ಮೈಸೂರು: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮೈಸೂರಿನ ದಲಿತ ಕೇರಿಯಲ್ಲಿ ಸಾಮರಸ್ಯ ನಡೆಯನ್ನು ನಡೆಸಿದ್ದು ಅಲ್ಲಿನ ನೂರಾರು ನಿವಾಸಿಗಳು ಶ್ರೀಗಳ ಆಗಮನ ದರ್ಶನ ಮನೆ ಭೇಟಿ, ರಾಮ ನಾಮಜಪ, ಮಂಗಳಾರತಿ, ಉಭಯ ಕುಶಲೋಪರಿ, ಅನುಗ್ರಹದ ಶುಭ ನುಡಿಗಳಿಂದ ಅಕ್ಷರಶಃ ಭಕ್ತಿ ಉತ್ಸಾಹಗಳಿಂದ ಮಿಂದೆದ್ದರು.
ಅವರು ಮೈಸೂರಿನ ಸಂಘ ಪರಿವಾರದ ಧರ್ಮಜಾಗರಣ ಮತ್ತು ಸಾಮರಸ್ಯ ವೇದಿಕೆಗಳು ಹಾಗೂ ಶ್ರೀಗಳ ಚಾತುರ್ಮಾಸ್ಯ ವ್ರತ ಸಮಿತಿಯ ಸಂಯುಕ್ತ ಸಂಯೋಜನೆಯಲ್ಲಿ ಮೈಸೂರಿನ ಕೆಸರೆ ರಾಜೇಂದ್ರ ನಗರದ ದಲಿತರ ಕೇರಿಯಲ್ಲಿ ಮಂಗಳವಾರ ಸಂಜೆ ಶ್ರೀಗಳ ಭೇಟಿ ಹಿಂದು ಧರ್ಮಜಾಗೃತಿಯ ಸಂದೇಶವನ್ನು ನೀಡಿದರು.
ಬಡಾವಣೆಯುದ್ದಕ್ಕೂ ನಿವಾಸಿಗಳು ರಸ್ತೆಯನ್ನು ಸ್ವಚ್ಛಗೊಳಿಸಿ, ಸಾಲು ಸಾಲು ರಂಗೋಲಿ ಹಾಕಿ, ಕ್ವಿಂಟಾಲ್ ಗಟ್ಟಲೆ ಹೂವಿನ ರಾಶಿಯನ್ನು ಸ್ವಾಮೀಜಿಯವರ ಮೇಲೆ ಮಳೆಗೈದು ಬರಮಾಡಿಕೊಂಡ ದೃಶ್ಯವೇ ಅವರೆಲ್ಲರ ಭಕ್ತಿ ಸಡಗರಗಳಿಗೆ ಸಾಕ್ಷಿಯಾಗಿತ್ತು.
ನಿವಾಸಿಗಳ ಪ್ರಮುಖರು ಕೇರಿಯ ದ್ವಾರದಲ್ಲಿ ನಿರಂತರ ಭಾರತ ಮಾತೆ, ಹಿಂದೂ ಧರ್ಮ ಶ್ರೀ ರಾಮ ಶ್ರೀ ಕೃಷ್ಣರಿಗೆ ಜೈಕಾರ ಮೊಳಗಿಸುತ್ತಾ ಸ್ಯಾಕ್ಸೋಫೋಬ್ ವಾದನ ಚಂಡೆ ಭಜನೆಗಳ ಮೂಲಕ ಸ್ವಾಮೀಜಿ ಯವರ ಪಾದ ತೊಳೆದು ಓಕುಳಿಯಾರತಿ ಬೆಳಗಿ ಹಾರಾರ್ಪಣೆಯೊಂದಿಗೆ ಸ್ವಾಗತಿಸಿದರು.
ಮುಂದೆ ಕಂಡದ್ದೆಲ್ಲ ಹಬ್ಬದ ವಾತಾವರಣ. ಐದಾರು ಮನೆಯೊಳಗೆ ಪ್ರವೇಶಿಸಿ ರಾಮದೀಪ ಬೆಳಗಿ ಮನೆ ಮಂದಿಯ ಪರಿಚಯ ಮಾಡಿಕೊಂಡು ಉಭಯಕುಶಲೋಪರಿ ನಡೆಸಿ ಹಿಂದು ಸಂಸ್ಕಾರಗಳನ್ನು ನಿತ್ಯ ನಡೆಸಿಕೊಂಡು ಬರುವಂತೆ ಸೂಚಿಸಿ ಆಶೀರ್ವಾದಗೈದರು. ಬಳಿಕ ಬಡಾವಣೆಯ ಎರಡು ಮೂರು ಮಂದಿರಗಳಿಗೂ ತೆರಳಿ ಮಂಗಳಾರತಿ ಬೆಳಗಿದರು.
ಬಳಿಕ ಅಲ್ಲೇ ಮಂದಿರದ ಅರಳಿ ಕಟ್ಟೆಯ ಬಳಿ ನಡೆದ ಧರ್ಮಸಭೆಯಲ್ಲೂ ಅನುಗ್ರಹ ಸಂದೇಶ ನೀಡಿದ ಶ್ರೀಗಳು ತಮ್ಮನ್ನು ಈ ದಿನ ಬರಮಾಡಿಕೊಂಡು ತೋರಿದ ಪ್ರೀತಿ ಅಭಿಮಾನಗಳಿಂದ ಮನತುಂಬಿ ಬಂದಿದೆ. ಈ ಬಗೆಯ ಧರ್ಮ ಶ್ರದ್ಧೆಯನ್ನು ಜೀವನ ಪರ್ಯಂತ ಅಳವಡಿಸಿಕೊಂಡು ರಾಮಕೃಷ್ಣ ಸಹಿತ ನಮ್ಮ ದೇವ ದೇವತೆಯರ ಗುರು ಹಿರಿಯರ ಸ್ಮರಣೆಗಳನ್ನು ನಿತ್ಯ ನಿರಂತರ ಮಾಡಿಕೊಂಡು ಬರುವಂತೆ ತಿಳಿಸಿದರು.
ಉದ್ಯಮಿ ವಾಸುದೇವ ಭಟ್ ಸಂಘ ಪರಿವಾರದ ಅಕ್ಷಯ್, ಗಣೇಶ್ ಶೆಣೈ, ಸೇರಿದಂತೆ ಗಣ್ಯ ಮಹನೀಯರು ಉಪಸ್ಥಿತರಿದ್ದರು. ಕುರಿಮಂಡಿ ಬಡಾವಣೆಯ ಮುಖಂಡರಾದ ದೊರೆ, ನಾಗರಾಜು, ವಿನೋದ್ ಕುಮಾರ್, ವೇಲು, ಕಾರ್ತಿಕ್ ಮತ್ತು ಸಾಮರಸ್ಯ ವಿಭಾಗದ ಡಾ. ಆನಂದ್ ಕುಮಾರ್, ಗಿರೀಶ್, ಸಾಮಾಜಿಕ ನ್ಯಾಯ ವೇದಿಕೆಯ ಶಾಮ್ ಭಟ್, ಶ್ರೀಗಳ ಆಪ್ತರಾದ ಕೃಷ್ಣ ಭಟ್ ವಾಸುದೇವ ಭಟ್, ಶ್ರೀನಿವಾಸ ಪ್ರಸಾದ್, ಮೊದಲಾದವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಯೋಜಿಸಿದರು. ಎಲ್ಲ ಮನೆಗಳಿಗೆ ಶ್ರೀ ಮಠದ ವತಿಯಿಂದ ಶ್ರೀ ಕೃಷ್ಣ ಪ್ರಸಾದವನ್ನು ವಿತರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


