ಮೂಡುಬಿದಿರೆ: ಹಳೆಗನ್ನಡ ಕಾಲದ ಜೈನ ಕವಿಯಾದ ನಾಗಚಂದ್ರನು ತನ್ನ ಕಾವ್ಯಗಳಿಂದಾಗಿ ಅಭಿನವ ಪಂಪನೆಂದೇ ಗುರುತಿಸಿಕೊಂಡವನು. ಕಾವ್ಯಕ್ಕೆ ಮೊತ್ತ ಮೊದಲು ಚೌಕಟ್ಟನ್ನು ನಿರ್ಮಿಸಿಕೊಟ್ಟ ಪಂಪನ ಮಾದರಿಯಲ್ಲಿಯೇ ನಾಗಚಂದ್ರನು ಕೂಡಾ ಅಪೂರ್ವ ಕಾವ್ಯಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ಎಂದು ಸಾಹಿತಿಗಳು ಹಾಗೂ ಉಪನ್ಯಾಸಕರೂ ಆಗಿರುವ ಟಿ.ಎ.ಎನ್ ಖಂಡಿಗೆ ಅವರು ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ಜೈನ ಪ.ಪೂ.ಕಾಲೇಜಿನ ಜಂಟಿ ಆಶ್ರಯದಲ್ಲಿ ಜೈನ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆದ “ಕವಿ ನಾಗಚಂದ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
‘ಮಲ್ಲಿನಾಥ ಪುರಾಣ’ ಹಾಗೂ ‘ರಾಮಚಂದ್ರ ಚರಿತ ಪುರಾಣ’ ಎಂಬೆರಡು ತನ್ನ ಮೇರು ಕೃತಿಗಳೊಂದಿಗೆ ಜಿನೋಪಾಸನೆ ಹಾಗೂ ಕಲೋಪಾಸನೆ ಎರಡನ್ನೂ ಮಾಡಿಕೊಂಡು ಬಂದ ನಾಗಚಂದ್ರನು ಒಂದರಲ್ಲಿ ಧರ್ಮ ಹಾಗೂ ಇನ್ನೊಂದರಲ್ಲಿ ಕಾವ್ಯಧರ್ಮವನ್ನು ಇಟ್ಟುಕೊಂಡು ಪಂಪನ ಮಾದರಿಯಲ್ಲಿಯೇ ಕಾವ್ಯ ರಚಿಸಿದ್ದಾನೆ ಎಂದರು.
ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷರಾದ ಕೆ.ವೇಣುಗೋಪಾಲ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿರುವ ಉದಯಕುಮಾರ್ ಅವರು ಸ್ವಾಗತಿಸಿ ಕನ್ನಡ ಉಪನ್ಯಾಸಕಿ ನಿಶಾ ಜೈನ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


