ನೈತಿಕ ನೆಲೆಗಟ್ಟಿನಲ್ಲಿ ಸಾಮರ್ಥ್ಯಾಭಿವೃದ್ಧಿ ಮಾಡಿಕೊಂಡು ಸಶಕ್ತರಾಗಿ: ಡಾ. ಸತೀಶ್ಚಂದ್ರ

Upayuktha
0

   ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಒರಿಯಂಟೇಶನ್


ಉಜಿರೆ:
ವಿದ್ಯಾರ್ಥಿಗಳು ನೈತಿಕ ನೆಲೆಗಟ್ಟಿನಲ್ಲಿ ಸಾಮರ್ಥ್ಯಾಭಿವೃದ್ಧಿ ಮಾಡಿಕೊಳ್ಳುವುದರ ಮೂಲಕ ಸಶಕ್ತರಾಗಬೇಕು. ಕಾಲೇಜು ಜೀವನದಲ್ಲಿ ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಕರೆ ನೀಡಿದರು.


ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಗುರುವಾರ (ಆ.3) ನೂತನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


“ಯುವಜನತೆಯ ವೈಯಕ್ತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನೆರವು ನೀಡುವುದು ಉನ್ನತ ಶಿಕ್ಷಣದ ಉದ್ದೇಶ. ವಿದ್ಯಾರ್ಥಿಗಳು ನೈತಿಕ ನೆಲೆಗಟ್ಟಿನಲ್ಲಿ ಸಾಮರ್ಥ್ಯಾಭಿವೃದ್ಧಿ ಮಾಡಿಕೊಳ್ಳುವುದರ ಮೂಲಕ ಸಶಕ್ತರಾಗಬಹುದಾಗಿದ್ದು, ಇದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ಸಂಸ್ಥೆ ಇದೆ. ಸರಿಯಾದ ನಿರ್ಧಾರ ಕೈಗೊಂಡು ವಿದ್ಯಾರ್ಥಿಗಳು ಮುಂದುವರಿಯಬೇಕು” ಎಂದು ಅವರು ಹೇಳಿದರು.


ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸರಿ-ತಪ್ಪು ವಿಶ್ಲೇಷಣೆ, ವಿವೇಚನೆಯುತ ಚಿಂತನೆ ಅನಿವಾರ್ಯವಾಗಿದ್ದು, ಶಿಕ್ಷಣದ ಹಂತದಲ್ಲಿ ಈ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸೂಕ್ತ ಆಯ್ಕೆ ಮತ್ತು ಆದ್ಯತೆಯನುಸಾರ ಮುನ್ನಡೆದಲ್ಲಿ ಜೀವನ ಪರಿಪೂರ್ಣವಾಗಬಲ್ಲದು. ಕಾಲಕ್ಕೆ ತಕ್ಕ ಕೌಶಲಗಳನ್ನು ಹೊಂದಿ ಮುನ್ನಡೆದಾಗ ಜೀವನದಲ್ಲಿ ಕೊರತೆಗಳು ಎದುರಾಗುವುದಿಲ್ಲ ಎಂದು ಅವರು ಕಿವಿಮಾತು ಹೇಳಿದರು.


“ಚತುರ್ದಾನ (ಅನ್ನ, ಔಷಧ, ನ್ಯಾಯ ಹಾಗೂ ವಿದ್ಯೆ) ಪರಂಪರೆಗೆ ಹೆಸರುವಾಸಿಯಾದ ಧರ್ಮಸ್ಥಳ ಕ್ಷೇತ್ರವು ಹಲವು ಸಂಸ್ಥೆಗಳನ್ನು ನಡೆಸುತ್ತಿದೆ. ಅವುಗಳಲ್ಲಿ ಎಸ್.ಡಿ.ಎಂ. ಕಾಲೇಜು ಕೂಡ ಒಂದು. ಉತ್ತಮ ನಾಗರಿಕ ಸಮಾಜದ ಸೃಷ್ಟಿಯೇ ಎಲ್ಲ ಸಂಸ್ಥೆಗಳ ಮುಖ್ಯ ಉದ್ದೇಶ. ವಿದ್ಯಾರ್ಥಿಗಳು ಸರಿಯಾದ ಗ್ರಹಿಕೆ, ಸರಿಯಾದ ಜ್ಞಾನ ಹಾಗೂ ಚಾರಿತ್ರ್ಯ (ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ) ಅಳವಡಿಸಿಕೊಂಡು ಪರಿಪೂರ್ಣ ವ್ಯಕ್ತಿಗಳಾಗುವುದು ನಮ್ಮ ಉದ್ದೇಶ. ನಮ್ಮ ಕಾಲೇಜಿನಲ್ಲಿ ಜ್ಞಾನಾರ್ಜನೆ, ವ್ಯಕ್ತಿತ್ವ ವಿಕಸನಕ್ಕೆ ವಿಪುಲ ಅವಕಾಶವಿದೆ. ಬಳಸಿಕೊಳ್ಳುವುದು ನಿಮ್ಮ ಕರ್ತವ್ಯ” ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕುಲಸಚಿವೆ (ಆಡಳಿತ) ಡಾ. ಶಲೀಪ್ ಎ.ಪಿ., ಪರೀಕ್ಷಾಂಗ ಕುಲಸಚಿವೆ ಪ್ರೊ. ನಂದಾ ಕುಮಾರಿ, ಕಲಾ ನಿಕಾಯದ ಡೀನ್ ಡಾ. ಶ್ರೀಧರ ಭಟ್, ವಾಣಿಜ್ಯ ನಿಕಾಯದ ಡೀನ್ ಶಕುಂತಲಾ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಐಕ್ಯುಎಸಿ ಸಂಯೋಜಕ ಡಾ. ಜಿ.ಆರ್. ಭಟ್ ಮತ್ತಿತರರು ಉಪಸ್ಥಿತರಿದ್ದರು.


ಉಪಪ್ರಾಂಶುಪಾಲ ಪ್ರೊ. ಶಶಿಶೇಖರ ಎನ್. ಕಾಕತ್ಕರ್ ಪ್ರಸ್ತಾವಿಸಿ, ಸ್ವಾಗತಿಸಿದರು. ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ಕುಮಾರಿ ವಂದಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಅನನ್ಯಾ, ಪ್ರಣಮ್ಯಾ ಹಾಗೂ ಕೃಪಾ ಪ್ರಾರ್ಥಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top