ಸೆ. 24ರಂದು ರಾಜಧಾನಿಯಲ್ಲಿ ಅಷ್ಟಮಿದ ಐಸಿರ- ತುಳುನಾಡಿನ ಸಾಂಸ್ಕೃತಿಕ ಅನಾವರಣ

Upayuktha
0


ಬೆಂಗಳೂರು: ಸೆಪ್ಟೆಂಬರ್ 24 ಭಾನುವಾರದಂದು ಬೆಂಗಳೂರಿನ ಅತ್ತಿಗುಪ್ಪೆಯ ಬಂಟರ ಭವನದಲ್ಲಿ ತುಳುನಾಡ ಜವನೆರ್ ಬೆಂಗಳೂರು ವತಿಯಿಂದ ಅಷ್ಟಮಿದ ಐಸಿರ ವಿಶೇಷ ಕಾರ್ಯಕ್ರಮ ನಡೆಯಲಿದೆ. 


ಉದ್ಯೋಗ ಅರಸಿ ಬದುಕು ಕಟ್ಟಿಕೊಳ್ಳಲು ಕರಾವಳಿಯಿಂದ 300-400 ಕಿ.ಮೀ ದೂರದ ಊರಾದ ರಾಜಧಾನಿ ಬೆಂಗಳೂರಿಗೆ ವಲಸೆ ಬಂದಿರುವ ತುಳುನಾಡಿನ 3,000ಕ್ಕೂ ಹೆಚ್ಚು ಜನ ಸೇರಿ ಕಟ್ಟಿಕೊಂಡಿರುವ ಸಂಘಟನೆ ತುಳುನಾಡ ಜವನೆರ್ ಬೆಂಗಳೂರು (ರಿ). ಕಳೆದ ಒಂದಿಷ್ಟು ವರ್ಷಗಳಿಂದ ಬೆಂಗಳೂರು ಭಾಗದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಈ ಸಂಘಟನೆ ತೊಡಗಿಸಿಕೊಂಡಿದೆ. ತುಳುವರ ಸಂಘಟನಾತ್ಮಕ ವಿಚಾರಕ್ಕೆ ಮಾತ್ರವಲ್ಲದೆ ಸಿರಿವಂತವಾಗಿರುವ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಆ ತರಹದ್ದೊಂದು ವಾತಾವರಣವನ್ನು ಸೃಷ್ಟಿಸುತ್ತಾ ಬಂದಿದೆ. 


ಕಳೆದ ಆರು ವರ್ಷಗಳಿಂದ ಅಷ್ಟಮಿದ ಐಸಿರ ಎಂಬ ಹೆಸರಿನಲ್ಲಿ ಈ ತಂಡ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದು ತುಳುನಾಡಿನ ಬಹುತೇಕ ಸಂಸ್ಕೃತಿ ಆಧಾರಿತ ವಿಚಾರ ವಿನಿಮಯ, ಜನಪದ ಕುಣಿತ ಪ್ರಕಾರಗಳು, ಆಹಾರ ಮೇಳ, ಯಕ್ಷಗಾನ, ಹುಲಿಕುಣಿತ ಸೇರಿದಂತೆ ಹಲವು ಸಂಗತಿಗಳು ಈ ಐಸಿರ ಕಾರ್ಯಕ್ರಮದಲ್ಲಿರಲಿದೆ.


ಐಸಿರದಲ್ಲಿದೆ ಹಲವು ಸಾಂಸ್ಕೃತಿಕ ಆಟೋಟ ಸ್ಪರ್ಧೆಗಳು: 


ಕೃಷ್ಣ ಜನ್ಮಾಷ್ಟಮಿ ಕರಾವಳಿ ಭಾಗದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುವಂತೆ ಬೆಂಗಳೂರಿನಲ್ಲಿಯೂ ಹಲವು ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ.


ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ, ಹಲಸಿನ ಬೀಜ ಹೆಕ್ಕುವ ಸ್ಪರ್ಧೆ, ನೆನಪಿನ ಶಕ್ತಿ, ಮಡಕೆ ಒಡೆಯುವ ಸ್ಪರ್ಧೆಗಳಿದ್ದರೆ, ಮಹಿಳೆಯರಿಗಾಗಿ ಲಿಂಬೆ ಚಮಚ, ಟೊಂಕ ಓಟ, ಪೊರಕೆ ಮಾಡುವುದು ಮತ್ತು ಮಡಕೆ ಒಡೆಯುವ ಸ್ಪರ್ಧೆಗಳಿವೆ. ಪುರುಷರಿಗಾಗಿ ಕಪ್ಪೆ ಜಿಗಿತ, ಅಡ್ಡಕಂಬ ದೀಪ ಸ್ಪರ್ಧೆ, ಗೋಣಿಚೀಲ ಓಟ ಮತ್ತು ಮಡಕೆ ಒಡೆಯುವ ಸ್ಪರ್ಧೆಗಳಿವೆ. ಸಾರ್ವಜನಿಕ ವಿಭಾಗದಲ್ಲಿ ಹುಲ್ಲಿನ ಹಗ್ಗ ಹೊಸೆಯುವುದು, ಅವಲಕ್ಕಿ ತಿನ್ನುವುದು, ತೆಂಗಿನ ಕಾಯಿ ಕುಟ್ಟುವುದು, ಹಗ್ಗ ಜಗ್ಗಾಟ ತುಳುನಾಡಿನ ವಿಚಾರಗಳ ಬಗ್ಗೆ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ. 


ಕರಾವಳಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಐಸಿರ ಫ್ಯಾಷನ್ ಶೋ: 

ಈ ಸ್ಪರ್ಧೆಗಳ ಜೊತೆಗೆ ಐಸಿರ ಫ್ಯಾಷನ್ ಶೋ ಸ್ಪರ್ಧೆಯೂ ನಡೆಯಲಿದೆ. ಕರಾವಳಿ ಭಾಗದ ವಿಚಾರಗಳನ್ನು ಪ್ರಸ್ತುತಪಡಿಸುವ ರೌಂಡ್ ಕೂಡ ಇರಲಿದ್ದು ಹಲವು ವಿಭಾಗಗಳಲ್ಲಿ ಆಕರ್ಷಕ ನಗದು ಬಹುಮಾನಗಳು ಇರಲಿವೆ.



ಐಸಿರದಲ್ಲಿದೆ ಕರಾವಳಿ ಭಾಗದ ವಿಶೇಷ ಕಾರ್ಯಕ್ರಮಗಳು:

ವಿಶೇಷ ಆಕರ್ಷಣೆಯಾಗಿ ಪಿಲಿ ನಲಿಕೆ ಕಾರ್ಯಕ್ರಮವಿದ್ದು ಅನೇಕ ಕಸರತ್ತುಗಳನ್ನೊಳಗೊಂಡ ಭರ್ಜರಿ ಹುಲಿಕುಣಿತ ದಿನವಿಡೀ ಪ್ರೇಕ್ಷಕರನ್ನು ಸೆಳೆಯಲಿದೆ.

ಸದ್ಯ ತುಳುನಾಡಿನಲ್ಲೂ ನಡೆಯದೇ ಇರುವ, ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ದೊಂದಿ ಬೆಳಕಿನ ಯಕ್ಷಗಾನ ಬಯಲಾಟ ನಡೆಯಲಿದ್ದು ಧರ್ಮದೈವ ಪಂಜುರ್ಲಿ ಎಂಬ ಪ್ರಸಂಗವನ್ನು ಆಡಿತೋರಿಸಲಿದ್ದಾರೆ.

ಮಾಡದ ತಾಲೀಮು ಗೊಬ್ಬು ಎಂಬ ವಿಶೇಷ ತಾಲೀಮು ಪ್ರದರ್ಶನವೂ ದಿನವಿಡೀ ಆಗಮಿಸುವವರಿಗೆ ಮುದ ನೀಡಲಿದೆ. ಪ್ರಣವಂ ಕುಡ್ಲ ತಂಡದ ಚೆಂಡೆನಾದನವೂ ಪೂರ್ತಿ ಅಷ್ಟಮಿದ ಐಸಿರ ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ. ಭಜನಾ ಕಾರ್ಯಕ್ರಮದ ಮೂಲಕ ಮನೆಮಾತಾಗಿರುವ ವಿದ್ಯಾಭೂಷಣರ ರಂಗಗ್ ಪದರಂಗ್ ಕಾರ್ಯಕ್ರಮವೂ ಇದ್ದು ವಿಠ್ಠಲ್ ನಾಯಕರ ಹಾಸ್ಯಮಯ ಗೀತಸಾಹಿತ್ಯ ಕಾರ್ಯಕ್ರಮವಿರಲಿದೆ. ವಿಶೇಷ ಆಕರ್ಷಣೆಯಾಗಿ ಸತತ ಆರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಬೋಳದ ಗುತ್ತುವಿನ ಕಂಬಳ ಕೋಣಗಳಾದ ದೋನಿ ಮತ್ತು ಬೊಳ್ಳ ಐಸಿರದಲ್ಲಿರಲಿದ್ದಾರೆ ಮತ್ತು ಕೋಣಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಆಹಾರ ಪ್ರಿಯರಿಗಾಗಿ ಕರಾವಳಿಯ ಸ್ಪೆಷಲ್ ಆಹಾರ ಮೇಳ: 

ಆಹಾರ ಪ್ರಿಯರಿಗೆ ಉಣಬಡಿಸಲು ಕರಾವಳಿಯ ನೀರುದೋಸೆ, ಪತ್ರೋಡೆ, ಮೂಡೆ, ತೊಜಂಕ್ ವಡೆ, ಕುಡುಬಸಳೆ ಗಸಿ ಸೇರಿದಂತೆ ಹಲವು ಖಾದ್ಯಗಳನ್ನೊಳಗೊಂಡ ಆಹಾರ ಮೇಳವೂ ಇರಲಿದೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪೀಕರ್ ಯುಟಿ ಖಾದರ್, ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಕನ್ನಡ- ತುಳು ಭಾಷೆಯ ಚಿತ್ರನಟರು, ಉದ್ಯಮಿಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಮಾಧ್ಯಮಗೋಷ್ಟಿಯಲ್ಲಿ ತುಳುನಾಡ ಜವನೆರ್ ಬೆಂಗಳೂರು ಸಂಘದ ಅಧ್ಯಕ್ಷ ಮಹೇಶ್ ಶೆಟ್ಟಿ ಬೈಲೂರು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top