ಮಡಿಕೇರಿ: ಮಡಿಕೇರಿ ಬಳಿಯ ಮೇಕೇರಿ ಗ್ರಾಮದಲ್ಲಿ ಶುಕ್ರವಾರ ಬೃಹತ್ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಮೇಕೇರಿಯ ಸ್ವಾಗತ ಯುವಕ ಸಂಘ, ಸುಭಾಷ್ ನಗರದ ವಿನಾಯಕ ಗೆಳೆಯರ ಬಳಗ ಹಾಗೂ ಮೇಕೇರಿಯ ಮಹಿಳಾ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಸ್ವಚ್ಚತಾ ಕಾರ್ಯದಲ್ಲಿ ಪುರುಷರು ಮಹಿಳೆಯರಾದಿಯಾಗಿ ಸುಮಾರು 50ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಪಾಲ್ಗೊಂಡು ಸ್ವಚ್ಚ ಗ್ರಾಮ ಸಂಕಲ್ಪ ಕೈಗೊಂಡರು.
ಸುಭಾಶ್ ನಗರ ಜಂಕ್ಷನ್‌ನಿಂದ ಮೇಕೇರಿ ಶಾಲೆವರೆಗೆ, ಶಕ್ತಿನಗರ ಜಂಕ್ಷನ್‌ನಿಂದ ಮೇಕೇರಿ ಶಾಲೆವರೆಗೆ, ಬಿಳಿಗೇರಿ ಜಂಕ್ಷನ್‌ನಿಂದ ಮೇಕೇರಿ ಶಾಲೆವರೆಗೆ ಹಾಗೂ ಕಾವೇರಿ ಬಡಾವಣೆಯಿಂದ ಮೇಕೇರಿ ಶಾಲೆವರೆಗೆ ಸ್ವಚ್ಚತಾ ಕಾರ್ಯ ನಡೆಯಿತು. ಈ ಸಂದರ್ಭ ಮುಖ್ಯ ರಸ್ತೆಯ 2 ಬದಿಗಳಲ್ಲಿ ಪ್ಲಾಸ್ಟಿಕ್, ಮದ್ಯದ ಬಾಟಲಿ ಸೇರಿದಂತೆ, ತಿಂಡಿಪೊಟ್ಟಣಗಳ ತ್ಯಾಜ್ಯ, ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿ ಸೇರಿ 2 ಪಿಕ್ ಅಪ್ ಲೋಡ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಇದೇ ಸಂದರ್ಭ ರಸ್ತೆಯ 2 ಬದಿಯ ಕುರುಚಲು ಕಾಡು ಗಿಡಗಳನ್ನು ಕಡಿದು ತೆರವುಗೊಳಿಸಲಾಯಿತು.
ಗ್ರಾಮದ ನಾಲ್ಕೂ ದಿಕ್ಕಿನಿಂದ ಸ್ವಚ್ಫತಾ ಕಾರ್ಯದೊಂದಿಗೆ ಶಾಲಾ ಮೈದಾನಕ್ಕೆ ಆಗಮಿಸಿದ ಗ್ರಾಮಸ್ಥರು ಶಾಲಾ ಮೈದಾನ ಹಾಗೂ ಅಂಗನವಾಡಿ ಸುತ್ತಲೂ ಬೆಳೆದು ನಿಂತಿದ್ದ ಕಾಡು ಕಸವನ್ನು ತೆರವುಗೊಳಿಸಿ ಮೈದಾನವನ್ನು ಶುಚಿಗೊಳಿಸಿದರು. ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡ ಸ್ವಚ್ಚತಾ ಕಾರ್ಯ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಿತು.
ಈ ಸಂದರ್ಭ ಮಾತನಾಡಿದ ಸ್ವಾಗತ ಯುವಕ ಸಂಘದ ಅಧ್ಯಕ್ಷರಾದ ಟಿ.ಎನ್. ಉಮೇಶ್, ಮೇಕೇರಿ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿ ಮಾಡಿ ಆ ಮೂಲಕ ಉಳಿದ ಗ್ರಾಮಗಳಿಗೆ ಪ್ರೇರಣೆ ಹಾಗೂ ಮಾದರಿಯಾಗಿಸಬೇಕೆಂಬ ಸದುದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೃಹತ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಮೇಕೇರಿಯ ಸ್ವಾಗತ ಯುವಕ ಸಂಘ, ಸುಭಾಷ್ ನಗರದ ವಿನಾಯಕ ಗೆಳೆಯರ ಬಳಗ ಹಾಗೂ ಮೇಕೇರಿಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಉರಿ ಬಿಸಿಲಿನಲ್ಲೂ ಸ್ವಚ್ಚತಾ ಕಾರ್ಯ ಮಾಡಿ ಗಮನಸೆಳೆದರು. ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದವರಿಗೆ ಕುಡಿಯುವ ನೀರು, ಜ್ಯೂಸ್ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸ್ವಾಗತ ಯುವಕ ಸಂಘದಿಂದ ವ್ಯವಸ್ಥೆ ಮಾಡಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ