ಮಿಜಾರು: ‘ಸೋಲು’ ಎಂಬುದು ಹಿನ್ನಡೆಯಲ್ಲ. ಬದುಕಿನ ಭದ್ರ ಮುಂದಡಿ ಇಡಲು ದೊರೆತ ತಿದ್ದುಪಡಿ’ ಎಂದು ಆಂಧ್ರ ಪ್ರದೇಶದ ವಿಜ್ಞಾನ್’ಸ್ ಫೌಂಡೇಶನ್ ಫಾರ್ ಸೈನ್ಸ್, ಟೆಕ್ನಾಲಜಿ ಆಂಡ್ ರಿಸರ್ಚ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ. ನಾಗಭೂಷಣ ಹೇಳಿದರು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡ 2023-24ನೇ ಸಾಲಿನ ವಿದ್ಯಾರ್ಥಿ ಸೇರ್ಪಡೆ ಕಾರ್ಯಕ್ರಮ ‘ಆಳ್ವಾಸ್ ಆಗಮನ’ದಲ್ಲಿ ಅವರು ಮಾತನಾಡಿದರು.
‘ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ, ತಪ್ಪಿನ ಅರಿವಾಗಿ ತಿದ್ದಿಕೊಳ್ಳುವುದು ಬಹುಮುಖ್ಯ. ಡಿಆರ್‍ಡಿಒ ಅಥವಾ ಇಸ್ರೊದಲ್ಲಿ ಇರುವ ಎಲ್ಲರೂ ಐಐಟಿ ಮತ್ತು ಐಐಎಸ್‍ಸಿಎಸ್ ವಿದ್ಯಾರ್ಥಿಗಳೆ ಅಲ್ಲಾ. ಹೆಚ್ಚಿನವರೆಲ್ಲ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಉಲ್ಲೇಖಿಸಿದ್ದನ್ನು ನೆನಪಿಸಿಕೊಂಡು, ಸೇರಿದ ವಿದ್ಯಾರ್ಥಿಗಳಿಗೆ ಭವಿಷ್ಯದ ಅವಕಾಶಗಳ ಬಗ್ಗೆ ತಿಳಿಸಿದರು.
‘ನಿರ್ಮಾಣದ ಎಡವಟ್ಟನ್ನು ಸರಿಪಡಿಸುವುದು ಕಷ್ಟಸಾಧ್ಯ. ಅದಕ್ಕಾಗಿ ಆರಂಭದಲ್ಲಿ ತಪ್ಪಾಗದಂತೆ ನೋಡಿಕೊಳ್ಳಬೇಕು. ನಿಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದಿರಲಿ. ಆ ಮೂಲಕ ನೀವು ದೌರ್ಬಲ್ಯ ಮೀರಿ ಶಕ್ತಿಶಾಲಿಗಳಾಗಲು ಯತ್ನಿಸಬಹುದು’ ಎಂದರು.
‘ನೀವು ಅತ್ಯುತ್ತಮ ವಿದ್ಯಾಸಂಸ್ಥೆಯಲ್ಲಿ ಇದ್ದೀರಿ. ನಿಮ್ಮ ಮುಂದಿನ ನಾಲ್ಕು ವರ್ಷಗಳಿಗೆ ನಿಮ್ಮ ಪೋಷಕರು ಬಂಡವಾಳ ಹಾಕಿದ್ದಾರೆ. ಅದು ನಿಮ್ಮ ಸಾಲ. ಆ ಸಾಲದ ಕಂತನ್ನು ಮರುಪಾವತಿಸುವುದು ನಿಮ್ಮ ಕರ್ತವ್ಯ. ನೀವು ಮುಂದಿನ ಪೀಳಿಗೆಗೆ ಫಲ ನೀಡಬೇಕು. ನಿಮ್ಮ ಹಾದಿಯನ್ನು ಕೇಂದ್ರೀಕರಿಸಿ. ಇತರರ ಬಗ್ಗೆ ಚಿಂತೆ ಬೇಡ. ಉತ್ತರದಾಯಿತ್ವ ಇರಲಿ’ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ನೀವು ಯಾವ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದಕ್ಕಿಂತ ಎಷ್ಟು ಬದ್ಧತೆಯಿಂದ ತೊಡಗಿಸಿಕೊಂಡಿದ್ದೀರಿ ಎಂಬುದು ಮುಖ್ಯ’ ಎಂದರು.
‘ಇಲ್ಲಿರುವ ಕಟ್ಟಡಗಳು ಆಳ್ವಾಸ್‍ನ ಬ್ರಾಂಡ್ ಅಲ್ಲ. ಇಲ್ಲಿನ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಕಾರ್ಯವೇ ನಮ್ಮ ಬ್ರಾಂಡ್. ವಿದ್ಯಾರ್ಥಿಗಳು ಗಂಭೀರವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.
‘ಸೇರಿದ ಮೊದಲ ದಿನದಿಂದಲೇ ನೀವು ಜವಾಬ್ದಾರಿಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೊಠಾರಿ ಸ್ವಾಗತಿಸಿದರು. ಅಕಾಡೆಮಿಕ್ಸ್ ಡೀನ್ ಡಾ.ದಿವಾಕರ ಶೆಟ್ಟಿ ವರದಿ ವಾಚಿಸಿದರು. ಕಂಪ್ಯೂಟರ್ ಸೈನ್ ಆ್ಯಂಡ್ ಡಿಸೈನ್ ವಿಭಾಗದ ಮುಖ್ಯಸ್ಥ ವೇಣುಗೋಪಾಲ ರಾವ್ ಅತಿಥಿಗಳನ್ನು ಪರಿಚಯಿಸಿದರು. ಡಾ ಅಜಿತ್ ಹೆಬ್ಬಾರ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು. ಸಂಶೋಧನಾ ವಿಭಾಗದ ಡೀನ್ ಡಾ.ರಿಚರ್ಡ್ ಪಿಂಟೊ, ಲಕ್ಷ್ಮಿ ನಾಗಭೂಷಣ್ ಹಾಗೂ ವಿವಿಧ ವಿಭಾಗಗಳ ಡೀನ್‍ಗಳು ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಪಕಿ ಡಾ ಕ್ಯಾಥ್ರಿನ್ ನಿರ್ಮಲಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ