ಶ್ರೀ ರಾಮಾಯನಮ:
ಸರ್ವ ದೇವತೆಗಳೂ ಸೇರಿದಂತೆ ಎಲ್ಲರೂ ತೃಪ್ತಿಗೊಂಡು ದಶರಥನನ್ನು ಹರಸಿ ಹೋಗುವ ರೀತಿಯಲ್ಲಿ ಅಶ್ವಮೇಧ ಯಾಗವು ನಡೆಯಿತು.ದಶರಥನ ಪಾಪಗಳ ನಾಶವೂ ಆಯಿತು.ಪುತ್ರಕಾಮಿಯಾದ ದಶರಥನ ಪ್ರಾರ್ಥನೆಯಂತೆ ಋಷ್ಯಶೃಂಗ ಮಹರ್ಷಿಗಳು ದಶರಥನಿಂದ ಪುತ್ರ ಕಾಮೇಷ್ಟಿಯನ್ನು ನಡೆಸತೊಡಗಿದರು. ಈ ಸಂದರ್ಭದಲ್ಲಿ ಸ್ವತಃ ಬ್ರಹ್ಮನು ಅಗೋಚರನಾಗಿ ಅಲ್ಲಿದ್ದನು.ಯಜ್ಞದ ಹವಿಸ್ಸನ್ನು ದೇವತೆಗಳು ಒಬ್ಬೊಬ್ಬರಾಗಿ ಬಂದವರು ಬ್ರಹ್ಮನನ್ನು ಕಂಡು ಅಲ್ಲೇ ನಿಂತರು.ಬಳಿಕ ಎಲ್ಲರೂ ಒಟ್ಟಾಗಿ ಬ್ರಹ್ಮನಲ್ಲಿ - ಬ್ರಹ್ಮ ದೇವ,ನೀನಿತ್ತ 'ಗಂಧರ್ವ- ಯಕ್ಷ-ದೇವ- ರಾಕ್ಷಸರುಗಳಿಂದ ನಿನಗೆ ಸಾವಿಲ್ಲ' ಎಂಬ ವರದಿಂದ ಕೊಬ್ಬಿದ ರಾವಣ ಇಂದು ನಮಗೂ ಸೇರಿದಂತೆ ಎಲ್ಲರಿಗೂ ಎಲ್ಲಾ ಲೋಕಗಳಿಗೂ ಕಂಟಕನಾಗಿ ಮೆರೆಯುತ್ತಿದ್ದಾನೆ.ದಯವಿಟ್ಟು ಅವನ ವಧೆಗಿರುವ ಉಪಾಯವೊಂದನ್ನು ನಿರೂಪಿಸು- ಎಂದು ಪ್ರಾರ್ಥಿಸಿದರು.ಆಗ ಬ್ರಹ್ಮನು ದೇವತೆಗಳಲ್ಲಿ- ನೀವೇನೂ ಚಿಂತಿಸಬೇಡಿ.ವರ ಬೇಡುವ ಸಂದರ್ಭದಲ್ಲಿ ಅವನು ಮಾನವರ ಮೇಲಿನ ಅಸಡ್ಡೆಯಿಂದ ಅವರನ್ನು ಬಿಟ್ಟಿದ್ದನು.ಇದೀಗ ಅವರ ಮೂಲಕವೇ ರಾವಣ ವಧೆಯಾಗಬೇಕಿದೆ- ಎಂದನು.ಈ ಸಂದರ್ಭದಲ್ಲಿ ಮಹಾವಿಷ್ಣುವೂ ಯಜ್ಞಶಾಲೆಗೆ ಬಂದನು. ಬ್ರಹ್ಮನ ಸಮೀಪದಲ್ಲೇ ಕುಳಿತನು.ಆಗ ದೇವತೆಗಳೆಲ್ಲರೂ ಒಟ್ಟಾಗಿ ಮಹಾವಿಷ್ಣುವಲ್ಲಿ- ದೇವದೇವ, ಲೋಕಕಲ್ಯಾಣಕ್ಕಾಗಿ ನಿನ್ನೊಂದಿಗೆ ಸದಾ ಇರುವ ನಮ್ಮನ್ನು ಲೋಕಕಂಟಕನಾದ ರಾವಣನಿಂದ ಕಾಪಾಡು.ಅದಕ್ಕಾಗಿ ನೀನು ದಶರಥನ ಮೂವರು ಪತ್ನಿಯರಾದ ಕೌಸಲ್ಯೆ ಕೈಕೇಯಿ ಸುಮಿತ್ರೆಯರಲ್ಲಿ ನಾಲ್ಕು ಮಂದಿ ಮಕ್ಕಳಾಗಿ ಜನಿಸಿ ರಾವಣಾದಿ ಲೋಕಕಂಟಕರನ್ನು ವಧಿಸಿ ಲೋಕಕಲ್ಯಾಣ ಮಾಡು- ಎಂದು ಪ್ರಾರ್ಥಿಸಿದರು.ಅವರ ಪ್ರಾರ್ಥನೆಯಿಂದ ಸಂಪ್ರೀತನಾದ ಮಹಾವಿಷ್ಣುವು ಹಾಗೇ ಆಗಲಿ, ನೀವಿನ್ನು ನಿಶ್ಚಿಂತರಾಗಿರಿ ಎಂದು ಅಭಯವಿತ್ತನು.ಮಹಾವಿಷ್ಣವು ತಾನೇ ಸ್ವತಃ ದಶರಥನ ಮಗಂದಿರಾಗಿ ಹುಟ್ಟಲು ನಿಶ್ಚಯಿಸಿದನು.ಯಜ್ಞದ ಪೂರ್ಣಾಹುತಿಯೂ ಆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ