ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ವಾಹನವನ್ನು ಹತ್ತಿ ಕುಳಿತುಕೊಳ್ಳುತ್ತೇವೆ. ಬಸ್ಸು , ಲಾರಿ, ರೈಲು, ವಿಮಾನ ಮತ್ತು ಹಡಗುಗಳಲ್ಲಿ ಪ್ರಯಾಣ ಮಾಡುತ್ತೇವೆ. ಯಾವ ಆಧಾರದ ಮೇಲೆ ನಾವು ವಾಹನದಲ್ಲಿ ಕುಳಿತುಕೊಳುತ್ತವೆ?. ಬಸ್ಸು ಲಾರಿಯಲ್ಲಿ ಕುಳಿತಾಗ, ಅದರ ಡ್ರೈವರ್ ನ ಮೇಲೆ, ಹಡಗು ಮತ್ತು ದೋಣಿಯಲ್ಲಿ ಕುಳಿತಾಗ ಅವುಗಳ ನಾವಿಕನ ಮೇಲೆ ಹಾಗೆಯೇ ವಿಮಾನದಲ್ಲಿ ಕುಳಿತಾಗ ಅವರ ಫೈಲೆಟ್ ನ ಮೇಲೆ ಅಪಾರವಾದ ನಂಬಿಕೆಯ ಆಧಾರವನ್ನು ಇಟ್ಟಿರುತ್ತೇವೆ. ಹಾಗೆಯೇ ಪ್ರತಿ ದಿನ ರಾತ್ರಿ ನಾವು ಮಲಗುವಾಗ " ನಾಳೆ ಯಾವ ಯಾವ ಕೆಲಸಗಳನ್ನು ಮಾಡಬೇಕು ಎಂದು ಆಲೋಚಿಸುತ್ತಾ ಮಲಗುತ್ತೇವೆ. " ಆದರೆ ಯಾವ ಆಧಾರದ ಮೇಲೆ ಈ ರೀತಿ ಆಲೋಚಿಸುತ್ತೇವೆ. ಇದಕ್ಕೆ ಬಲಯುತವಾದ ನಂಬಿಕೆಯೇ ಕಾರಣ. ನಾಳೆಗಳಲ್ಲಿ ನಮಗೆ ನಂಬಿಕೆ ಇದೆ. ಭವಿಷ್ಯದಲ್ಲಿ ನಾವು ಹೀಗಾಗಬೇಕು, ಹಾಗಾಗಬೇಕೆಂದು ಕನಸು ಕಾಣುತ್ತೇವೆ. ಹೀಗೆಲ್ಲ ನಾವು ಮಾಡಲು ನಂಬಿಕೆಯ ಮೇಲೆ ನಮಗೆ ಅಪಾರವಾದ ನಂಬಿಕೆಯಿದೆ. ಆದ್ದರಿಂದಲೇ ಈ ರೀತಿ ಯೋಚಿಸುತ್ತೇವೆ.
ನಂಬಿಕೆ ಎಂಬುದು ಒಂದು ಅಘಾದವಾದ ಶಕ್ತಿ . ತಿಳಿದವರು ಹೇಳುತ್ತಾರೆ ನಂಬಿ ನಡೆದರೇನೇ ಕೈಲಾಸ. ನಂಬಿ ನಡೆದರೇನೆ ವೈಕುಂಠ ನಂಬಿಕೆಯೇ ಬ್ರಹ್ಮಲೋಕ. ಅಂದರೆ ಸೃಷ್ಠಿ , ಸ್ಥಿತಿ ಮತ್ತು ಲಯ ಎಲ್ಲವೂ ನಂಬಿಕೆಯಲ್ಲಿಯೇ ಇದೆ. " ನಂಬಿ ಕೆಟ್ಟವರಿಲ್ಲವೋ, ರಂಗಯ್ಯನ, ನಂಬದೇ ಕೆಟ್ಟರೆ ಕೆಡಲಿ " ಎನ್ನುತ್ತಾರೆ ಪುರಂಧರ ದಾಸರು. ನಮ್ಮೆಲ್ಲರ ಜೀವನ ನಂಬಿಕೆಯಲ್ಲಿಯೇ ಇರುವುದು. ನಂಬಿದರೆ ಮಾತ್ರ ಬ್ರಹ್ಮ , ವಿಷ್ಣು , ಮಹೇಶ್ವರ. ನಂಬದಿರೆ ಎಲ್ಲವೂ ಶೂನ್ಯ. ನಂಬಿಕೆ ಎಂಬುದು ಮನಸ್ಸಿಗೆ ಸಂಬಂಧಿಸಿದ್ದಾಗಿದೆ. ಯಾವುದೋ ಒಂದು ಸಂಗತಿಯನ್ನು ನಂಬುವುದಿಲ್ಲವೆಂದು ಮನಸ್ಸು ನಿರ್ಧರಿಸಿಬಿಟ್ಟರೆ, ಅಲ್ಲಿಗೆ ಶುದ್ಧ ಚಿನ್ನವನ್ನೇ ತಂದು ಇದಿರಿಗಿಟ್ಟರೂ ನಾವು ಅದನ್ನು ಚಿನ್ನವೆಂದು ನಂಬುವುದಿಲ್ಲ. ಏಕೆಂದರೆ, ಇಲ್ಲಿ ನಂಬಿಕೆ ಎಂಬುದು ಕೆಲಸ ಮಾಡುತ್ತಿರುತ್ತದೆ.
ನಂಬಿಕೆಯೆಂಬುದು ಮನುಷ್ಯನ ಪ್ರತಿ ಹೆಜ್ಜೆಯ ಶಕ್ತಿ. ಅದು ಸತ್ಯದೆಡೆಗೆ ಇದ್ದಾಗ ಇನ್ನೂ ಬಲವಾಗಿರುತ್ತದೆ. ಅದರ ಪರಿಣಾಮವು ಫಲದಾಯಕವಾಗಿರುತ್ತದೆ. ನಾವು ದೇವರಲ್ಲಿ ನಂಬಿಕೆ ಇಟ್ಟು ಕೆಲಸಗಳನ್ನು ಮಾಡುತ್ತೇವೆ. ದೇವರನ್ನು ಆಧರಿಸಿ ಬದುಕುತ್ತ ಕಷ್ಟಗಳನ್ನು ಪರಿಹರಿಸುವಂತೆ ಆತನಲ್ಲಿ ಪ್ರಾರ್ಥಿಸುತ್ತೇವೆ. ಏಕೆಂದರೆ ದೇವರು ಸರ್ವಾಂತರ್ಯಾಮಿ, ಸರ್ವಜ್ಞ ಹಾಗೂ ಸರ್ವಶಕ್ತ ಎಂಬ ನಂಬಿಕೆ ದೃಢವಾಗಿದೆ. ದೇವರು ಎಲ್ಲಾ ಕಡೆಯಿದ್ದಾನೆ ಎಂಬ ನಂಬಿಕೆಯಿದ್ದರೂ ನಾವು ಮೋಸ, ವಂಚನೆ, ಅನಾಚಾರಗಳಲ್ಲಿ ತೊಡಗಿಕೊಳ್ಳುತ್ತಿದ್ದೇವೆ. ಇವುಗಳ ಪರಿಣಾಮವೇನಾಗುತ್ತದೆ ಎಂಬುದು ನಮಗೆ ಗೊತ್ತಿದ್ದರೂ ನಾವು ದುಷ್ಕೃತ್ಯಗಳನ್ನು ಮಾಡುತ್ತಲೇ ಹೋಗುತ್ತವೆ. ಅಲ್ಲದೆ ನಂಬಿದವನಿಗೆ ಮೋಸ ಮಾಡುತ್ತೇವೆ. ಹೀಗೆ ಮಾಡಬಾರದು. ದೇವರಲ್ಲಿ ಅಚಲವಾದ ನಂಬಿಕೆ ಇದ್ದು , ಅದರಂತೆ ತಪ್ಪದೆ ನಡೆದುಕೊಂಡರೆ ಜೀವನ ಹರ್ಷದಾಯಕವಾಗುತ್ತದೆ.
ಭಾರತೀಯ ಪರಂಪರೆಯಲ್ಲಿ ನಂಬಿಕೆಗೆ ಮಹತ್ವದ ಸ್ಥಾನಮಾನವಿದೆ. ನಂಬಿಕೆ ಹೆಚ್ಚಿದಂತೆ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚುತ್ತದೆ. ಮನೋಸಂಕಲ್ಪ ದೃಢವಾಗುತ್ತದೆ. ಆತ್ಮಬಲ ವೃದ್ಧಿಸುತ್ತದೆ. ಆತ್ಮ ಪ್ರಜ್ಞೆ ಜಾಗೃತಗೊಳ್ಳುತ್ತದೆ. ವ್ಯಕ್ತಿಯ ದೈಹಿಕ ಅಂಗಾಂಗಗಳು ಕ್ರಿಯಾಶೀಲತೆ ಪಡೆಯುತ್ತವೆ. ಆಲಸ್ಯತನ ದೂರವಾಗುತ್ತದೆ. ನರನಾಡಿಗಳು ಚೈತನ್ಯವನ್ನು ಹೊಂದುತ್ತವೆ. ಕಣ್ಣುಗಳಲ್ಲಿ ಗುರಿತಲುಪುವ, ಸಾಧನೆಯ ಮಾರ್ಗ ಮಾತ್ರ ಗೋಚರಿಸುತ್ತಿರುತ್ತದೆ. ಧನಾತ್ಮಕ ಶಕ್ತಿ ಬೆಳೆಯುತ್ತದೆ. ಧನಬಲ ಮತ್ತು ಜನಬಲವು ನಂಬಿಕೆಯುಕ್ತ ವ್ಯಕ್ತಿಯ ಕಡೆಗೆ ಧಾವಿಸುತ್ತದೆ. ಕಾರ್ಯ ವೈಖರಿಯ ವಿಧಾನ ಸಮತೋಲನ ಹೊಂದಿರುತ್ತದೆ. ನಂಬಿಕೆಯಿಂದ ಕೈಗೊಳ್ಳುವ ಕೆಲಸ ಋಷಿಯ ಕಠೋರ ತಪಸ್ಸಿನಂತಿರುತ್ತದೆ ಮತ್ತು ಕಷ್ಟ ಸಹಿಷ್ಣುತೆಯ ಮನೋಭಾವ ಗಟ್ಟಿಯಾಗಿರುತ್ತದೆ. ಆದ್ದರಿಂದಲೇ ಋಷಿಮುನಿಗಳು ಸಾಮಾನ್ಯಜನರಿಗಿಂತ ವಿಭಿನ್ನರಾಗಿ ಕಾಣುತ್ತಾರೆ. ನಂಬಿಕೆಯಿಂದಲೇ ಯಶಸ್ಸು ಸಿದ್ಧಿಸುತ್ತದೆ. ನಂಬಿಕೆ ಕಡಿಮೆಯಾದಂತೆ ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗುತ್ತದೆ. ಮನಸ್ಸು ವಿಕಲ್ಪದತ್ತ ವಾಲುತ್ತದೆ. ಆತ್ಮಬಲ ಕಡಿಮೆಯಾಗುತ್ತದೆ. ಆತ್ಮಪ್ರಜ್ಞೆ ಜಾಗೃತಗೊಳ್ಳುವುದಿಲ್ಲ. ವ್ಯಕ್ತಿಯ ದೈಹಿಕ ಅಂಗಾಂಗಗಳು ನಿಷ್ಕ್ರಿಯತೆ ಪಡೆಯುತ್ತವೆ. ಹುರುಪು ಕಡಿಮೆಯಾಗಿ ಸೋಮಾರಿತನ ಹೆಚ್ಚಾಗುತ್ತದೆ. ನರನಾಡಿಗಳು ರೋಗಗ್ರಸ್ತವಾ ಗುತ್ತವೆ. ಸಾಧನೆಯ ಮಾರ್ಗ ಕಾಣುವುದಿಲ್ಲ. ನಕಾರಾತ್ಮಕ ಶಕ್ತಿ ಬೆಳೆಯುತ್ತವೆ. ಇದರಿಂದಾಗಿ ವ್ಯಕ್ತಿಯ ವ್ಯಕ್ತಿತ್ವದ ಅಧಃಪತನ ಪ್ರಾರಂಭ ವಾಗುತ್ತದೆ. ಕಷ್ಟ ಸಹಿಷ್ಣುತೆಯ ಮನೋಭಾವ ಇರುವುದಿಲ್ಲ. ಮುಂಗೋಪಿಗಳಾಗುತ್ತಾರೆ. ಧನಬಲ, ಜನಬಲ ಮತ್ತು ಮನೋಬಲವನ್ನು ಕಳೆದುಕೊಳ್ಳುತ್ತಾರೆ. ಕಾರ್ಯ ವೈಖರಿಯ ವಿಧಾನ ಅಸಮತೋಲನವಾಗುತ್ತದೆ. ಚಂಚಲತೆ ಪ್ರತಿ ಹಂತದಲ್ಲೂ ಕಂಡುಬರುತ್ತದೆ. ನಂಬಿಕೆಯಿಲ್ಲದಿದ್ದರೆ ಯಾವ ಯಶಸ್ಸು ಸಿದ್ಧಿಸುವುದಿಲ್ಲ. ನಂಬಿಕೆಯ ವಿಚಾರದಲ್ಲಿ ಇಡೀ ವಿಶ್ವದಲ್ಲೇ ಭಾರತೀಯರು ಅನನ್ಯರಾಗಿದ್ದಾರೆ. ಭಾರತೀಯರ ನಂಬಿಕೆ ವಿವಾಹ ಮತ್ತು ಕುಟುಂಬ ಎಂಬ ಎರಡು ಸಂಸ್ಥೆಗಳಲ್ಲಿ ಮೇರುಮಟ್ಟದಲ್ಲಿದೆ. ಭಾರತೀಯರ ನಂಬಿಕೆ ಶೀಲ, ಸೌಜನ್ಯ, ಸಂಯಮಗಳಲ್ಲಿದೆ. ಭಾರತೀಯರ ನಂಬಿಕೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಇವುಗಳಲ್ಲಿದೆ. ಈಶ, ವ್ಯಾಸ, ಕಠೋ, ಪ್ರಶ್ನ, ಚಾಂಡೂಕ್ಯ, ಮಾಂಡೋಕ್ಯ, ಮುಂತಾದ ಉಪನಿಷತ್ತುಗಳಲ್ಲಿ ಭಾರತೀಯರ ನಂಬಿಕೆಯಿದೆ. ಮಹಾಭಾರತ, ರಾಮಾಯಣ, ಭಗವದ್ಗೀತೆಗಳಲ್ಲಿ ನಂಬಿಕೆಯಿದೆ. ಆಗಮಶಾಸ್ತ್ರಗಳಲ್ಲಿ, ದರ್ಶನಶಾಸ್ತ್ರಗಳಲ್ಲಿ, ಯೋಗಶಾಸ್ತ್ರಗಳಲ್ಲಿ, ವೇದಾಂಗಗಳಲ್ಲಿ, ಅರಣ್ಯಕಗಳಲ್ಲಿ, ಬ್ರಾಹ್ಮಣ್ಯಕಗಳಲ್ಲಿ ತತ್ವಶಾಸ್ತ್ರಗಳಲ್ಲಿ, ಚರಕಸಂಹಿತೆ, ಸುಶ್ರುತ ಸಂಹಿತೆ ಚಾಣಕ್ಯನ ರಾಜನೀತಿ ಶಾಸ್ತ್ರದಲ್ಲಿ ಇತ್ಯಾದಿ ನೀತಿಸಂಹಿತೆಗಳಲ್ಲಿ ಭಾರತೀಯರ ದೃಡವಾದ ನಂಬಿಕೆಯಿದೆ. ಮಿಗಿಲಾಗಿ ಭಾರತೀಯ ಕಾನೂನು ಶಾಸ್ತ್ರ ನಮ್ಮ ಸಂವಿಧಾನದಲ್ಲಿ ಸದೃಢವಾದ ವಿಶ್ವಾಸವಿದೆ. ನಮ್ಮೆಲ್ಲಾ ಯೋಧರ ಮೇಲೆ ನಮಗೆ ಹೆಮ್ಮೆಯ ನಂಬಿಕೆಯಿದೆ. ನಮಗೆ ಪ್ರತಿನಿತ್ಯದ ಅನ್ನವನ್ನು ನೀಡುವ ಅನ್ನದಾತ ರೈತರ ಮೇಲೆ ಭಾರತೀಯರ ಅಚಲವಾದ ನಂಬಿಕೆಯಿದೆ. ಈ ನಂಬಿಕೆಯಿಂದಲೇ ಭಾರತದ ನೂರ ಮೂವತ್ತೆಂಟು ಕೋಟಿ ಜನರ ಬದುಕು ಸಾಗುತ್ತಿದೆ. ಏಕೆಂದರೆ ನಂಬಿಕೆ ಭಾರತೀಯ ಮನೋಭವನದ ಅಡಿಗಲ್ಲು. ಈಗ ಹೇಳೋಣ ನಮ್ಮ ದೇಶ ನಮ್ಮ ಹೆಮ್ಮೆ,
-ಕೆ. ಎನ್. ಚಿದಾನಂದ ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ