್ರಾದ್ಧ ಎನ್ನುವರು. ಈ ಶ್ರಾದ್ಧ ಸಾಧು, ಸನ್ಯಾಸಿಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಅವರು ಸನ್ಯಾಸ ಸ್ವೀಕರಿಸಿದಾಗ ತಾವೇ ಆತ್ಮ ಶ್ರಾದ್ಧ ಮಾಡಿ ಕೊಂಡಿರುತ್ತಾರೆ. ಬ್ರಹ್ಮಪುರಾಣದಲ್ಲಿಯೂ ಶ್ರಾದ್ಧದ ಬಗ್ಗೆ ಉಲ್ಲೇಖವಿದೆ. ಒಬ್ಬ ವ್ಯಕ್ತಿಯು ತನ್ನ ಪಿತೃಗಳನ್ನು ಉದ್ದೇಶಿಸಿ ಯೋಗ್ಯವಾದ ದೇಶ, ಕಾಲ ಪಾತ್ರಗಳನ್ನು ಗಮನದಲ್ಲಿರಿಸಿ ಕೊಂಡು ಸದ್ಬ್ರಾಹ್ಮಣರಿಗೆ ಶ್ರದ್ಧೆಯಿಂದಲೂ ಶಾಸ್ತ್ರ, ವಿಧಿಗೆ ಅನುಸಾರವಾಗಿಯೂ ಏನನ್ನು ದಾನವಾಗಿ ಕೊಡುತ್ತಾನೆಯೊ ಅದು ಶ್ರಾದ್ಧವಾಗುತ್ತದೆ.


ಋಣಗಳಲ್ಲಿ ಎಷ್ಟು ವಿಧಗಳಿವೆ?

ಋಣಗಳಲ್ಲಿ 5 ವಿಧಗಳಿವೆ: 1. ದೇವ ಋಣ, 2. ಋಷಿ ಋಣ, 3. ಪಿತೃ ಋಣ, 4.ಭೂತ ಋಣ, 5. ಮನುಷ್ಯ ಋಣ . ದೇವ, ಭೂತ, ಮ'ನುಷ್ಯ, ಋಷಿ ಋಣವನ್ನು ತೀರಿಸ ಬಹುದು. ಆದರೆ, ಮಾತಾ ಪಿತೃ ಋಣ ತೀರಿಸಲಾಗದು ಎನ್ನುತ್ತದೆ ಶಾಸ್ತ್ರ.


ಏಕೆಂದರೆ ತಾಯಿಗೆ ಸಮನಾದ ವಸ್ತು ಬೇರೊಂದಿಲ್ಲ. ಆಕೆ ನಮ್ಮನ್ನು ನವಮಾಸಗಳು ಗರ್ಭದಲ್ಲಿ ಹೊತ್ತು ಸಾಕಿ ಹೆತ್ತವಳು. ತನ್ನ ರಕ್ತ, ಮಾಂಸಗಳನ್ನೇ ಹಾಲಾಗಿಸಿ ಉಣಿಸಿರುವಳು. ಬೇಸರ ಮತ್ತು ಹೇಸಿಗೆ ಇಲ್ಲದೆ ನಮ್ಮನ್ನು ಸಾಕುತ್ತಾಳೆ. ತಂದೆಯು ಇಡಿ ಸಂಸಾರದ ಭಾರವನ್ನು ಜೀವಮಾನ ಹೊತ್ತು ಮಕ್ಕಳ ಹಿತ ಮತ್ತು ಅವರ ಭವಿಷ್ಯಕ್ಕಾಗಿ ತನ್ನ ಕಷ್ಟಗಳನ್ನೆಲ್ಲಾ ಮರೆತು ದುಡಿಯುತ್ತಾನೆ. ಇಂಥಹ ತಾಯಿ ತಂದೆಯ ಋಣವನ್ನು ತೀರಿಸಲು ನಾವು ಪಿತೃ ಪಕ್ಷದಲ್ಲಿ ಶ್ರಾದ್ಧವನ್ನು ಮಾಡ ಬೇಕು. ಮಾತಾ ಪಿತೃಗಳ ನಿಧನದ ನಂತರ ಅವರು ಪಿತೃ ದೇವತೆಗಳೆನಿಸುವ ಕಾರಣ ಶ್ರಾದ್ಧವನ್ನು ಮಾಡುತ್ತಾರೆ. ಹಿಂದೂ ಸಂಪ್ರದಾಯ ರೀತಿಯಲ್ಲಿ ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಈ ಕುರಿತ ಉಲ್ಲೇಖ ಶಂಕರಾಚಾರ್ಯರು ಭಜಗೋವಿಂದಂನಲ್ಲಿ ಇದೆ.


*ಮನುಷ್ಯ ಯಾವುದೇ ಪಾಪವನ್ನು ಮಾಡಿದರೂ ಪ್ರಾಯಶ್ಚಿತ್ತ ಇರುವುದು. ಆದರೆ, ಪಿತೃ ದ್ರೋಹಿಗಳಿಗೆ ಮಾತ್ರ ಪ್ರಾಯಶ್ಚಿತ್ತ ಇಲ್ಲ ಎಂದು ಶಾಸ್ತ್ರವು ಹೇಳುತ್ತದೆ. ಯಾಕೆ ?


ಪಿತೃಪಕ್ಷದಲ್ಲಿ ಮಾಡುವ ಕಾರ್ಯವು ಮಾತಾ ಪಿತೃಗಳಿಗಲ್ಲದೆ ಅಜ್ಜ -ಅಜ್ಜಿ, ಮುತ್ತಜ್ಜ -ಮುತ್ತಜ್ಜಿ ಇವರಿಗೂ ಸಲ್ಲುತ್ತದೆ. ಹಾಗೂ ರಕ್ತ ಸಂಬಂಧ ಇರುವ ಎಲ್ಲರಿಗೂ ಸೇರುತ್ತದೆ. ಅವರುಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಿತೃ ಪಕ್ಷ ಮಾಡುವುದರಿಂದ ಅವರ ಆಶೀರ್ವಾದವು ನಮ್ಮ ಸಂತಾನಕ್ಕೆ ಮತ್ತು ಕುಟುಂಬಕ್ಕೆ ಶ್ರೇಯಸ್ಸು ತರುತ್ತದೆ. ಈ ಪಿತೃ ಪಕ್ಷದಲ್ಲಿ ಭಕ್ತಿ, ಶ್ರದ್ಧೆಯಿಂದ ಮಾತಾ ಪಿತೃಗಳ ಕಾರ್ಯವನ್ನು ಆಚರಿಸಿ ಋಣಮುಕ್ತರಾಗೋಣ.


"ಪಿತೃಪಕ್ಷ" ಮತ್ತು ಕೆಲವು ವಿಚಾರಗಳು..

"ಪಿತೃ" ಶಬ್ಧದ ಅರ್ಥ, ಲೌಕಿಕವಾಗಿ ತಂದೆ ಎಂದಾಗದೆ, ಪೂರ್ವಜರು ಅನ್ನುವ ಅರ್ಥ ಬರುತ್ತದೆ.. ಇಂಥ ಪೂರ್ವಜರು ಸೂಕ್ಷ್ಮ ಶರೀರವನ್ನು ಧಾರಣೆ ಮಾಡಿ ಪಿತೃ ಲೋಕದಲ್ಲಿ ನಿವಾಸ ಮಾಡುತ್ತಾರೆ.. ಒಂದು ವೇಳೆ ಈ ಪಿತೃ ಗಣಕ್ಕೆ ಯಾವುದೇ ವ್ಯಕ್ತಿಯಿಂದ ಅಪ್ರಸನ್ನತೆ ಉಂಟಾದರೆ ಅಥವಾ ಇವರ ಮೇಲೆ ಯಾವುದೇ ಪ್ರಕಾರದ ಸಂಕಟ ಬಂದರೆ, ಇವರು ತಮ್ಮ ಕುಟುಂಬದ ಜನರ ಮೇಲೆ ಅಪ್ರಸನ್ನರಾಗುತ್ತಾರೆ.. ಹೀಗೆ ಅಪ್ರಸನ್ನರಾದಾಗ ಆ ಮನೆಯವರು ತುಂಬಾ ನೋವು ತಿನ್ನುವರು ಕಷ್ಟಗಳಿಗೆ ಸಿಲುಕುವರು..


ಪಿತೃಗಣಗಳೇನಾದರು ಪ್ರಸನ್ನರಾದರೆ ಅತ್ಯಂತ ಸುಖವನ್ನೂ ಕೂಡ ದಯಪಾಲಿಸುವರು..ಹೀಗೆ ತೊಂದರೆ ಆಗೋದನ್ನೆ "ಪಿತೃದೋಷ" ಅನ್ನೋದು.. ಈ ದೋಷ ತಂದೆಯ ಕಡೆಯವರಿಂದ ಬರಬಹುದು, ಸಹೋದರರ ಕಡೆಯಿಂದನು ಬರಬಹುದು, ಸ್ತ್ರೀ ಸಂಬಂಧಿತರಿಂದಲೂ ಬರಬಹುದು, ಪತ್ನಿಗೆ ಸಂಬಂಧಿತವೂ ಆಗಿರಬಹುದು.‌ಆದರೆ ಫಲ ಮಾತ್ರ ಕಠಿಣವಾಗಿಯೇ ಇರುತ್ತದೆ...


ಇಂತಹ ದೋಷವಿದ್ದರೆ ಮನೆಯ ಎಲ್ಲರ ಜಾತಕದಲ್ಲೂ 90% ಇದ್ದೇ ಇರುತ್ತದೆ.. ಸರಿಯಾಗಿ ವೈದಿಕ ಮಾಡದೇ ಇರುವುದು... ಅಣ್ಣ ತಮ್ಮಂದಿರು ಬೇರೆ ಬೇರೆಯಾಗಿ ವೈಧಿಕ ಮಾಡೋದು, ವಿದುರ ಪುರೋಹಿತರನ್ನು ಅಥವಾ ವಿದುರ ಬ್ರಾಹ್ಮಣರನ್ನು ಬ್ರಾಹ್ಮಣಾರ್ಥಕ್ಕೆ ಕರೆದು ವೈಧಿಕ ಮಾಡೋದು.‌. ಎಲ್ಲೋ ಸಂಘಗಳಲ್ಲಿ ವೈಧಿಕ ಮಾಡ್ತಿರಾ, ಕೆಲವು ಸಂಘಗಳಲ್ಲಿ ಒಂದೇ ದಿನ ಎರಡು ಮೂರು ವೈದಿಕ ಮಾಡ್ತಾರೆ, ಪ್ರಸಾದ ಎಲ್ಲಾ ಒಂದೇ ಮಾಡ್ತಾರೆ, ಕೆಲವರು ಬ್ರಾಹ್ಮಣಾರ್ಥಕ್ಕೆ ದಿನದಲ್ಲೆ ಎರಡು ಬಾರಿ ಕುಳಿತಿರ್ತಾರೆ, ಇಂಥಾ ಕೆಲಸ ಮಾಡೋದ್ರಿಂದಲೂ ದೋಷಗಳು ಆಗುತ್ತದೆ.‌. "ಸದ್ಗೃಹಸ್ತ ಬ್ರಾಹ್ಮಣರು ತೃಪ್ತಿಯಾಗಿ ಊಟ ಮಾಡಿ, ಆಶೀರ್ವದಿಸಿದರೆ ಸಾಕು, ಪಿತೃಗಳು ಪೂರ್ಣ ತೃಪ್ತಿಯಾಗುತ್ತಾರೆ.‌‌. ದೇವರ ಪೂಜೆಯಲ್ಲಿ ತಪ್ಪಾದರು ದೇವರು ಕ್ಷಮಿಸುವರು, ಆದರೆ ಪಿತೃಗಳು ಸ್ವಲ್ಪ ಕಷ್ಟ.‌ ವೈದಿಕದ ದಿನ ಮಾಡಿದ ಪ್ರಸಾದವನ್ನು ಮನೆಯವರು ಮತ್ತು ಸಂಬಂಧಿಕರು ಮಾತ್ರ ತಿನ್ನಬೇಕು, ಬೇರೆಯವರಿಗೆ ಕೊಟ್ಟರೂ ದೋಷವಾಗುವುದು.. ನಾವು ಎಷ್ಟೇ ನಿಯಮಗಳಿಂದ ವೈದಿಕ ಕಾರ್ಯ ಮಾಡಿದ್ದರೂ ಕೆಲವು ಸಮಯ ಅರಿವಿಲ್ಲದೆಯೇ ದೋಷವಾಗಿರುತ್ತೆ, ತಪ್ಪಾಗಿರುತ್ತೆ ಇದು ಸಾಮಾನ್ಯ.‌ಇಂತಹ ತಪ್ಪುಗಳನ್ನು ಕ್ಷಮಿಸಿ, ಆಶೀರ್ವದಿಸಲು, ನಾವು ಮಾಡೋ ಪಿತೃಗಳ ಕಾರ್ಯದಿಂದ ಪಿತೃಗಳು ತೃಪ್ತಿ ಆಗೋಕೆ ಇರೋ ಪಕ್ಷವೇ "ಪಿತೃಪಕ್ಷ"..! ಎಲ್ಲರ ಮನೆಯಲ್ಲಿ ಪಕ್ಷ ಮಾಡೋದು ತುಂಬಾ ಒಳ್ಳೆಯದು.‌.


ಈ ಸಮಯದಲ್ಲಿ ಒಂದು ದಿನ ನೀವು ನೀಡೋ ಆಹಾರ, ವಸ್ತ್ರಗಳಿಂದ ಪಿತೃಗಳು ತೃಪ್ತರಾಗಿ "ಒಂದು ವರ್ಷ ನಿಮ್ಮನ್ನು ಆಶೀರ್ವಾದದ ಮೂಲಕ ಕಾಯುತ್ತಾರೆ.. ಪಕ್ಷ ಮಾಡೋಕೆ ಆಗೋಲ್ಲ ಕಷ್ಟ ಅನ್ನೋವ್ರು, ಪಕ್ಷದಲ್ಲಿ ಒಂದು ದಿನ "ಬ್ರಾಹ್ಮಣ ಮುತ್ತೈದೆಯರನ್ನು ಕರೆಸಿ ಊಟಕ್ಕೆ ಹಾಕಿ, ನಿಮ್ಮ ಶಕ್ತಿಗೆ ಲೋಪವಿಲ್ಲದಂತೆ ವಸ್ತ್ರದಾನ,  ಫಲದಾನ,  ತಾಂಬೂಲ ಸಮೇತ ಕೊಟ್ಟು ನಮಸ್ಕಾರ ಮಾಡಿ.. ಮಹಾಲಯ ಅಮಾವಾಸ್ಯೆ ದಿನ ತರ್ಪಣ ಕೊಟ್ಟು ಮಾಡಿದರೆ ಅತ್ಯಂತ ಶುಭವಾಗುವುದು.‌


ಪಕ್ಷ ಶ್ರಾದ್ಧವನ್ನು ಪಾಡ್ಯ, ಷಷ್ಟಿ, ನವಮಿ, ಏಕಾದಶಿ, ದ್ವಾದಶಿ, ಚತುರ್ದಶಿ ದಿನದಂದು ಮಾಡುವಂತಿಲ್ಲ. ಶುಕ್ರವಾರ, ರೋಹಿಣಿ  ನಕ್ಷತ್ರ, ರೇವತಿ ನಕ್ಷತ್ರದಂದು ಮಾಡುವಂತಿಲ್ಲ.   ಆದರೆ ಹಿರಿಯರ ಶ್ರಾದ್ಧ ಇದೇ ದಿನವಿದ್ದರೆ ಮಾಡಬಹುದು. ಆದರೂ ನವಮಿ, ಚತುರ್ದಶಿ ದಿನದಂದು ಮಾಡುವಂತಿಲ್ಲ. ಅಕಸ್ಮಾತ್ ನವಮಿಯ ದಿನ ಅಷ್ಟಮಿಯ ಶ್ರಾದ್ಧವೂ ಮಾಡುವಂತಿದ್ದರೆ, ಚತುರ್ದಶಿಯಂದು ತ್ರಯೋದಶಿ ಶ್ರಾದ್ಧ ತಿಥಿ ಕೂಡ ಇದ್ದರೆ,  ಮಾಡಲಡ್ಡಿಯಿಲ್ಲ.


ಪಕ್ಷವೆಂದರೇನು?

ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ 15 ದಿನಗಳ ಈ ಕಾಲವನ್ನು “ಪಿತೃ ಪಕ್ಷ” “ಪಕ್ಷಮಾಸ” ಎನ್ನುತ್ತಾರೆ.ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದ ಆಶೀರ್ವಾದ ಮಾಡುತ್ತಾರೆ. ಮಾಡದವರಿಗೆ ಶಾಪವನ್ನು ನೀಡುತ್ತಾರೆ. ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ.


ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ.  ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ.  ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ.  ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೇ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”.  ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ.  ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ.  ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.


ಮಹಾಲಯ ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು.  ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ. ಅದುವೇ "ಸರ್ವಪಿತೃ" ಅಮಾವಾಸ್ಯೆ.


ಪಿತೃಗಳಿಗೆ ತಿಲ ತರ್ಪಣವೇಕೆ?

ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ). ಅವು ಅವನ ವೃದ್ಧಿಗೂ ಕಾರಾಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ.  ಚಂದ್ರನ ಕಲೆಗಳೆ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾರಣವಾಗಿವೆ.  ಭೂಮಿಯಲ್ಲಿ 24 ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ 15 ದಿನ ಹಗಲು 15 ದಿನ ರಾತ್ರಿಯಾದರೆ 1 ದಿನವಾಗುವುದು. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವತೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ.  ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.


ಪಿತೃಪಕ್ಷ (ಮಹಾಲಯ ಪಕ್ಷ)ಮಹತ್ವ:-

 ೧. ಭಾದ್ರಪದ ಕೃಷ್ಣ ಪಕ್ಷಕ್ಕೆ 'ಪಿತೃಪಕ್ಷ' ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ.

: ಯಾವ ಗೃಹಸ್ಥಾಶ್ರಮಿಯು ಸೂರ್ಯನು ಕನ್ಯಾರಾಶಿಯಲ್ಲಿದ್ದಾಗ ಶ್ರಾದ್ಧವನ್ನು ಮಾಡುವುದಿಲ್ಲವೋ, ಅಂತಹವನಿಗೆ ಪಿತೃಗಳ ಕೋಪದಿಂದಾಗಿ, ಧನ, ಪುತ್ರ ಇತ್ಯಾದಿಗಳ ಪ್ರಾಪ್ತಿಯು ಹೇಗೆ ಆಗುವುದು? ಹಾಗೆಯೇ ಎಲ್ಲಿಯ ವರೆಗೆ ಸೂರ್ಯನು ಕನ್ಯಾ ಮತ್ತು ತುಲಾ ರಾಶಿಗಳಿಂದ ವೃಶ್ಚಿಕ ರಾಶಿಗೆ ಪ್ರವೇಶಿಸುವುದಿಲ್ಲವೋ ಅಲ್ಲಿಯವರೆಗೆ ಪಿತೃಲೋಕವು ಖಾಲಿ ಇರುತ್ತದೆ. 


ಪಿತೃಲೋಕವು ಖಾಲಿಯಿರುತ್ತದೆ ಎಂದರೆ ಆ ಸಮಯದಲ್ಲಿ ಕುಲದಲ್ಲಿನ ಎಲ್ಲ ಪಿತೃಗಳು ತಮ್ಮ ವಂಶಜರಲ್ಲಿ ಆಶೀರ್ವಾದವನ್ನು ಕೊಡಲು ಬಂದಿರುತ್ತಾರೆ ಮತ್ತು ಶ್ರಾದ್ಧವನ್ನು ಮಾಡದಿದ್ದರೆ ಅವರು ನಮಗೆ ಶಾಪವನ್ನು ಕೊಟ್ಟು ಹೊರಟು ಹೋಗುತ್ತಾರೆ. ಆದುದರಿಂದ ಈ ಸಮಯದಲ್ಲಿ ಶ್ರಾದ್ಧವನ್ನು ಮಾಡುವುದು ಮಹತ್ವದ್ದಾಗಿದೆ.


ಶ್ರಾದ್ಧವನ್ನು ಮಾಡುವುದರಿಂದ ಯಾವ ಫಲಪ್ರಾಪ್ತಿಯಾಗುತ್ತದೆ ಎಂಬುದರ ಬಗ್ಗೆ ಗರುಡಪುರಾಣದ ಒಂದು ಶ್ಲೋಕವು ಮುಂದಿನಂತಿದೆ ಆಯುಷ್ಯ, ಪುತ್ರ, ಯಶಸ್ಸು, ಸ್ವರ್ಗ, ಕೀರ್ತಿ, ಪುಷ್ಠಿ, ಬಲ, ಲಕ್ಷ್ಮೀ, ಪಶು, ಸೌಖ್ಯ, ಧನ, ಧಾನ್ಯ ಇವು ಪಿತೃಪೂಜೆಯಿಂದ, ಅಂದರೆ ಶ್ರಾದ್ಧದಿಂದ ಸಿಗುತ್ತವೆ.


ಮುಂದುವರೆಯುವುದು....

 ಡಾ. ಗುರುರಾಜ ಪೋಶೆಟ್ಟಿಹಳ್ಳಿ , 

ಸಂಸ್ಕೃತಿ ಚಿಂತಕರು , ಬೆಂಗಳೂರು – 9739369621


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top