ಕಾವ್ಯದ ಓದು ಯುವಜನತೆಯ ಭವಿಷ್ಯದ ಬೆಳಕು: ಡಾ.ಸಿ.ಎ. ರಮೇಶ್

Upayuktha
0


ಕುಪ್ಪಂ: “ಹೊಸಗನ್ನಡ ಕಾವ್ಯವು ವೈವಿಧ್ಯದಿಂದ ಕೂಡಿದ್ದು ನವೋದಯ, ನವ್ಯ, ಸಮನ್ವಯ, ದಲಿತ ಹೀಗೆ ವಿವಿಧ ಪರಂಪರೆಗಳಲ್ಲಿನ ಹಲವು ‘ಕನ್ನಡಂಗಳ್’ ಕಾವ್ಯದ ಸೊಬಗಿಗೆ ಕಾರಣವಾಗಿವೆ. ಇಂದಿನ ಯುವಜನರು ಕಾವ್ಯಾಭ್ಯಾಸದಿಂದ ಸೂಕ್ಷ್ಮತೆಯನ್ನು ಗಳಿಸಿಕೊಳ್ಳಬಹುದಾಗಿದೆ, ಕಾವ್ಯದ ಓದು ಯುವಜನತೆಯ ಭವಿಷ್ಯವನ್ನು ರೂಪಿಸುವ ಬೆಳಕು” ಎಂದು ಕೋಲಾರದ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಎ.ರಮೇಶ್ ಅಭಿಪ್ರಾಯಪಟ್ಟರು.


ಅವರು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗವು ಆಯೋಜಿಸಿದ್ದ ‘ಹೊಸಗನ್ನಡ ಕಾವ್ಯದಲ್ಲಿ ಹಲವು ಕನ್ನಡಂಗಳ್’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.


ಅವರು “ಕನ್ನಡದ ಹಲವು ಬಗೆಗಳು ಕುವೆಂಪು, ಬೇಂದ್ರೆ, ಅಡಿಗ, ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹಮದ್, ಸು.ರಂ.ಎಕ್ಕುಂಡಿ, ಸಿದ್ಧಲಿಂಗಯ್ಯ, ಕೆ.ವಿ.ತಿರುಮಲೇಶ್‍ರಾದಿಯಾಗಿ ಅನೇಕ ಕಾವ್ಯಗಳಲ್ಲಿ ಅಭಿವ್ಯಕ್ತಗೊಂಡಿದೆ. ಸ್ಥಳೀಯ ಅನನ್ಯತೆಯುಳ್ಳ ಪದಗಳು ಕಾವ್ಯ ಪರಂಪರೆಗೆ ಗಟ್ಟಿತನ ತಂದುಕೊಟ್ಟಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳುಗಳನ್ನೊಳಗೊಂಡ ದ್ರಾವಿಡ ಭಾಷಾ ಕಾವ್ಯರಂಪರೆಯು ಇಂತಹ ವೈವಿಧ್ಯದಿಂದಾಗಿಯೇ ಅನನ್ಯವೆನಿಸುತ್ತದೆ” ಎಂದು ಅಭಿಪ್ರಾಯಪಟ್ಟರು.


ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎ.ಕೆ.ವೇಣುಗೋಪಾಲ ರೆಡ್ಡಿಯವರು ಕನ್ನಡ ವಿಭಾಗದ ಈ ಸರಣಿ ಉಪನ್ಯಾಸಗಳು ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಮ್ಮ ಸಂದೇಶದಲ್ಲಿ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾಷಾ ನಿಕಾಯದ ಡೀನ್ ಆದ ಡಾ.ಬಿ.ಎಸ್. ಶಿವಕುಮಾರ್ ಅವರು “ಈ ವಿಶೇಷ ಉಪನ್ಯಾಸವು ದ್ರಾವಿಡ ಕವಿತ್ವದ ತೌಲನಿಕ ಅಧ್ಯಯನಕ್ಕೆ ಸಹಕಾರಿ, ಕಾವ್ಯಬಂಧದ ಒಳಹರಿವನ್ನು ನಾವಿಲ್ಲಿ ಕಾಣಬಹುದು” ಎಂದು ನುಡಿದರು.


ಕಾರ್ಯಕ್ರಮದ ಆಯೋಜಕರಾದ ವಿಭಾಗದ ಪ್ರಾಧ್ಯಾಪಕರಾದ ಡಾ.ಎಂ.ಎಸ್. ದುರ್ಗಾಪ್ರವೀಣ್ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ “ವಿಭಾಗವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಇಂದು ಈ ಮಹತ್ವದ ಸರಣಿಯಲ್ಲಿ ವಿವಿದೆಡೆಗಳ ವಿದ್ಯಾರ್ಥಿಗಳು ಆನ್ ಲೈನ್ ಮೂಲಕವೂ ಪಾಲ್ಗೊಳ್ಳಬಹುದಾಗಿದೆ, ವಿದ್ವಾಂಸರೊಂದಿಗೆ ಸಂವಾದ ಮಾಡಬಹುದಾಗಿದೆ, ಮುಂದಿನ ದಿನಗಳಲ್ಲಿ ಈ ಉಪನ್ಯಾಸಗಳು ಯೂಟ್ಯೂಬ್ ಮೂಲಕವೂ ಲಭ್ಯವಾಗಲಿವೆ” ಎಂದು ಹೇಳಿದರು.


ಈ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಪ್ರೊ.ಜಯಲಲಿತ ಅವರು, ಎಂ.ಎ., ಪಿಎಚ್.ಡಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ವಾತಿ ಜಿ. ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮಾದೇಶಿ ವಿ.ಬಿ. ಅತಿಥಿಗಳನ್ನು ಪರಿಚಯಿಸಿದ್ದು ವ್ಯಾಸರಾವ್ ಜಿ.ಎಸ್. ಅವರ ನಿರೂಪಣೆಯಿದ್ದಿತು. ಮೇಘ ಟಿ.ಎನ್ ಧನ್ಯವಾದ ಸಮರ್ಪಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top