ಉಜಿರೆ: ‘ರಾಷ್ಟ್ರ ಮೊದಲು’ ಎಂಬ ಧ್ಯೇಯಪ್ರಜ್ಞೆ, ಶಿಸ್ತುಬದ್ಧ ಪಥಸಂಚಲನ ಮತ್ತು ದೇಶಾಭಿಮಾನದ ಗೀತ-ಸಂಗೀತ ಮಾಧುರ್ಯದ ನಡುವೆ ಎಸ್.ಡಿ.ಎಂ ಕಾಲೇಜಿನ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣವು 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಎಸ್.ಡಿ.ಎಂ ಶಾಲೆ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳ ಸಮ್ಮುಖ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅವರು ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರುತ್ತಿದ್ದಂತೆ ಎಸ್.ಡಿ.ಎಂ ಕಲಾಕೇಂದ್ರದ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಿದರು. ವಂದೇಮಾತರಂ ಗೀತೆಯನ್ನು ಹಾಡಿದರು. ‘ಸಾರೇ ಜಹಾಂಸೆ ಅಚ್ಛಾ’ ಹಾಡಿನೊಂದಿಗೆ ಅಲ್ಲಿದ್ದವರೊಳಗೆ ದೇಶದ ಕುರಿತ ಹೆಮ್ಮೆ ಮೂಡುವಂತೆ ಪ್ರೇರಣೆ ನೀಡಿದರು.
ಎಸ್.ಡಿ.ಎಂ ಕಾಲೇಜ ಕಲಾ ನಿಕಾಯದ ಡೀನ್ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್‍ಸಿಸಿಯ ಲೆಫ್ಟಿನೆಂಟ್ ಭಾನುಪ್ರಕಾಶ್, ಲೆಫ್ಟಿನೆಂಟ್ ಶುಭಾರಾಣಿ, ಕೇರ್ ಟೇಕರ್ ಹರೀಶ್ ಶೆಟ್ಟಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಧ್ವಜವಂದನೆ ಸಲ್ಲಿಸಿದರು. ಥರ್ಡ್ ಆಫೀಸರ್ ವಿವೇಕ್, ರೋವರ್ ಸ್ಕೌಟ್ ಲೀಡರ್ ಪ್ರಸಾದ್, ರೇಂಜರ್ ಲೀಡರ್ ಗಾನವಿ ಮಾರ್ಗದರ್ಶನದಲ್ಲಿ ಧ್ವಜಾರೋಹಣ ಸಂದರ್ಭದ ಬ್ಯಾಂಡ್‍ಸೆಟ್‍ನ್ನು ವಿದ್ಯಾರ್ಥಿಗಳು ನಿರ್ವಹಿಸಿದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಮಾರ ಹೆಗ್ಡೆ ಬಿ.ಎ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ, ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ ಕುಮಾರ್, ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಮತ್ತಿತರ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎನ್.ಎಸ್.ಎಸ್‍ನ ಸ್ವಯಂ ಸೇವಕರು ಸಿಹಿ ವಿತರಿಸಿದರು. ದೈಹಿಕ ಶಿಕ್ಷಣ ವಿಭಾಗದ ಸ್ಪೋಟ್ರ್ಸ್ ಕ್ಲಬ್ ವಿದ್ಯಾರ್ಥಿಗಳು ಇಡೀ ಕ್ರೀಡಾಂಗಣವನ್ನು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ