ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹಬ್ಬದ ರೂಪದಲ್ಲಿ, ವ್ರತದ ರೂಪದಲ್ಲಿ ಆಚರಿಸಲಾಗುತ್ತದೆ. ಹಣೆಗೆ ಕುಂಕುಮವಿಡುವುದರಿಂದ, ಪ್ರತಿನಿತ್ಯ ಭಗವಂತನನ್ನು ಸ್ಮರಿಸುವುದರಿಂದ, ಏಕಾಗ್ರತೆಯಿಂದ ಭಗವಂತನಿಗೆ ಪ್ರದಕ್ಷಿಣೆ ಹಾಕುವುದರಿಂದ ನಕಾರಾತ್ಮಕ ವಿಚಾರಗಳು ದೂರವಾಗಿ ಸಕಾರಾತ್ಮಕ ಶಕ್ತಿ ತುಂಬುವುದು. ಶ್ರೀಕೃಷ್ಣನು ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ ಕೊಡುವವನು. ನಮ್ಮ ಕರ್ತವ್ಯವನ್ನು ಪೂರೈಸಿ ಭಗವನ್ನಾಮ ಸ್ಮರಣೆ, ಪೂಜೆಯಿಂದ ಬದುಕಿನಲ್ಲಿ ಸಾರ್ಥಕ್ಯವನ್ನು ಪಡೆಯಬಹುದು. ಪ್ರತಿನಿತ್ಯ ನಾಮ ಜಪ ಮಾಡುವುದರಿಂದ ಆತ್ಮಶಕ್ತಿ ಹೆಚ್ಚುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ಸದಸ್ಯೆ ಕವಿತಾ ಮಲ್ಲೇಗೌಡ ಶ್ರೀಕೃಷ್ಣನ ಮಹಿಮೆ ಹಾಗೂ ಶ್ರೀಕೃಷ್ಣಾಷ್ಟಮಿಯ ಆಚರಣೆಯ ಮಹತ್ವದ ಬಗ್ಗೆ ಹೇಳಿದರು. ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದೇಶವನ್ನು ತಿಳಿಸಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ತಿಳಿಸುವುದು, ಧರ್ಮ, ಆಧ್ಯಾತ್ಮ ವಿಚಾರಗಳನ್ನು ತಿಳಿಸುವುದು ಅಂಬಿಕಾ ವಿದ್ಯಾಲಯದ ವಿಶೇಷತೆ. ಕರ್ತವ್ಯದ ಜೊತೆಗೆ ಭಕ್ತಿಯಿಂದ ಶ್ರೀ ಕೃಷ್ಣನನ್ನು ಭಜಿಸಿ ಭಗವಂತನ ಕೃಪೆಗೆ ಪಾತ್ರರಾಗಿ. ಶುಭವಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡ ಭಜನಾ ಸ್ಪರ್ಧೆ, ಭಗವದ್ಗೀತಾ ಶ್ಲೋಕ ಕಂಠಪಾಠ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಅತಿಥಿಗಳು ದೀಪ ಉರಿಸಿ ಶ್ರೀಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಂದ, ಶ್ಲೋಕ, ಭಜನೆ, ಭಗವದ್ಗೀತಾ ಪಠಣ ನಡೆಯಿತು.
ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹಾಗೂ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮಹತಿ, ಶ್ರೀಮಾ, ಧನ್ಯಾ ಪ್ರಾರ್ಥಿಸಿದರು. ಮನ್ವಿ ವಿ ರೈ ಸ್ವಾಗತಿಸಿ ತನ್ವಿತಾ ಎಂ ಶೆಟ್ಟಿ ವಂದಿಸಿದಳು. ವಿದ್ಯಾರ್ಥಿನಿ ಪ್ರಾರ್ಥನಾ ಕಾರ್ಯಕ್ರಮ ನಿರೂಪಿಸಿದಳು. ತದನಂತರ ಮೊಸರುಕುಡಿಕೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ