ಬೆಂಗಳೂರು: ಎನ್‌ಎಂಐಟಿ ಓರಿಯೆಂಟೇಶನ್ ಕಾರ್ಯಕ್ರಮ, ಟಿಸಿಎಸ್ ಜತೆ ಒಪ್ಪಂದ

Upayuktha
0


ಬೆಂಗಳೂರು: ‘2047ನೇ ಇಸವಿಯ ಹೊತ್ತಿಗೆ ನಮ್ಮ ದೇಶವನ್ನು ಪರಿಪೂರ್ಣ ಅಭಿವೃದ್ಧಿ ಸಾಧಿಸಿದ ರಾಷ್ಟ್ರವನ್ನಾಗಿ ಪರಿವರ್ತಿಸುವುದು ಹಾಗೂ ವಿಶ್ವಗುರು ಸ್ಥಾನಕ್ಕೇರಿಸುವುದು ಭಾರತ ಸರ್ಕಾರದ ಅಪೇಕ್ಷೆ. ಇಂದಿನ ಯುವಜನತೆಗೆ, ಪ್ರಧಾನಿಯವರು ಹೇಳಿದಂತೆ, ಇದು ನಿಜಕ್ಕೂ ಅಮೃತಕಾಲ. ಏಕೆಂದರೆ 2047ನೇ ಇಸವಿಯಲ್ಲಿ, ಅಭಿವೃದ್ಧಿ ಹೊಂದಿದ ರಾಷ್ಟ್ರದ ಹೆಮ್ಮೆಯ ಪ್ರಜೆಗಳಾಗಿ ಸ್ವಾತಂತ್ರ್ಯದ ನೂರನೇ ವರ್ಷವನ್ನು ಅವರು ಆಚರಿಸಬಹುದು. ನಮ್ಮ ಯುವ ಜನತೆ ಈ ಗುರುತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ ಎಂಬ ಭರವಸೆ ನನಗಿದೆ. ಏಕೆಂದರೆ ಅವರನ್ನು ಪರಿಣತ ತಂತ್ರಜ್ಞರನ್ನಾಗಿ ರೂಪಿಸಲು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವೂ ಸೇರಿದಂತೆ ಸಮರ್ಥ ವಿದ್ಯಾಸಂಸ್ಥೆಗಳು ಸಜ್ಜಾಗಿವೆ. ಟಿ.ಸಿ.ಎಸ್ ಕೂಡ ಈ ಮಹತ್ವದ ಯಾನದಲ್ಲಿ ಕೈಜೋಡಿಸಲಿದೆ' ಎಂದು ಪ್ರತಿಷ್ಠಿತ ಉದ್ಯಮ ಸಂಸ್ಥೆ ಟಾಟಾ ಕನ್‍ಸಲ್ಟೆನ್ಸಿ ಸರ್ವಿಸಸ್ (ಟಿ.ಸಿ.ಎಸ್) ನ ವಿದ್ವತ್ ವಿನಿಮಯ ವಿಭಾಗದ ಮುಖ್ಯಸ್ಥ ಡಾ. ಕೆ.ಎಂ. ಸುಸೀಂದ್ರನ್ ನುಡಿದರು.


ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ 2023-2027ರ ಅವಧಿಯ ಇಂಜಿನಿಯರಿಂಗ್ ಕಲಿಕೆಯ ಉದ್ಘಾಟನಾ ಸಮಾರಂಭವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಇದೀಗ ತಾನೆ ನಮ್ಮ ಸಂಸ್ಥೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಜತೆ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ನಾವು ಆಗಾಗ್ಗೆ ಬಂದು ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹಾಗೂ ಕೌಶಲ್ಯದ ಸಾಮರ್ಥ್ಯಗಳನ್ನು ಪರಿಶೀಲಿಸಲಿದ್ದೇವೆ ಮತ್ತು ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ನೆರವಾಗಲಿದ್ದೇವೆ’ ಎಂದು ತಿಳಿಸಿದರು.


‘ಇತ್ತೀಚಿನ ವರ್ಷಗಳಲ್ಲಿ ‘ನಿರಂತರ ಕಲಿಕೆ’ ಅನಿವಾರ್ಯವಾಗಿದೆ. ಕಾರಣ- ತಂತ್ರಜ್ಞಾನದ ಅನ್ವೇಷಣೆಗಳು ಪ್ರತಿದಿನ, ಪ್ರತಿಕ್ಷಣ ಏರುಮುಖವಾಗಿ ಸಕಾರಾತ್ಮಕ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಪದವಿ ಪಡೆದ ಮೇಲೂ ಕಲಿಕೆ ನಿರಂತರವಾಗಿ ಸಾಗಬೇಕಿದೆ. ಆಗಲೇ ನಾವು ನಮ್ಮ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ. ಇದಲ್ಲದೆ ವಿದ್ಯಾರ್ಥಿಗಳು ತಾವು ವಿಧಿವತ್ತಾಗಿ ಕಲಿಯುವ ವಿದ್ಯೆಯ ಜತೆ, ತಮ್ಮ ಸ್ವಯಿಚ್ಛೆಯಿಂದ ಪ್ರೀತಿಸುವ ವಿಷಯವನ್ನೂ ಅಧ್ಯಯನಿಸಬೇಕು. ಇದಕ್ಕಾಗಿ ಪ್ರತಿದಿನ ಹತ್ತು ನಿಮಿಷ ಮೀಸಲಿಟ್ಟರೂ ಸಾಕು. ಕಲಿಯುವ ವಿದ್ಯೆ ಇಂಜಿನಿಯರಿಂಗ್ ಆದರೂ ಪ್ರೀತಿಸುವ ವಿಷಯ ಯಾವುದಾದರೂ ಆಗಬಹುದು- ಸಮಾಜಸೇವೆ, ರಾಜಕೀಯ, ಆಡಳಿತ ಇತ್ಯಾದಿ ಇತ್ಯಾದಿ’, ಎಂದು ಅವರು ಅಭಿಪ್ರಾಯಿಸಿದರು.


ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ ವ್ಯಾಸಂಗ ಮಾಡಲು ಸಂಸ್ಥೆಯಲ್ಲಿ ನೊಂದಾವಣೆಯಾಗಿರುವ ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಹಾಜರಿದ್ದರು. ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿ, ಸಂಸ್ಥೆಯಲ್ಲಿ ಕೌಶಲ್ಯದ ಅಭಿವೃದ್ಧಿಗೆ ಇರುವ ಅವಕಾಶಗಳ ಬಗ್ಗೆ ಸಭಿಕರ ಗಮನ ಸೆಳೆದರು. ವಿಶೇಷ ಆಹ್ವಾನಿತರಾಗಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಹಾಗೂ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್ ಉಪಸ್ಥಿತರಿದ್ದರು.


ನಿಟ್ಟೆ ಶಿಕ್ಷಣ ಸಂಸ್ಥೆಗಳ ಹಿರಿಯ ಸಲಹೆಗಾರ ಹಾಗೂ ಕರ್ನಾಟಕ ಕೇಂದ್ರೀಯ ವಿಶವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತ, ‘ವಿದ್ಯಾರ್ಥಿಗಳು ಪ್ರೌಢಾವಸ್ಥೆ ತಲುಪಿ ಉನ್ನತ ಶಿಕ್ಷಣ ಕಲಿಕೆಗೆ ದಾಖಲಾಗಿದ್ದಾರೆ. ಇಲ್ಲಿ ಮೊದಲು ಆಗಬೇಕಾದದ್ದು ಅವರು ಬಾಲ್ಯದ ಮನಸ್ಥಿತಿಯಿಂದ ಹೊರಬರುವುದು; ತಮ್ಮ ಜ್ಞಾನ ಹಾಗೂ ಕೌಶಲ್ಯದ ಅಭಿವೃದ್ಧಿಗೆ ನಿರಂತರ ಯತ್ನಿಸುವುದು. ತಮ್ಮ ಕಲಿಕೆಯ ನಂತರದಲ್ಲಿ ತಮ್ಮ ವಿದ್ವತ್ತು ಹಾಗೂ ಕುಶಲತೆಗಳನ್ನು ಬಳಸಿ ನಮ್ಮ ಗ್ರಾಮೀಣ ಬದುಕಿನಲ್ಲಿ ತಂತ್ರಜ್ಞಾನ ಆಧಾರಿತ ಸುಧಾರಣೆಗಳನ್ನು ಜಾರಿಗೆ ತರುವುದು ನಮ್ಮ ವಿದ್ಯಾರ್ಥಿಗಳ ಧ್ಯೇಯವಾಗಬೇಕು. ಆಗಲೇ ಅವರು ಕಲಿತದ್ದು ಸಾರ್ಥಕ ಅನ್ನಿಸುವುದು. ಸಮಸ್ಯೆಯ ವಿಶ್ಲೇಷಣೆ, ವಿವೇಚನೆ ಹಾಗೂ ಸೂಕ್ತ ಅನ್ವೇಷಣೆ ನಮ್ಮ  ವಿದ್ಯಾರ್ಥಿಗಳ ಬದುಕಿನ ಭಾಗವಾಗಬೇಕು. ಆಗ ಅವರು ವಿಶ್ವದೆಲ್ಲೆಡೆ ಸಲ್ಲುತ್ತಾರೆ’ ಎಂದರು.


ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾದ ಮುಖ್ಯಸ್ಥೆ ಡಾ. ಎನ್. ನಳಿನಿ ವಂದನಾರ್ಪಣೆ ನೆರವೇರಿಸಿದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top