ಕ್ಯಾಂಪ್ಕೊ ಸಂಸ್ಥೆ ಕೃಷಿಕರೊಂದಿಗೆ: ಕಿಶೋರ್ ಕುಮಾರ್ ಕೊಡ್ಗಿ

Upayuktha
0

ಮೀಯಪದವಿನಲ್ಲಿ ಸದಸ್ಯ ಬೆಳೆಗಾರರ ಸಮಾವೇಶ



ಮಂಜೇಶ್ವರ: ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡು ಕೃಷಿಕರನ್ನು ಬೆಳೆಸುತ್ತಾ ಕ್ಯಾಂಪ್ಕೊ ಸಂಸ್ಥೆಯು ಅಭಿವೃದ್ಧಿಯತ್ತ ಸಾಗುತ್ತಿದೆ. ಕೃಷಿ ಉತ್ಪನ್ನಗಳಾದ ಅಡಿಕೆ, ಕೊಕ್ಕೊ, ತೆಂಗು, ರಬ್ಬರ್, ಕಾಳುಮೆಣಸು ಇವುಗಳ ಬೆಲೆಯನ್ನು ಸ್ಥಿರತೆಯಿಂದ ಕಾಪಾಡಿಕೊಂಡು ಬರಲು ಕ್ಯಾಂಪ್ಕೊ ಪ್ರಯತ್ನಿಸುತ್ತಿದೆ. ಕೃಷಿಕರು ಪರ್ಯಾಯ ಬೆಳೆಗಳನ್ನು ಬೆಳೆಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕ್ಯಾಂಪ್ಕೋ ಸಂಸ್ಥೆಯ ಲಕ್ಷ್ಯವಾಗಿದೆ. ಕ್ಯಾಂಪ್ಕೋ ಸಂಸ್ಥೆ ಕೃಷಿಕರೊಂದಿಗೆ ಇದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.


ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲಾ ರಂಗಮಂದಿರದಲ್ಲಿ ಸೋಮವಾರ ಜರಗಿದ ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. 


ಕಳೆದ ಹಲವು ವರ್ಷಗಳಿಂದ ಕೃಷಿ ಉತ್ಪನ್ನ ಅಡಿಕೆಯ ಬೆಲೆ ಇಳಿಯದಂತೆ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದ್ದು, ಇಳಿಕೆಯನ್ನು ಕಾಣದಂತೆ ಕೇಂದ್ರ ಸರಕಾರದ ಇಲಾಖೆಗಳ ಜೊತೆ ನಿರಂತರ ಸಂಪರ್ಕವನ್ನು ಸಾಧಿಸುತ್ತಾ ಬಂದಿದ್ದೇವೆ ಎಂದರು. ಹಿರಿಯ ಸದಸ್ಯರುಗಳಾದ ಚಂದ್ರಶೇಖರ ಚೌಟ, ನಾರಾಯಣ ನಾವಡ ವರ್ಕಾಡಿ, ರಘುನಾಥ ನಾಯಕ್ ದೈಗೋಳಿ, ಮೋನಪ್ಪ ಶೆಟ್ಟಿ ಬಾಯಾರು, ಗಣಪತಿ ಭಟ್ ಕುಂಡೇರಿ ಜೊತೆಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಕೊರೋನದ ಪ್ರಾರಂಭದ ದಿನಗಳಲ್ಲಿ ಅಡಿಕೆ ಖರೀದಿಗೆ ಯಾರೂ ಧೈರ್ಯ ತೋರಿರಲಿಲ್ಲ. ಕ್ಯಾಂಪ್ಕೊದ ದಿಟ್ಟ ನಿರ್ಧಾರವು ಅಡಿಕೆಗೆ ಉತ್ತಮ ಬೆಲೆಯನ್ನು ತಂದುಕೊಟ್ಟಿದೆ. ಎಲ್ಲರೂ ಈ ಬೆಲೆ ನಿಲ್ಲಬಹುದೇ ಎಂಬ ಆತಂಕದಲ್ಲಿದ್ದರೂ ಆ ಬಳಿಕ ಕ್ಯಾಂಪ್ಕೊ ಆಡಳಿತ ಮಂಡಳಿ ಬೆಲೆ ಸ್ಥಿರತೆಯನ್ನು ಕಾಪಾಡಿ ಆಶಾದಾಯಕ ವಾತಾವರಣಕ್ಕೆ ಕಾರಣವಾಯಿತು. ಕ್ಯಾಂಪ್ಕೊ ಚಾಕಲೇಟು ಉತ್ಪಾದನೆ ಮತ್ತು ಮಾರಾಟ ವಿಭಾಗದಲ್ಲಿ ಹೊಸ ತಂತ್ರಜ್ಞಾನ ಬಳಸಿ ಪುತ್ತೂರನ್ನು ಕ್ಯಾಂಪ್ಕೊ ಚಾಕಲೇಟು ಪ್ರಧಾನ ಕೇಂದ್ರವಾಗಿಸಲು ನಮ್ಮ ಪ್ರಯತ್ನ ಸಾಗುತ್ತಿದೆ ಎಂದರು.


ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಉತ್ತಮ ಉದ್ದೇಶದೊಂದಿಗೆ ಸಂಸ್ಥೆಯ ಹುಟ್ಟಿಗೆ ಕಾರಣರಾದ ವಾರಣಾಶಿ ಸುಬ್ರಾಯ ಭಟ್ಟರನ್ನು ನಾವು ಸ್ಮರಿಸಬೇಕಾಗಿದೆ ಎಂದರು. ಬಳಿಕ ಕೃಷಿಕರೊಂದಿಗೆ ಸಂವಾದ ನಡೆಯಿತು.


ಕ್ಯಾಂಪ್ಕೊ ನಿರ್ದೇಶಕರುಗಳಾದ ದಯಾನಂದ ಹೆಗ್ಡೆ, ಕೃಷ್ಣಕುಮಾರ್ ಮಡ್ತಿಲ, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಮಹೇಶ್ ಚೌಟ, ಕೆ.ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ಕ್ಯಾಂಪ್ಕೊ ಮಾರುಕಟ್ಟೆ ವಿಭಾಗದ ಸಹಾಯಕ ಮಹಾಪ್ರಬಂಧಕ ಗೋವಿಂದ ಭಟ್ ಎಸ್., ಬದಿಯಡ್ಕ ವಲಯ ಪ್ರಬಂಧಕ ಗಿರೀಶ್ ಇ., ಬಾಯಾರು ಶಾಖೆಯ ಪ್ರಬಂಧಕ ರಮೇಶ್ ಕುಲಾಲ್ ಉಪಸ್ಥಿತರಿದ್ದರು. ನಿರ್ದೇಶಕರಾದ ಡಾ| ಜಯಪ್ರಕಾಶ ನಾರಾಯಣ ಸ್ವಾಗತಿಸಿ, ಬಾಲಕೃಷ್ಣ ರೈ ವಂದಿಸಿದರು. ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಕುಮಾರ್ ನಿರೂಪಿಸಿದರು. ಬಾಯಾರು, ಮೀಯಪದವು, ವರ್ಕಾಡಿ, ದೈಗೋಳಿ ಶಾಖೆಯ ಸದಸ್ಯರು, ಊರಿನ ಕೃಷಿಕರು ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top