ಮಾಜಿ ಸಿಎಂ ವೀರಪ್ಪ ಮೊಯಿಲಿಯವರಿಗೂ ಇವರು ಗುರು
ಮೂಡುಬಿದಿರೆ: ಮೂರೂವರೆ ದಶಕಗಳ ಅವಧಿಯಲ್ಲಿ ಶಿಕ್ಷಕರಾಗಿ ನಾಡಿನ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯಿಲಿ ಸಹಿತ ಸಹಸ್ರಾರು ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡಿದ ಪ್ರೀತಿಯ ಗುರುಗಳಾದ ಬಂಗಬೆಟ್ಟು ಸೀತಾರಾಮ ಶೆಟ್ಟಿ ಇಂದು ತಮ್ಮ ಸಾರ್ಥಕ ಬಾಳ್ವೆಯ ಶತಕದ ಹೊಸ್ತಿಲಲ್ಲಿದ್ದಾರೆ. ಸ್ವಾತಂತ್ರ್ಯ ಪೂರ್ವ ಕಾಲದ ಜೀವನಾನುಭವ, ಶಿಕ್ಷಣ ಪ್ರೀತಿ, ಸಾಧನೆಯ ಹಾದಿಯಲ್ಲಿ ಸಾರ್ಥಕತೆಯ ಮೈಲಿಗಲ್ಲುಗಳೊಂದಿಗೆ ನಡೆ ನುಡಿಯಲ್ಲೂ ಸೀತಾರಾಮ ಮೇಸ್ಟ್ರು ಮಾದರಿ ಎನ್ನುವುದೇ ವಿಶೇಷ.
ವಯೋವೃದ್ಧರಾದರೂ ಬಾಗದ ದೇಹ, ಸ್ಪಷ್ಟವಾಗಿ ಕೇಳುವ ಕಿವಿಗಳು, ಉತ್ತಮ ಆರೋಗ್ಯ, ಇತ್ತೀಚಿನ ವರೆಗೂ ಕನ್ನಡಕವಿಲ್ಲದ ಓದು ಹೀಗೆ ಸೀತಾರಾಮ ಶೆಟ್ಟರದ್ದು ಅಪರೂಪದ ಆರೋಗ್ಯ. ಶಿಸ್ತಿನ ಗರಡಿಯಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಿದ ಅವರ ಕಾಳಜಿ ಬೆಲೆಕಟ್ಟಲಾಗದ್ದು. ತಮ್ಮ ಹಿರಿಯರು ಕಟ್ಟಿಸಿದ್ದ ಮಿಜಾರು ಬಂಗಬೆಟ್ಟು ಶಾಲೆಯಲ್ಲೇ ಕಲಿತು ಅದೇಶಾಲೆಗೆ ಶಿಕ್ಷಕರಾಗಿಯೂ ದುಡಿದದ್ದು ಅವರ ಯೋಗ. ಅಶ್ವತ್ಥಪುರ ಶಾಲೆಯಿಂದ ಆರಂಭಿಸಿ ಎಡಪದವು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗುವವರೆಗಿನ ಮೂವತ್ತೈದು ವರ್ಷಗಳ ಅವರ ಸೇವಾವಧಿ ಅದು ಅವರ ಸಾಧನೆಗಳ ಹಾದಿ.
ಅಂದಿನ ಕನ್ನಡ ಮಾಧ್ಯಮ ಶಿಕ್ಷಣದ ಕುರಿತ ಅದಮ್ಯ ಪ್ರೀತಿ, ಮೂಡುಬಿದಿರೆಯ ಪ್ರಾಂತ್ಯ ಹಾಗೂ ಕೋಟೆಬಾಗಿಲು ಶಾಲೆಗೊಂದು ಐಡೆಂಟಿಟಿ ಕೊಡುವಲ್ಲಿ ಸೀತಾರಾಮ ಮೇಸ್ಟ್ರ ಕೊಡುಗೆ ಗಮನಾರ್ಹವೇ. ಯಕ್ಷಗಾನ, ನಾಟಕ, ಭಜನೆ ನೀತಿ ಶಿಕ್ಷಣದ ಬಗ್ಗೆ ಅವರ ಒಲವು, ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಅದರಲ್ಲೂ ಮುಸ್ಲೀಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅವರು ನೀಡಿದ್ದ ಪ್ರೋತ್ಸಾಹ ಮಹಿಳಾ ಸಬಲೀಕರಣದ ಅಭಿಯಾನವೆಂದರೂ ತಪ್ಪಾಗಲಾರದು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ಉತ್ಸಾಹದಲ್ಲಿ ತಮ್ಮ ಮಿಜಾರು ಬಂಗಬೆಟ್ಟು ಶಾಲೆಯ ಆವರಣದಲ್ಲಿ ಅಂದು ಸಂಭ್ರಮಿಸಿ ಅವರು ನೆಟ್ಟಿದ್ದ ತೆಂಗಿನ ಮರಗಳು ಇಂದು ಸಾಕ್ಷಿಗಳಾಗಿ ಎದೆಯುಬ್ಬಿಸಿ ನಿಂತಿವೆ. ಓರ್ವ ಪುತ್ರ, ಈರ್ವರು ಪುತ್ರಿಯರು, ಆರು ಮಂದಿ ಮೊಮ್ಮಕ್ಕಳು, ಮರಿಮಕ್ಕಳ ಸಂಸಾರದ ಹಿರಿಯಜ್ಜನಾಗಿರುವ ಸೀತಾರಾಮ ಮೇಸ್ಟ್ರು (9845596018) ಸದ್ಯ ಮಂಗಳೂರು ಮರಕಡದಲ್ಲಿ ಪುತ್ರಿ ಹಾಗೂ ಮೊಮ್ಮಗಳ ಜತೆಗಿದ್ದಾರೆ. ನಾಡಿನ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರಂತೂ ತಮ್ಮ ಗುರುಗಳ ಬಗ್ಗೆ ವಿಶೇಷ ಗೌರವ ಹೊಂದಿದ್ದು ಊರಿಗೆ ಬಂದಾಗಲೆಲ್ಲ ಮೇಸ್ಟ್ರನ್ನು ಭೇಟಿಯಾಗುವುದನ್ನು ಮರೆತಿಲ್ಲ.
ಶತ ಸಂಭ್ರಮ: ಶತಾಯುಷಿ, ಆದರ್ಶ ಶಿಕ್ಷಕ ಬಂಗಬೆಟ್ಟು ಸೀತಾರಾಮ ಶೆಟ್ಟಿಯವರ ಹಳೆ ವಿದ್ಯಾರ್ಥಿಗಳು ಮತ್ತು ಅಭಿಮಾನಿ ಬಳಗವು ಸಮಾಜ ಮಂದಿರ ಸಭಾ ಮೂಡುಬಿದಿರೆ ಆಶ್ರಯದಲ್ಲಿ ಮೆಸ್ಟ್ರ ಶತಸಂಭ್ರಮ ಆಚರಣೆಯನ್ನು ಆ 20 ರಂದು ಪೂರ್ವಾಹ್ನ 10 ರಿಂದ ಸಮಾಜ ಮಂದಿರದಲ್ಲಿ ಹಮ್ಮಿಕೊಂಡಿದ್ದಾರೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉದ್ಯಮಿ ಕೆ. ಶ್ರೀಪತಿ ಭಟ್, ಪತ್ರಿಕೋದ್ಯಮಿ ರಾಮಚಂದ್ರ ಮಿಜಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಳೆ ವಿದ್ಯಾರ್ಥಿಗಳು, ಅಭಿಮಾನಿ ಸಂಘ ಸಂಸ್ಥೆಗಳ ಗೌರವಾರ್ಪಣೆ ಬಳಿಕ ಯಕ್ಷವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನೂರರ ಸಂಭ್ರಮದಲ್ಲಿರುವ ವಿಶ್ರಾಂತ ಶಿಕ್ಷಕ ಸೀತಾರಾಮ ಶೆಟ್ಟಿ ಅವರನ್ನು ಮಾತನಾಡಿಸಿದಾಗ "ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯವಾಗಿದೆ. ನೈತಿಕತೆಗೆ ಆದ್ಯತೆ ನೀಡಬೇಕಾಗಿದೆ. ರಾಜಕಾರಣ ಎನ್ನುವುದು ಹಣ ಸಂಪಾದನೆಗೆ ಸೀಮಿತವಾಗದೇ ದೇಶದ ಅಭಿವೃದ್ಧಿಗೆ ತಮ್ಮಿಂದಾದಷ್ಟು ಕೊಡುಗೆ ಸಲ್ಲಿಸುವಂತಾಗಬೇಕು. ಆಗ ನಾವು ಪಡೆದ ಸಳ ಸ್ವಾತಂತ್ರ್ಯ ನಿಜಕ್ಕೂ ಅರ್ಥಪೂರ್ಣವೆನಿಸುತ್ತದೆ" ಎಂದರು.
-ಗಣೇಶ ಕಾಮತ್ ಮೂಡುಬಿದಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ