ಎಲ್ಲಾ ಭಾಷೆಗಳಿಗೆ ಆಧಾರ ಸಂಸ್ಕೃತ; ಅದರ ದಿನಾಚರಣೆ ಪ್ರತಿನಿತ್ಯ ಆಗಬೇಕು: ಅದಮಾರು ಶ್ರೀ

Upayuktha
0


ಉಡುಪಿ: ಅಕ್ಕಿಯನ್ನು ಸಂಸ್ಕರಿಸಿದರೆ ಅನ್ನ ಎಂದು ಹೆಸರಿನಿಂದ ಕರೆಯುವರು. ಹತ್ತಿಯನ್ನು ಸಂಸ್ಕರಿಸಿದಾಗ ಬಟ್ಟೆಯಾಗುವುದು. ಆದರೆ ಯಾವ ಒಂದು ಭಾಷೆಯು ಸರಿಯಾಗಿ ಸಂಸ್ಕರಿಸಲ್ಪಟ್ಟಾಗ ಈ ಭಾಷೆ ಸಂಸ್ಕರಿತವಾಗಿದೆ ಎಂಬ ಅರ್ಥದಲ್ಲಿ ಸಂಸ್ಕೃತ ಎಂಬ ಪದದಿಂದ ಹೇಳಲ್ಪಡುವುದೋ ಅದೇ ಸಂಸ್ಕೃತ ಭಾಷೆ. ಮಹಾಭಾರತಾದಿ ಗ್ರಂಥಗಳನ್ನು ಅಧ್ಯಯನ ಮಾಡದೇ ಧರ್ಮವೇ ಮೊದಲಾದ ವಿಚಾರಗಳನ್ನು ತಿಳಿಸಲು ಸಾಧ್ಯವಾಗದು. ಸುಸಂಸ್ಕೃತನಾದ ವ್ಕಕ್ತಿಗೆ ಮಾತ್ರವೇ ಇದು ಸಾಧ್ಯ. ಆದುದರಿಂದ ನಾವು ಸುಸಂಸ್ಕೃತರಾಗಿ ಶಾಶ್ವತವಾದ ಈ ಭಾಷೆಯನ್ನು ಅಧ್ಯಯನ ಮಾಡಿದರೆ ನಮಗೆ ವಿಕಾರರಹಿತ, ರೋಗರಹಿತ ಜೀವನಮಾಡಲು ಸಾಧ್ಯ. ಆದ್ದರಿಂದ ಎಲ್ಲರೂ ಸಂಸ್ಕೃತದ ಅಧ್ಯಯನವನ್ನು ಮಾಡಿ, ಪ್ರತಿದಿನವೂ ಸಂಸ್ಕೃತದಿನವನ್ನು ಆಚರಿಸಿದರೆ ಉತ್ತಮ ಎಂದು ಅದಮಾರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀ ಪಾದರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶವನ್ನಿತ್ತರು.



ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಮಣಿಪಾಲದ ಮುನಿಯಾಲು ಆಯುರ್ವೇದ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ವಿದ್ವಾನ್ ಹೆರ್ಗ ಹರಿಪ್ರಸಾದ ಭಟ್ ಇವರು  ಸಂಸ್ಕೃತ ಭಾಷೆಯ ಸೊಬಗನ್ನು ತಿಳಿದ ಪಾಶ್ಚಾತ್ಯ ವಿದ್ವಾಂಸರ ವಿಚಾರಗಳನ್ನು ಹಾಗೂ ಪಾದರಸ ಮೊದಲಾದವುಗಳ  ಮಹತ್ತ್ವವನ್ನು ತಿಳಿಸಿ, ಇವುಗಳಿಗೆ ಸಂಸ್ಕೃತದ ಜೊತೆಗಿರುವ ಸಂಬಂಧವನ್ನು ವಿದ್ಯಾರ್ಥಿಗಳಿಗೆ ಎಳೆಎಳೆಯಾಗಿ ತಿಳಿಸಿದರು. 


ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಅತ್ಯಧಿಕ ಅಂಕಗಳಿಸಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೆಯೇ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಸಂಸ್ಕೃತ ನಿರ್ದೇಶನಾಲಯದವರು ನಡೆಸಿದ ಕಾವ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾರಿತೋಷಕವನ್ನು ನೀಡಲಾಯಿತು.


ಸಂಸ್ಕೃತ ವಿದ್ಯಾರ್ಥಿಗಳಿಂದ ಸಂಸ್ಕೃತ ಗೀತಗಾನವು ನಡೆಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ. ರಾಮು ಎಲ್.ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ ರಮೇಶ ಟಿ.ಎಸ್ ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರು. ಡಾ. ಆನಂದ ಆಚಾರ್ಯರು ಪಾರಿತೋಷಕ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿ ಕು.ಅನುಷಾ ಸಿ ಎಚ್ ಇವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕಿ ಕು. ನಿಖಿತಾ ಪೆಜತ್ತಾಯ ಇವರು ಧನ್ಯವಾದವಿತ್ತರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top