ಶ್ರೀ ರಾಮಾಯನಮ:
ರಾಮಾವತಾರದ ಉದ್ದೇಶ ರಾಮನು ದಶರಥನ ಮಗನಾಗಿ ಅರಮನೆಯಲ್ಲೇ ಇರಲೇ?ಅಲ್ಲ.ಅದು ಲೋಕಕಲ್ಯಾಣಕ್ಕಾಗಿ.
ಅರಮನೆಯಲ್ಲೇ ಇದ್ದರೆ ಲೋಕಕಲ್ಯಾಣ ಸಾಧ್ಯವಾದೀತೇ? ಅಂತಹ ಒಂದು ಸಂದರ್ಭ ತನ್ನಿಂದ ತಾನೇ ಒದಗಿ ಬಂತು.
ಒಂದು ದಿನ ಬ್ರಹ್ಮರ್ಷಿ ವಿಶ್ವಾಮಿತ್ರರು ದಶರಥನನ್ನು ಕಾಣಲು ಬಂದರು.ಮಹಾನ್ ವ್ಯಕ್ತಿಗಳು ಎಂದಾದರೂ ಮಹೋದ್ದೇಶವಿಲ್ಲದೆ ಬರುವುದುಂಟೇ? ಇಲ್ಲ. ತನ್ನಲ್ಲಿಗೆ ದಯಮಾಡಿಸಿದ ವಿಶ್ವಾಮಿತ್ರರನ್ನು ಪೂಜ್ಯ ಭಾವನೆಯಿಂದ ದಶರಥನು ಸ್ವಾಗತಿಸಿ ಸತ್ಕರಿಸಿದನು.ಬಳಿಕ ಮಹರ್ಷಿಗಳೇ ನನ್ನಿಂದೇನಾಗಬೇಕು ಅಪ್ಪಣೆಯಾಗಲಿ,ನೆರವೇರಿಸಿಕೊಡುತ್ತೇನೆಂದು ವಿನಂತಿಸಿದನು. ಸಂತಸಗೊಂಡ ವಿಶ್ವಾಮಿತ್ರರು-ಅಯ್ಯಾ ರಾಜ ಸಿದ್ಧಿ ಪ್ರಾಪ್ತಿಗಾಗಿ ನಾನು ಹತ್ತು ದಿನಗಳ ಯಜ್ಞವನ್ನು ಕೈಗೊಳ್ಳುವವನಿದ್ದೇನೆ. ಲೋಕಕಂಟಕನಾದ ರಾವಣನ ಅನುಚರರಾದ ಸುಬಾಹು ಮತ್ತು ಮಾರೀಚ ಎಂಬಿಬ್ಬರು ರಾಕ್ಷಸರಿಂದ ಈ ಯಾಗಕ್ಕೆ ವಿಘ್ನ ಬರುವ ಅಪಾಯವಿದೆ.
ಆದುದರಿಂದ ಅವರಿಂದ ಯಾಗ ರಕ್ಷಣೆಗಾಗಿ ನಿನ್ನ ಹಿರಿಯ ಮಗನಾದ ರಾಮನನ್ನು ನನ್ನೊಡನೆ ಕಳುಹಿಸು ಎಂದರು.ರಾವಣ ಸುಬಾಹು ಮಾರೀಚರ ಹೆಸರು ಕೇಳುತ್ತಲೇ ಹೆದರಿದ ದಶರಥನು ದೈನ್ಯದಿಂದ ನಿರಾಕರಿಸುತ್ತಾ ಇವನಿನ್ನೂ ಎಳೆಯ. ಯುದ್ಧಾನುಭವವಿಲ್ಲ. ಅದರಲ್ಲೂ ಆ ದುಷ್ಟರನ್ನು ಬಗ್ಗುಬಡಿಯುವ ಸಾಮರ್ಥ್ಯ ಇವನಿಲ್ಲಿಲ್ಲ. ದಯವಿಟ್ಟು ಕ್ಷಮಿಸಿ ಎಂದನು. ತನ್ನ ಶಕ್ತಿಯ ಮೇಲೆ ವಿಶ್ವಾಸವಿಲ್ಲದ ರಾಜನ ಮೇಲೆ ವಿಶ್ವಾಮಿತ್ರರಿಗೆ ಕೋಪ ಬಂತು. ಇಕ್ಷ್ವಾಕು ವಂಶದಲ್ಲಿ ಹುಟ್ಟಿ ಕೊಟ್ಟ ಮಾತಿಗೆ ತಪ್ಪುತ್ತೀಯಲ್ಲವೇ ಎಂದು ಜರೆದರು. ಆಗ ಗುರು ವಸಿಷ್ಠರು ಮಧ್ಯ ಪ್ರವೇಶಿಸಿ- ರಾಜಾ,ಹೆದರದಿರು. ವಿಶ್ವಾಮಿತ್ರರು ಸರ್ವಸಮರ್ಥರು. ಅವರೊಡನೆ ಇರುವ ರಾಮ ಸದಾ ಸುರಕ್ಷಿತನಾಗಿರವನು.
ರಾಮನು ಎಳೆಯನೆಂದೆಣಿಸಬೇಡ. ವಿಶ್ವಾಮಿತ್ರರ ಯಾಗರಕ್ಷಣೆ ಮಾಡಲು ಸಮರ್ಥನಿರುವನು. ನಿಶ್ಚಿಂತೆಯಿಂದ ಕಳುಹಿಸಿಕೊಡು. ಇದರಿಂದ ನೀನು ನಿನ್ನ ಕರ್ತವ್ಯ ನಿರ್ವಹಿಸಿದಂತಾಗುತ್ತದೆ. ರಾಮನಿಗೆ ಹೊಸದರ ಅನುಭವವಾದಂತಾಗುತ್ತದೆ. ಅವನ ಪರಾಕ್ರಮವನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಸಂದರ್ಭ ತಾನೇ ತಾನಾಗಿ ಒದಗಿ ಬಂದಿರುವಾಗ ಅದರಲ್ಲೂ ಸರ್ವಶಕ್ತನಾದ ವಿಶ್ವಾಮಿತ್ರ ಮಹರ್ಷಿಗಳೇ ಕರೆಯುತ್ತಿರುವಾಗ ಸಂತೋಷದಿಂದ ಕಳುಹಿಸಿ ಕೊಡು, ಇದರಿಂದ ರಾಮನಿಗೂ ಒಳಿತಿದೆ-ಎಂದರು. ವಸಿಷ್ಠರ ಹಿತವಚನಗಳನ್ನು ಕೇಳಿದ ಬಳಿಕ ದಶರಥನು ವಿಶ್ವಾಮಿತ್ರರೊಂದಿಗೆ ರಾಮನನ್ನೂ ಜೊತೆಗೆ ಲಕ್ಷ್ಮಣನನ್ನೂ ಸಂತೋಷದಿಂದ ಕಳುಹಿಸಿದನು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ