ಉಜಿರೆ: ಧರ್ಮಸ್ಥಳ ಗ್ರಾಮದ ನೇರ್ತನೆ ಪರಿಸರದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗುತ್ತಿದ್ದು, ಕೃಷಿಗೆ ಹಾನಿಯನ್ನು ತಪ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಯೆ ಶುಕ್ರವಾರ ಧರ್ಮಸ್ಥಳದಲ್ಲಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮಾತನಾಡಿ ನೇರ್ತನೆ ಪರಿಸರದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಕಳುಹಿಸುವ ಕಾರ್ಯ ತುರ್ತಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಬಗ್ಯೆ ಸ್ಥಳೀಯರ ಸಹಕಾರದೊಂದಿಗೆ ಶುಕ್ರವಾರದಿಂದಲೇ ಕಾರ್ಯ ಪ್ರಾರಂಭಿಸಲಾಗುತ್ತದೆ.
ಸೋಲಾರ್ ಬೇಲಿ ಅಳವಡಿಸಲು ಸರ್ಕಾರ ಅನುದಾನ ನೀಡುವುದರಿಂದ ಈ ಬಗ್ಯೆಯೂ ಪ್ರಯತ್ನಿಸಲಾಗುವುದು. ರೈತರು ಸೋಲಾರ್ ಬೇಲಿ ಅಳವಡಿಸುವುದಾದರೆ ಅರಣ್ಯ ಇಲಾಖೆಯಿಂದ ಅನುದಾನ ನೀಡುವುದಾಗಿ ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶ್ರೀನಿವಾಸ ರಾವ್, ಪಿ.ಡಿ.ಒ. ಉಮೇಶ, ಉಪಅರಣ್ಯಾಧಿಕಾರಿಗಳಾದ ಹರಿಪ್ರಸಾದ್, ಯತೀಂದ್ರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮದ ಕಲ್ಲೇರಿ ಬಳಿ ಹೆದ್ದಾರಿ ಬದಿಯಲ್ಲಿ ಶುಕ್ರವಾರ ಕಾಡಾನೆ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಎಂಬಲ್ಲಿ ಗುರುವಾರ ತಡರಾತ್ರಿ ಕಾಡಾನೆಗಳ ಹಿಂಡು ರಾಘವೇಂದ್ರ ಪಟವರ್ಧನ್ ಅವರ ತೋಟಕ್ಕೆ ನುಗ್ಗಿ 55 ಅಡಿಕೆ ಮರ ಹಾಗೂ ಮೂರು ತೆಂಗಿನ ಮರಗಳನ್ನು ಧ್ವಂಸ ಮಾಡಿವೆ.
ಕೆಂಪಯ್ಯ ಗೌಡ ಎಂಬಾತನ ಭತ್ತ ಕೃಷಿಗೂ ಹಾನಿಯಾಗಿರುವುದು ತಿಳಿದು ಬಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ