ಕೆ.ಆರ್.ಪೇಟೆ: ಪಟ್ಟಣದ ಸುಭಾಷ್ ನಗರದಲ್ಲಿ ಇರುವ ಶ್ರೀ ಗುರು ಚನ್ನಬಸವೇಶ್ವರ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕೆ.ಎನ್.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಸಭೆಯನ್ನು ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎನ್. ಪರಮೇಶ್ವರ್ ಅವರು, ಸಂಘವು ಕಳೆದ 12ವರ್ಷಗಳ ಹಿಂದೆ ಆರಂಭವಾಗಿದ್ದು ಷೇರುದಾರರು ಹಾಗೂ ಠೇವಣಿದಾರರ ಸಹಕಾರದಿಂದ ಲಾಭದತ್ತ ಮುನ್ನಡೆಯುತ್ತಿದೆ. ಸಂಘದಲ್ಲಿ ಇ-ಸ್ವಾಂಪಿಂಗ್ ವ್ಯವಸ್ಥೆ, ನಿಶ್ಚಿತ ಠೇವಣಿ ಹಾಗೂ ಪಿಗ್ಮಿ ಮೇಲೆ ಸಾಲ ನೀಡಲಾಗುತ್ತಿದೆ. ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.
ಠೇವಣಿ ಮೇಲೆ ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುವುದು. ಹಾಗಾಗಿ ಶೇರುದಾರರು ನಮ್ಮ ಸಂಘದ ಬ್ಯಾಂಕಿಂಗ್ ಶಾಖೆಯಲ್ಲಿ ಉಳಿತಾಯ ಖಾತೆ ತೆರೆದು ವ್ಯವಹಾರ ಮಾಡಿದರೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೂ ಹಣಕಾಸು ವ್ಯವಹಾರ ಮಾಡಬಹುದಾಗಿದೆ. ಸಂಘದ ಎಲ್ಲಾ ನಿರ್ದೇಶಕರು ಹೊಸ ಹೊಸ ಸದಸ್ಯರನ್ನು ನೊಂದಾಯಿಸುವ ಮೂಲಕ ಸಂಘದ ಸದೃಢತೆಗೆ ಸಹಕಾರ ನೀಡಬೇಕು. ಹೆಚ್ಚು ಸದಸ್ಯರು ಇದ್ದರೆ ಸಂಘದ ವಹಿವಾಟು ಹೆಚ್ಚಾಗಲಿದೆ. ಇದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ಹೆಚ್ಚು ಲಾಭ ಗಳಿಸುವತ್ತ ಸಂಘವು ಬೆಳೆದರೆ ಶೇರುದಾರರಿಗೆ ಡಿವಿಡೆಂಡ್ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಷೇರುದಾರರಾದ ಎಸ್.ಇ.ಚನ್ನರಾಜು, ಮೆಡಿಕಲ್ ಮಂಜು, ಬ್ಯಾಂಕ್ ನಂಜುಂಡಪ್ಪ, ಬಸವರಾಜು ಸೇರಿದಂತೆ ಹಲವಾರು ಶೇರುದಾರರು ಸಂಘದ ಅಭಿವೃದ್ದಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಸಾಲವನ್ನು ನೀಡುವಾಗ ವಾಪಸ್ ಮರುಪಾವತಿ ಮಾಡುವಂತಹ ವ್ಯಕ್ತಿಗಳಿಗೆ ಮಾತ್ರ ಸಾಲ ನೀಡಬೇಕು. ಸಾಲಕ್ಕೆ ಸೂಕ್ತ ಭದ್ರತೆ ಅಥವಾ ಜಾಮೀನುದಾರರನ್ನು ಪಡೆದು ಸಾಲ ನೀಡಬೇಕು. ಬಾಕಿ ಇರುವ ಸಾಲ ವಸೂಲಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯನಿರ್ವಣಾಧಿಕಾರಿ ಸೋಮಶೇಖರ್ ಸಂಘದ ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಜಗದಾಂಬ ಮಹಾದೇವಪ್ಪ, ನಿರ್ದೇಶಕರಾದ ಪಿ.ಬಿ.ಮಂಜುನಾಥ್, ಜಿ.ವಿ.ಜಗದೀಶ್, ಎಸ್.ಎಂ.ಮಂಜುನಾಥ್, ಹೆಚ್.ಎಂ. ಶ್ರೀಧರ್, ಎಂ.ಎಸ್. ಗಂಗಾಧರ್, ಸನೀತಾ ಬಸವರಾಜು, ಸಿ.ಎನ್.ಪ್ರಕಾಶ್, ಸತೀಶ್ ಕುಮಾರ್, ಕೆ.ಪಿ.ಕೃಪಾಶಂಕರ್, ಕೆ.ಎನ್. ದೀಪು, ಪುಟ್ಟಸ್ವಾಮಪ್ಪ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ಸೋಮಶೇಖರ್ ಹಾಗೂ ಸಂಘದ ಶೇರುದಾರರು ಮಹಾಸಭೆಯಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ