ಬಂಟ್ವಾಳ: ಬಂಟ್ವಾಳ ತಾಲೂಕಿನ ಅಖಿಲ ಭಾರತೀಯ ಪರಿಷತ್ತಿನ 23-24ರ ಕಾಲಾವಧಿಯ ಸಮಿತಿಯ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಶನಿವಾರ (ಸೆ.2) ನಡೆಯಿತು. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಉದ್ಘಾಟಿಸಿದರು.
ಭಾರತಾಂಬೆಗೆ ಪುಷ್ಪಾರ್ಚನೆ ಸಹಿತ ಪ್ರಾರ್ಥನಾ ನಂತರ ದೀಪ ಬೆಳಗಿ ಸಮಿತಿಗೆ ಚಾಲನೆ ಕೊಟ್ಟ ಅವರು ಸಾಹಿತ್ಯವು ಬಹಳ ಪುರಾತನವಾಗಿದ್ದು, ಭಾಷೆಗೊಂದು ಚೊಕ್ಕ ಆವರಣ ಕೊಡುವಂಥದ್ದಾಗಿದೆ. ವೈವಿಧ್ಯಮಯ ವಿಚಾರ, ಭಾವಗಳನ್ನು ವ್ಯಕ್ತಪಡಿಸುತ್ತಾ ಜನಜೀವನದ ಮೇಲೆ ಬೆಳಕು ಚೆಲ್ಲುವ ಸಾಮರ್ಥ್ಯ ಸಾಹಿತ್ಯಕ್ಕೆ ಇದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಅಖಂಡ ಹಿಂದೂಸ್ಥಾನದ ಸಕಲ ಭಾಷಿಗರನ್ನು ಒಳಗೊಂಡಿದ್ದು ಕೇವಲ ಕನ್ನಡಕ್ಕೇ ಸೀಮಿತವಾಗಿಲ್ಲ. ಈ ನಿಟ್ಟಿನತ್ತ ಪರಿಷತ್ತು ಭಾಷಾ ಸಂಸ್ಕಾರಕ್ಕೆ ಕೊಡುಗೆಯಾಗಲಿ ಎಂದು ಹೆಳಿದರು.
ಬಂಟ್ವಾಳ ತಾಲೂಕಿನ ಸಮಿತಿಯು ಸಹ ದ್ವಿತೀಯ ಬಾರಿಗೆ ಬಂಟ್ವಾಳ ತಾಲೂಕಿನವರೇ ಆದ ಡಾ ಸುರೇಶ ನೆಗಳಗುಳಿಯವರ ಸಾರಥ್ಯದಲ್ಲಿ ಚೆನ್ನಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.
ಮೊದಲಿಗೆ ಕಲ್ಲಡ್ಕದ ಶ್ರೀರಾಮ ವಿದ್ದಾ ಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಅತ್ಯಮೋಘ ಸ್ಯಾಕ್ಸೋಫೋನ್ ವಾದನ ಮತ್ತು ಭರತ ನಾಟ್ಯ, ಗಾಯನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಮಂಗಳೂರು ವಿಭಾಗ ಮುಖ್ಯಸ್ಥ ಸುಂದರ ಶೆಟ್ಟಿಯವರು ಆಶಯ ಭಾಷಣ ಮಾಡಿದರು. ನೂತನ ಸಮಿತಿಯವರ ನಾಮ ಘೋಷದ ಜೊತೆಗೆ ಶಾಲು, ಅಭಿನಂದನಾ ಪತ್ರ, ಪುಸ್ತಕ, ಹಾರ ಸಮರ್ಪಿಸಿ ಗೌರವಿಸಲಾಯಿತು. ಅವರು ಪರಿಷತ್ತಿನ ಧ್ಯೇಯೋದ್ದೇಶಗಳ ದಿಕ್ಸೂಚಿ ಭಾಷಣ ಮಾಡಿದರು.
ಮುಖ್ಯ ಅಭ್ಯಾಗತ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ತಿನ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರು ಶುಭಾಶಂಸನೆ ಮಾಡಿದರು.
ಸಭಾಧ್ಯಕ್ಷರಾಗಿದ್ದ ಡಾ ಸುರೇಶ ನೆಗಳಗುಳಿಯವರು ಮಾತನಾಡಿ, ಅದ್ವಿತೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತ ಪಡಿಸಿದರು. ಎರಡನೇ ಬಾರಿಗೆ ಪರಿಷತ್ತು ಅಧ್ಯಕ್ಷತೆ ದೊರೆತಿದ್ದು ಜವಾಬ್ದಾರಿ ಮರೆಯದೇ ಕಾರ್ಯವೆಸಗುವುದಾಗಿ ತಿಳಿಸಿದರು.
ರೇಮಂಡ್ ಡಿಕುನ್ಹ ರವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿ- ಮತ್ತು ಗೌರವ ಸಲಹೆಗಾರ ಜಯಾನಂದ ಪೆರಾಜೆಯವರ ಅಧ್ಯಕ್ಷತೆಯಲ್ಲಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಅವರ ನಿರೂಪಣೆಯಲ್ಲಿ ಅಂತಾರಾಜ್ಯ ಮಟ್ಟದ ಹಿರಿಯರ ಕವಿಗೋಷ್ಠಿ- ನಡೆಯಿತು.
ಕೂಟ ಪ್ರಮುಖ್ ಅಶೋಕಕುಮಾರ ಕಲ್ಯಾಟೆಯವರು ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಕೇಪುಳು ಅವರು ಸ್ವಾಗತಿಸಿ, ಪ್ರಶಾಂತ ಕಡ್ಯರು ಧನ್ಯವಾದ ಸಮರ್ಪಿಸಿದರು.
ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಪರಿಮಳಾ ಮಹೇಶ್ ಮತ್ತಿತರ ಪರಿಷತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪದಾಧಿಕಾರಿಗಳ ವಿವರ:
ಅಧ್ಯಕ್ಷರು - ಡಾ ಸುರೇಶ ನೆಗಳಗುಳಿ, ಉಪಾಧ್ಯಕ್ಷರು- ಈಶ್ವರ ಪ್ರಸಾದ್, ಕಾರ್ಯದರ್ಶಿ- ಚೇತನ್ ಮುಂಡಾಜೆ, ಜೊತೆ ಕಾರ್ಯದರ್ಶಿ- ಸೀತಾ ಲಕ್ಷ್ಮೀ ವರ್ಮಾ, ಕೋಶಾಧಿಕಾರಿ- ಪ್ರಶಾಂತ್ ಕಡ್ಯ, ಕೂಟ ಪ್ರಮುಖ್- ಅಶೋಕ ಕುಮಾರ್ ಕಲ್ಯಾಟೆ, ಮಾಧ್ಯಮ ಪ್ರಮುಖ್- ಚಿನ್ನಪ್ಪ ಎಂ.
ಸದಸ್ಯರು: ಉದಯ ಸಂತೋಷ್, ಬಾಲಕೃಷ್ಣ ಕೇಪುಳು, ರಮೇಶ್ ಬಾಯಾರ್, ಜಯರಾಮ ಪಡ್ರೆ, ಕುಮಾರ ಸ್ವಾಮಿ ಕನ್ಯಾನ, ಚಂದ್ರಶೇಖರ ಕೈಯಾಬೆ, ರಶ್ಮಿತಾ ಸುರೇಶ ಜೋಗಿಬೆಟ್ಟು, ಚೈತನ್ಯ ಪ್ರಕಾಶ್ ಕೆದಿಲ, ಗೋವಿಂದ ನಾರಾಯಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ