ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಮಂಜಮ್ಮ ಮೊಗಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್ ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಎಚ್.ಕೆ.ಅಶೋಕ್ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಆರಂಭವಾದ ದಿನಗಳಿಂದ, ಇಂದಿನವರೆಗೂ ಸೇವಾ ಭಾವನೆ ಹೊಂದಿರುವ ಉತ್ತಮ ಆಡಳಿತ ಮಂಡಳಿಯು ಅಧಿಕಾರ ನಡೆಸಿದೆ. ಇದರಿಂದಾಗಿ ಸತತ ಆಧಾಯ ಪಡೆಯುತ್ತಾ ಬಂದಿದ್ದು ಶೇಕಡಾ 100ರಷ್ಟು ಸಾಲ ವಸೂಲಾತಿ ಮಾಡಿ ಸಂಘವನ್ನು ಉತ್ತಮ ಸ್ಥಿತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಇದಕ್ಕಾಗಿ ಈ ಭಾರಿಯೂ ಡಿಸಿಸಿ ಬ್ಯಾಂಕ್ ವತಿಯಿಂದ ಉತ್ತಮ ಸಂಘ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು. ಅಘಲಯಕ್ಕೆ ಡಿಸಿಸಿ ಬ್ಯಾಂಕ್ ಮಂಜೂರು ಮಾಡಲಾಗಿದೆ ರಿಸರ್ವ್ ಬ್ಯಾಂಕಿನ ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ಸಿಕ್ಕ ತಕ್ಷಣವೇ ಬ್ಯಾಂಕಿನ ಶಾಖೆ ಆರಂಭಿಸಲಾಗುವುದು ಎಂದು ಅಶೋಕ್ ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎ.ಎನ್.ಜಾನಕೀರಾಂ ಮಾತನಾಡಿ, ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ ಅವುಗಳ ಉಳಿವಿಗೆ ಎಲ್ಲರೂ ಸೇವಾ ಭಾವನೆಯಿಂದ ಕೆಲಸ ಮಾಡಬೇಕು. ತಾಲ್ಲೂಕಿನಲ್ಲಿ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ವಹಿವಾಟು ನಡೆಸುವ ಮೂಲಕ ಒಳ್ಳೆಯ ಹೆಸರು ಗಳಿಸಿದೆ. ಸೊಸೈಟಿಗಳಿಗೆ ಪಡಿತರ ವಿಭಾಗಕ್ಕೆ ಕಳಪೆ ಗುಣಮಟ್ಟದ ಅಕ್ಕಿ ಮತ್ತು ರಾಗಿ ಪೂರೈಕೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ತಾಲ್ಲೂಕಿನಾದ್ಯಂತ ಕೇಳಿ ಬರುತ್ತಿವೆ. ಈ ಬಗ್ಗೆ ಪಡಿತರ ಪೂರೈಕೆ ಮಾಡುತ್ತಿರುವ ಏಜೆನ್ಸಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಶಾಸಕರ ನೇತೃತ್ವದಲ್ಲಿ ಸಭೆ ಕರೆದು ಗುಣಮಟ್ಟದ ಪಡಿತರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಎ.ಮುರುಳೀಧರ್ ಸಂಘದ ವಾರ್ಷಿಕ ವರದಿ ಮಂಡಿಸಿ ಶೇರುದಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಅಲ್ಲದೆ ಇನ್ನುಮುಂದೆ ಸಂಘದ ವಿವಿದೋದ್ದೇಶ ಸಹಕಾರ ಸಂಘವಾಗಿ ಮಾರ್ಪಾಡು ಹೊಂದಲಿದ್ದು ಸಂಘವು ಬೇರೆ ಬೇರೆ ವ್ಯವಹಾರಗಳನ್ನು ಮಾಡಲು ಸಹಕಾರಿ ಯಾಗುತ್ತದೆ ಎಂದರು.
ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಾರ್ಷಿಕ ಸುಮಾರು 7 ಕೋಟಿ ರೂಗಳಷ್ಟು ವ್ಯವಹಾರ ನಡೆಸುತ್ತಿದೆ. ಸಾಲಮನ್ನಾ ಯೋಜನೆ ಅಡಿಯಲ್ಲಿ ಸುಮಾರು 624 ರೈತರ 3 ಕೋಟಿ 70 ಲಕ್ಷ ರೂ ಮನ್ನವಾಗಿರುತ್ತದೆ. ಸಂಘದಲ್ಲಿ ಸುಮಾರು 1200 ಮಂದಿ ಶೇರುದಾರರಿದ್ದಾರೆ. ಸಂಘಕ್ಕೆ ಎಲ್ಲಾ ರೈತರು ಶೇರುದಾರರಾಗುವ ಮೂಲಕ ಸಂಘದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷದ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಶೇರುದಾರರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್. ರಮೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎ.ಎಸ್.ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ರೂಪೇಶ್, ಅಶಾ ನಾಗೇಂದ್ರ, ಹಿರಿಯ ಸಹಕಾರಿ ಧುರೀಣರಾದ ಧರಣಿ ಶಿವನಂಜೇಗೌಡ, ಸಂಘದ ಉಪಾಧ್ಯಕ್ಷ ನಾಗರಘಟ್ಟ ಮಂಜು, ನಿರ್ದೇಶಕರಾದ ಎನ್.ಎಸ್.ಮಂಜೇಗೌಡ, ಎ.ಎಸ್. ಶ್ರೀಧರ್, ಎನ್.ಡಿ. ಕೃಷ್ಣಸಿಂಗ್, ಎನ್.ಎಸ್.ಆಶಾನಾಗೇಂದ್ರ, ರಾಜೇಗೌಡ ಉರುಫ್ ಯೋಗೇಗೌಡ, ದೇವಮ್ಮ, ಪಾರ್ಥಸಾರಥಿ, ನಾರಾಯಣಪುರ ಮಂಜುನಾಥ್, ಎನ್.ಡಿ.ರಾಮೇಗೌಡ, ಅಘಲಯ ಡೇರಿ ಅಧ್ಯಕ್ಷ ಕುಮಾರ್, ಗ್ರಾ.ಪಂ.ಉಪಾಧ್ಯಕ್ಷ ಯೋಗೇಶ್, ಸಂಘದ ಸಿಇಓ ಮುರುಳೀಧರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಹೋಬಳಿ ಲೋಕೇಶ್, ಶಿವಲಿಂಗೇಗೌಡ, ಎ.ಟಿ. ಶಂಕರ್ ನಾರಾಯಣ್, ಸಂಪತ್ರು, ಸಂಘದ ಮಾರಾಟ ಗುಮಾಸ್ತರಾದ ಎ.ಸಿ.ರಾಜೇಶ್, ರಾಮೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಶೇ.100ರಷ್ಟು ಸಾಲ ವಸೂಲಾತಿ ಮಾಡಿರುವ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ