ಹರಪನಹಳ್ಳಿ: ಇತಿಹಾಸದ ಮಾಹಿತಿಯನ್ನು ಇತಿಹಾಸ ಪುಸ್ತಕಗಳಿಂದಲೇ ಓದಿ ತಿಳಿದರೆ ಹೆಚ್ಚು ಸಂತೋಷ ಸಿಗುತ್ತದೆ ಎಂದು ಹರಪ್ಪನಹಳ್ಳಿ ಕ್ಷೇತ್ರದ ಶಾಸಕರು ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.
ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ, ತಾಲ್ಲೂಕು ಘಟಕ ಹರಪ್ಪನಹಳ್ಳಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹರಪ್ಪನಹಳ್ಳಿ ತಾಲ್ಲೂಕು ಘಟಕ ಇವರ ಸಂಯುಕ್ತಾಶ್ರಯದಲ್ಲಿ ಹರಪ್ಪನಹಳ್ಳಿಯಲ್ಲಿ ಭಾನುವಾರ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ನೂರು ಕೃತಿಗಳ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಓದುವ ಹವ್ಯಾಸ ದೂರವಾಗುತ್ತಿದ್ದರೂ ಸಾಹಿತ್ಯ ರಚಿಸುತ್ತಿರುವ ಲೇಖಕರ ಸಂಖೈ ಬೆಳೆಯುತ್ತಿರುವುದು ಸಾಹಿತ್ಯ ಕ್ಷೇತ್ರ ಇನ್ನೂ ವಿರಾಜಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯ ಬರಹಗಾರರು ರಚಿಸಿರುವ 118 ಕೃತಿಕಾರರ ಕೃತಿಗಳನ್ನು ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂದಿನ ಪೀಳಿಗೆ ಗುಬ್ಬಚ್ಚಿ ಗೂಡೇ ನೋಡಿಲ್ಲ. ಅದನ್ನು ಪುಸ್ತಕದಲ್ಲಿ ಗುಬ್ಬಚ್ಚಿ ಗೂಡಿನ ಬೆರಗು ಎಂದು ರಸವತ್ತಾಗಿ ರಚಿಸಿ ಓದುಗರಿಗೆ ನೀಡಿರುವ ಬರಹಗಾರರ ಬಗ್ಗೆ ಹೆಮ್ಮೆಯಾಗುತ್ತದೆ ಎಂದರು.
ಹಿರಿಯ ಸಾಹಿತಿ ರಾಮನಮಲಿ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಜರುಗಿತು. ಆಶಯ ನುಡಿಗಳನ್ನು ಹಿರಿಯ ಸಾಹಿತಿ ಸುಭದ್ರಮ್ಮ ಮಾಡ್ಲಿಗೇರಿ ನಡೆಸಿಕೊಟ್ಟರು. ಹಾಸನದ ಸಾಹಿತಿ ಗೊರೂರು ಅನಂತರಾಜು ಮುಖ್ಯ ಅತಿಥಿಗಳಾಗಿ ಮಾತನಾಡಿ, ಗಿನಿಸ್ ದಾಖಲೆಗಾಗಿ ಬರಹಗಾರರ ಸಂಘದ ಅಧ್ಯಕ್ಷ ಮಧು ನಾಯ್ಕ್ ವಿನೂತನವಾಗಿ ಯೋಚಿಸಿ ಸುಮಾರು 6 ತಿಂಗಳಿಂದ ವಾಟ್ಸಪ್ ಗ್ರೂಪ್‌ಗಳಲ್ಲಿ ಬರಹಗಾರರಿಂದ ಪುಸ್ತಕ ಆಹ್ವಾನಿಸಿ ಯಶಸ್ವಿ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯವೆಂದರು.
ಮೈಲಾರಲಿಂಗನ ವಚನಕಾರ ಹೆಚ್.ಡಿ.ಜಗ್ಗಿನ್, ಲೇಖಕ ಗೊರೂರು ಅನಂತರಾಜು, ಲಕ್ಷ್ಮಿ ಮಾನಸ, ಕಲಾವಿದ ಯಾಕೂಬ್‌ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಲನಚಿತ್ರ ಹಾಸ್ಯ ನಟ ಮೈಸೂರು ರಮಾನಂದ್, ಬೆಂಗಳೂರಿನ ಮಹಾ ಡ್ರೀಮ್ ಸಂಸ್ಥೆಯ ಎಂ.ಡಿ. ಪಿ.ಲಕ್ಷ್ಮೀ ರಾವ್, ಬಿ. ಲಕ್ಷ್ಮೀದೇವಿ, ಎಸ್.ಯು.ಜೆ.ಎಂ. ಕಾಲೇಜು ಪ್ರಾಂಶುಪಾಲ ಹೆಚ್. ಮಲ್ಲಿಕಾರ್ಜುನ, ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ, ಕ.ಸಾ.ಪ. ಹರಪ್ಪನಹಳ್ಳಿ ತಾ. ಅಧ್ಯಕ್ಷ ಜೆ.ಉಚ್ಚೆಂಗಪ್ಪ, ಕ.ರಾ.ಬ.ಸಂ. ಹರಪ್ಪನಹಳ್ಳಿ ತಾ. ಅಧ್ಯಕ್ಷ ಕೆ. ಬಸವರಾಜ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಜ್ಜಿ ನಾಗರಾಜ, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಣಕಾರ ರಾಜಶೇಖರ, ಸಾಹಿತಿ ಡಿ.ರಾಮಣ್ಣ, ಆಲಮರಸಿಕೇರಿ, ತೆಲಗಿ ಕೆ.ಎಸ್. ವೀರಭದ್ರಪ್ಪ, ಡಾ. ಎಸ್.ಎಸ್.ಪುಟ್ಟೇಗೌಡ ಇದ್ದರು. ಕ.ರಾ.ಬ. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಜಿ.ಅಗ್ರಹಾರ ಸ್ವಾಗತಿಸಿ ನೇತ್ರಾ ಬಾಸೂರು ನಿರೂಪಿಸಿ ಹೆಚ್.ಕೆ. ಮಂಜುನಾಥ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ