ಮಂಗಳೂರು: ಇಂದು ಭಾಷಾ ಗೊಂದಲಗಳ ಮಧ್ಯೆ ತುಳುವನ್ನು ಬಡವಾಗಲು ಬಿಡಬಾರದು. ತುಳುವಿಗೆ ಅದರದೇ ಆದ ವೈಶಿಷ್ಟವಿದೆ. ಈ ಮಣ್ಣಿನ ಕಂಪನ್ನು ಪಸರಿಸಲು ತುಳು ಕಾರಣವಾಗುತ್ತದೆ. ಇಂದಿನ ಯುಗದಲ್ಲಿ ಯಾವುದೇ ದೇಶದಲ್ಲಿದ್ದರೂ ನಾವು ಪ್ರತಿಯೊಬ್ಬನನ್ನೂ ಕ್ಷಣಾರ್ಧದಲ್ಲಿ ತಲುಪುವಂತಾಗುತ್ತದೆ. ಭಾಷಾ ವಿನಿಮಯದಿಂದ ವಿಚಾರಗಳನ್ನೂ ಅವರಿಗೆ ತಿಳಿಸಬಹುದು. ಆಗ ತುಳುವರು ತಮ್ಮ -ತಮ್ಮ ಆಚಾರ-ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಭಾಷಾ ಪ್ರೇಮವನ್ನು ವೃದ್ಧಿಗೊಳಿಸ ಬಹುದು. ಭಾಷಾ ಬಳಕೆ ಹೆಚ್ಚಿದಷ್ಟೂ ಅದು ವೃದ್ಧಿಸುತ್ತದೆ" ಎಂದು ಕೊಡ್ಮಾಣ್ ನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಭಾಸ್ಕರ ರಾವ್ ಹೇಳಿದರು. ಅವರು ತುಳು ಕೂಟ (ರಿ) ಕುಡ್ಲದ ಬಂಗಾರ್ ಪರ್ಬ- 06ರ ತುಳುವೆರೆ ಹಳ್ಳಿಗೊಬ್ಬುಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೂಟದ ಅಧ್ಯಕ್ಷ ಬಿ.ದಾಮೋದರ ನಿಸರ್ಗರು ಮರೆಯಾಗುತ್ತಿರುವ ಹಳ್ಳಿ ಆಟಗಳು, ಗ್ರಾಮೀಣ ಕ್ರೀಡೆಗಳು ಇಂದಿನ ಜನಾಂಗಕ್ಕೆ ಪರಿಚಯಿಸಲ್ಪಡಬೇಕು ಎಂಬ ಕಾರಣಕ್ಕಾಗಿ ಇಂದು ಈ ಸರಕಾರಿ ಪ್ರೌಢಶಾಲೆಯಲ್ಲಿ ತುಳುವೆರೆ ಹಳ್ಳಿ ಗೊಬ್ಬುಲು ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸಿದ್ದೇನೆ. ನಮ್ಮತನವನ್ನು ಈ ಆಟಗಳು ಧೃಡಗೊಳಿಸುತ್ತವೆ. ತುಳು ಪರಂಪರೆಯನ್ನು ಉಳಿಸುವ ಆ ಹೊಣೆ ನಾಳಿನ ಪ್ರಜೆಗಳಾದ ಯುವ ಪಡೆಯಾದ ನಿಮ್ಮ ಮೇಲೆ ಇದೆ. ಹಾಗಾಗಿ, ನೆಲದ ಸತ್ತ್ವವನ್ನು ತಿಳಿದು ಭಾಷಾಭಿವೃಧಿಗೊಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದೇವದಾಸ್ ಕೆ. ಶ್ರೀಮತಿ ಹೇಮಾ ನಿಸರ್ಗ ಮುಖ್ಯ ಅತಿಥಿಗಳಾಗಿದ್ದರು. ಶ್ರೀಪದ್ಮನಾಭ ಕೋಟ್ಯಾನ್ ರವರು ಹಳ್ಳಿಗೊಬ್ಬು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬಿದರು.
ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ದಿನೇಶ ಕು೦ಪಲ, ರಮೇಶ ಕುಲಾಲ್ ಬಾಯಾರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಸುಜಾತಾ ಸುವರ್ಣ ವಂದನಾರ್ಪಣೆ ಸಲ್ಲಿಸಿದರು.
ಶಾಲಾ ಅಧ್ಯಾಪಿಕಾ ಗಣ ಹಾಗೂ ತುಳುಕೂಟದ ಪದಾಧಿಕಾರಿಗಳು ತುಳುವೆರೆ ಹಳ್ಳಿಗೊಬ್ಬುಗಳ ಸ್ಪರ್ಧೆಯನ್ನು ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿ, ವಿಜೇತರಿಗೆ ಅಧ್ಯಕ್ಷರ ಮೂಲಕ ಬಹುಮಾನ ವಿತರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ