ಮಂಡ್ಯದಿಂದ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕಣಕ್ಕಿಳಿದರೆ 1 ಲಕ್ಷ ಮತಗಳ ಅಂತರದ ಗೆಲುವು ಖಚಿತ: ಜೆಡಿಎಸ್

Upayuktha
0


ಕೆ.ಆರ್ ಪೇಟೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದರೆ ಕನಿಷ್ಠ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಹಾಗಾಗಿ ಜೆಡಿಎಸ್ ವರಿಷ್ಠರು ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಕೂಡಲೇ ಘೋಷಣೆ ಮಾಡಬೇಕೆಂದು ಜೆಡಿಎಸ್ ಕಾನೂನು ಘಟಕದ ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರು ಮತ್ತು ವಕೀಲರಾದ ವಿ.ಎಸ್. ಧನಂಜಯ್ ಕುಮಾರ್ ಅವರು ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದರು.


ಪಟ್ಟಣದಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಚೇರಿಯ ಆವರಣದಲ್ಲಿ ನಡೆದ ತಾಲ್ಲೂಕು ವೀರಶೈವ ಮಹಾಸಭಾ ಘಟಕದ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.



ಪ್ರದಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ ಅಂಗವಾಗಿ ಜೆಡಿಎಸ್ ಪಕ್ಷವನ್ನು ಎನ್ ಡಿ ಎ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ತುಂಬಾ ಸಂತೋಷದ ಸಂಗತಿ ಹಾಗೂ ಪ್ರಶಂಸನೀಯವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿರುವುದರಿಂದ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ 28 ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟ ಜಯಗಳಿಸಲಿದೆ ಎಂದು ಭವಿಷ್ಯ ನುಡಿದರು.



ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರದ ರಾಜಕಾರಣದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಹಿನ್ನಡೆಯನ್ನು ಅನುಭವಿಸಿದ್ದರು. ರಾಮನಗರ ವಿಧಾನ ಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಶಿವಕುಮಾರ್ ಹಾಗೂ ಅವರ ಸಹೋದರ ಡಿ ಕೆ ಸುರೇಶ್ ಅವರ ಕುತಂತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಸೋತಿದ್ದರು‌. ಆದರೆ ಮುಂದೆ ಬರುವ ಚುನಾವಣೆ ವಿಭಿನ್ನವಾಗಿರುವುದರಿಂದ ವಿರೋಧಿಗಳು ಎಂತಹ ಕುತಂತ್ರ ನಡೆಸಿದರೂ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಶೇ.100% ಜಯಗಳಿಸಲಿದ್ದಾರೆ. ಮಂಡ್ಯ ಜಿಲ್ಲೆಯ ಏಳು ತಾಲ್ಲೂಕು ಹಾಗೂ ಕೆ.ಆರ್ ನಗರ ಸೇರಿದಂತೆ ಎಂಟು ತಾಲ್ಲೂಕುಗಳಲ್ಲಿರುವ ನಮ್ಮ ಲಿಂಗಾಯತ ಸಮುದಾಯದ ಎರಡೂವರೆಯಿಂದ 3 ಲಕ್ಷ  ಮತದಾರರು ಈ ಬಾರಿ ಎನ್‌ಡಿಎ ಮೈತ್ರಿ ಅಭ್ಯರ್ಥಿಗೆ ಅತಿ ಹೆಚ್ಚು ಮತನೀಡಲು ಸಿದ್ದರಿದ್ದೇವೆ. ಆದ್ದರಿಂದ ಜೆಡಿಎಸ್ ವರಿಷ್ಠರು ಪಕ್ಷದ ಸಂಘಟನೆಯ ಉದ್ದೇಶದಿಂದ ಕೂಡಲೇ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಘೋಷಣೆ ಮಾಡಬೇಕೆಂದು ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದರು.



ಕಾವೇರಿ ನೀರು ವಿಚಾರದ ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್ ಸಂಪೂರ್ಣ ವಿಫಲ


ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕಾವೇರಿ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ನಮ್ಮಲ್ಲಿ ವಾಸಿಸುವ ಜನರಿಗೆ, ರೈತರಿಗೆ, ಕೃಷಿಗೆ, ಜನಜಾನುವಾರುಗಳಿಗೆ ಜೀವಿಸಲು ನೀರಿಲ್ಲ.ಅಂತಹ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಮಿತಿಯು ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿತು. ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿಯಿತು. ಇದನ್ನು ಸಮರ್ಥವಾಗಿ ವಾದ ಮಾಡಲು ರಾಜ್ಯದ ಪರವಾಗಿ ವಕೀಲರನ್ನು ನೇಮಿಸದೇ ರಾಜ್ಯದ ಜನರ ಜೀವನದ ಜೊತೆಗೆ ಚೆಲ್ಲಾಟವನ್ನು ಸರ್ಕಾರ ಆಡುತ್ತಿದೆ. ಆದ್ದರಿಂದ ಸರ್ಕಾರವು ಈಗಲೂ ಕಾಲ ಮಿಂಚಿಲ್ಲ‌. ತಕ್ಷಣವೇ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು‌‌. ಇಲ್ಲದಿದ್ದರೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು‌ ಸರ್ಕಾರಕ್ಕೆ ಎಚ್ಚರಿಸಿದರು.



ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬೊಮ್ಮಲಾಪುರ  ಈರಪ್ಪ, ಅಕ್ಕಿಹೆಬ್ಬಾಳು ಜೆಡಿಎಸ್ ಘಟಕದ ಅಧ್ಯಕ್ಷ ಬಸವಲಿಂಗಪ್ಪ,ವೀರೇಶ್, ಭೀಮೇಶ್, ಗೋವಿಂದನಹಳ್ಳಿ ಸ್ವಾಮಣ್ಣ, ಕೇಬಲ್ ಗುಂಡಣ್ಣ, ಕಟ್ಟಹಳ್ಳಿ ಪ್ರಕಾಶ್, ಚಿಕ್ಕಳಲೆ ರಾಜಪ್ಪ, ವೀರಪ್ಪ ಬೊಮ್ಲಾಪುರ, ಊಚನಹಳ್ಳಿ ವಕೀಲರಾದ ಭೀಮೇಶ್, ಮಹದೇವಪ್ಪ, ಶಿವಮೂರ್ತಿ, ಬಸವನಹಳ್ಳಿ‌ ಬಿ ಮಹೇಶ್, ಭಾಗ್ಯಮ್ಮ, ಪುಷ್ಪಾ ರಮೇಶ್, ಡಿ.ಜಿ ಕುಮಾರ್, ಈರಾಜಮ್ಮ, ಸಂತೋಷ್, ಊಚನಹಳ್ಳಿ, ಮಂಜುನಾಥ್, ಎಲ್‌ಐಸಿ ಶಿವಪ್ಪ ‌ಮತ್ತಿತರರು  ಸಭೆಯಲ್ಲಿ ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top