ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇಂದು (ಆ.31) ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) 'ಎಸ್.ಡಿ.ಎಂ. ನೆನಪಿನಂಗಳ'ದ ಆರನೆಯ ಕಂತಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ, ಪ್ರತಿಭಾನ್ವಿತ ವಿದ್ಯಾರ್ಥಿನಿ- ಅಂತಿಮ ಬಿ.ಎ. ಯ ತೇಜಸ್ವಿ ಕೆ. ಅವರಿಗೆ ಹಿರಿಯ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಶ್ರೀಧರ್ ಕೆ.ವಿ. ಅವರು 5,000 ರೂ. ಸಹಾಯಧನ ಹಸ್ತಾಂತರಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಆ್ಯಂಟನಿ ಟಿ.ಪಿ. ಅವರು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.
ಅಧ್ಯಾಪಕ-ವಿದ್ಯಾರ್ಥಿ ಸಂಬಂಧ ಉತ್ತಮವಾಗಿಯೇ ಇರಬೇಕು. ವಿದ್ಯಾರ್ಥಿಗಳಿಗೆ ಬೋಧಕರ ಬಗ್ಗೆ ಭಯ ಇರಬಾರದು ಆದರೆ ಗೌರವ ಇರಬೇಕು. ಕಲಿಯುವ ತುಡಿತ, ಆತ್ಮವಿಶ್ವಾಸ ಇರಬೇಕು. ಈ ಗುಣಗಳಿಂದಾಗಿಯೇ ಎಸ್.ಡಿ.ಎಂ. ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಅವರು ಹೇಳಿದರು.
ಉತ್ತಮ ರಸ್ತೆಗಳು ಇಲ್ಲದ, ಬಸ್ಸುಗಳ ಸಂಖ್ಯೆಯೂ ವಿರಳವಾಗಿದ್ದ ಕಾಲದಲ್ಲಿ ದೂರದ ಊರುಗಳಿಂದ, ಹೊರ ಜಿಲ್ಲೆಗಳಿಂದಲೂ ಉಜಿರೆ ಎಸ್.ಡಿ.ಎಂ. ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದ ವಿದ್ಯಾರ್ಥಿಗಳ ಬವಣೆಯನ್ನು ವಿವರಿಸಿದ ಅವರು, ನುರಿತ ಬೋಧಕ ವರ್ಗದವರ ಜ್ಞಾನವನ್ನು ಪಡೆದುಕೊಂಡು ಕಾಲೇಜಿನ ವಿದ್ಯಾರ್ಥಿಗಳು ಸಾಧನೆಯ ಶಿಖರವೇರಿದ ಪರಿಯನ್ನು ವರ್ಣಿಸಿದರು.
“ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಒದಗಿಸಿದ, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉಜಿರೆ ಎಸ್.ಡಿ.ಎಂ. ಕಾಲೇಜು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಯಶಸ್ವಿಯಾಗಬೇಕು” ಎಂದು ಅವರು ಕಿವಿಮಾತು ಹೇಳಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಅವರು ಮಾತನಾಡಿ, ‘ವಿದ್ಯೆಯಿಂದ ಸ್ವತಂತ್ರರಾಗಿರಿ’ ಎಂಬ ನಾರಾಯಣ ಗುರುಗಳ ಸಂದೇಶದಂತೆ ಶಿಸ್ತುಬದ್ಧ ವಿದ್ಯಾರ್ಜನೆ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಗುರಿ, ಕನಸು ಹಾಗೂ ಛಲ ಹೊಂದಿ ಸಾಧನೆ ಮಾಡಬೇಕು. ಹತಾಶೆ, ಆತ್ಮಹತ್ಯೆ, ಕುಕೃತ್ಯಗಳತ್ತ ವಾಲದೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ವಿಶ್ವದೆಲ್ಲೆಡೆ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿದ್ದಾರೆ. ಇತ್ತೀಚಿನ ಚಂದ್ರಯಾನ-3ರಲ್ಲೂ ನಮ್ಮ ಕಾಲೇಜಿನ ಮೂವರು ಹಿರಿಯ ವಿದ್ಯಾರ್ಥಿಗಳಿದ್ದು, ಸೂರ್ಯಯಾನದಲ್ಲೂ ಪಾತ್ರ ವಹಿಸಲಿದ್ದಾರೆ. ಅಂತಹ ಸಾಧಕ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆಸಿ ಅವರನ್ನು ವಿದ್ಯಾರ್ಥಿಗಳು ಆದರ್ಶರನ್ನಾಗಿರಿಸಿಕೊಂಡು ಸಾಧನೆ ಮಾಡಲು 'ಎಸ್.ಡಿ.ಎಂ. ನೆನಪಿನಂಗಳ'ದ ಮೂಲಕ ನಿರಂತರವಾಗಿ ಪ್ರೇರಣೆ ನೀಡಲಾಗುತ್ತಿದೆ” ಎಂದರು.
ವಿದ್ಯಾರ್ಥಿನಿಯರಾದ ಅನನ್ಯಾ, ಶರಣ್ಯಾ ಹಾಗೂ ವೈದೇಹಿ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು. ವಿದ್ಯಾರ್ಥಿನಿ ಮೇಘಶ್ರೀ ವಂದಿಸಿದರು. ಪ್ರಾಧ್ಯಾಪಕ ಅಭಿಲಾಷ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ