ಗಣಪತಿ ದೇವನೆ ಗುಣನಿಧಿಯೊಡೆಯನೆ
ಫಣಿಪತಿ ಹಾರನ ಸುತನೆ |
ಮುನಿಗಣ ವಂದ್ಯನೆ ಅಣುಘನ ಗಾತ್ರನೆ
ಮಣಿಮಯ ಶೋಭಿತ ಶಿವನೆ ||ಪ||
ಬುದ್ಧಿಪ್ರದಾಯಕ ಗೌರೀನಂದನ
ಮುಗ್ಧರ ಭಕುತಿಗೆ ಒಲಿಯುವೆಯ |
ವಿದ್ಯೆಯ ಕರುಣಿಸಿ ಜೀವನದಾರಿಯ
ಬದ್ಧತೆಯಿಂದಲಿ ತೋರುವೆಯ ||
ಹಣವನು ಬಯಸದೆ ಗುಣವನು ಬೇಡುವ
ಜನರನು ಸಲಗುವ ದಾತಾರ |
ತೃಣಕಣದೊಳಗಿನ ವಿಕ್ರಮರೂಪನು
ತನುಮನ ಶಕ್ತಿಗೆ ಆಧಾರ ||
ಕರಗಳ ಮುಗಿಯುತ ಅನುದಿನ ಭಜಿಸುವ
ಸುರನರ ಗಣಗಳ ಸಲಹುವೆಯ |
ಧುರದಲಿ ಹೋರುವ ವೀರರಿಗೊಲಿಯುತ
ವರಗಳ ಮಳೆಯನು ಸುರಿಸುವೆಯ ||
ಬೇಡುವ ನಿತ್ಯವು ಮಾಡುತ ಪೂಜೆಯ
ನಾಡಿನೊಳೆಲ್ಲರ ಸುಖಕಾಗಿ |
ಹಾಡುತ ಹೊಗಳುವ ಜಗದೋದ್ಧಾರನ
ನೋಡುತ ಚೆಲುವಿಗೆ ಶಿರಬಾಗಿ ||
- ವಿ.ಬಿ.ಕುಳಮರ್ವ, ಕುಂಬ್ಳೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

