ರಾಮಾಯಣ ಹಕ್ಕಿನೋಟ-30: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0
ಶ್ರೀರಾಮಾಯನಮ:


ಒಂದೆಡೆ ನಾನೂ ನಿನ್ನೊಂದಿಗೆ ವನವಾಸಕ್ಕೆ ಬರುತ್ತೇನೆ ಎನ್ನುವ ತಾಯಿ, ಇನ್ನೊಂದೆಡೆ ಕ್ಷತ್ರಿಯ ಧರ್ಮಾನುಸಾರ ಅನ್ಯಾಯದ ಮಾರ್ಗ ಹಿಡಿದು ಅಧರ್ಮಿಯಾದ ತಂದೆಯನ್ನು ಕೊಂದು ನಿನ್ನ ಪಟ್ಟಾಭಿಷೇಕ ಕಾರ್ಯವನ್ನು ನಡೆಸುತ್ತೇನೆ ಎನ್ನುವ ಕ್ರೋಧಿತ ಲಕ್ಷ್ಮಣ.


ಪಿತೃವಾಕ್ಯ ಪರಿಪಾಲನೆಯಂತೆಯೇ ಮಾತೃ ಸೇವೆಯೂ ಮುಖ್ಯ ಎನ್ನುವ ತಾಯಿಯನ್ನು ಸಂತೈಸುವಲ್ಲಿ ರಾಮನು ಕೊನೆಗೂ ಯಶಸ್ವಿಯಾದನು. 'ನನಗೆ ತಂದೆಯು ಗುರುವೂ ಹೌದು,ತಂದೆಯೂ ಹೌದು,ಆಜ್ಞಾಪಿಸುವ ರಾಜನೂ ಹೌದು. ಈ ಎಲ್ಲಾ ದೃಷ್ಟಿಯಿಂದಲೂ ನಾನು ವನವಾಸಕ್ಕೆ ಹೋಗುವುದು ಅನಿವಾರ್ಯವಾಗಿದೆ. ನಿನಗೆ ತಂದೆಯು ಗಂಡನೂ ಹೌದು,ರಾಜನೂ ಹೌದು. ಹೆಂಡತಿಯಾಗಿ ವೃದ್ಧ ಗಂಡನ ಸೇವೆ ಮಾಡುವುದು, ರಾಣಿಯಾಗಿ ರಾಜಾಜ್ಞೆಗೆ ಅಡ್ಡಿ ಮಾಡದೆ ವನವಾಸಕ್ಕೆ ನನ್ನನ್ನು ಆಶೀರ್ವದಿಸಿ ಕಳುಹಿಸುವುದು ನಿನ್ನ ಕರ್ತವ್ಯವಾಗಿದೆ"- ಎಂದು ರಾಮನು ಹೇಳಿದಾಗ ರಾಮನ ದೃಢ ನಿಶ್ಚಯದೆದುರು ಕೌಸಲ್ಯೆ ಸೋತಳು.ಹದಿನಾಲ್ಕು ವರ್ಷಗಳ ದಂಡಕಾರಣ್ಯ ವಾಸ ಮುಗಿದ ಕೂಡಲೇ ಬಂದು ನಿನ್ನ ಅಪೇಕ್ಷೆಯಂತೆ ಪಟ್ಟಾಭಿಷಿಕ್ತನಾಗಿ ರಾಜನಾಗಿ ನಿನ್ನ ಆಶೋತ್ತರಗಳನ್ನು ಈಡೇರಿಸುತ್ತೇನೆ ಎಂಬ ರಾಮನ ಮಾತಿಗೆ ತಾಯಿ ಕೌಸಲ್ಯೆ ಸಮ್ಮತಿಸಲೇ ಬೇಕಾಯಿತು.


ಇತ್ತ ಸಿಟ್ಟಿನಿಂದ ಭುಸುಗುಡುತ್ತಿರುವ ಲಕ್ಷ್ಮಣನನ್ನೂ ಸಮಾಧಾನ ಗೊಳಿಸುವ ಸಾಹಸವನ್ನು ರಾಮನು ಮಾಡಬೇಕಾಯಿತು. ಲೌಕಿಕ ಧರ್ಮವಾದ ಕ್ಷತ್ರಿಯ ಧರ್ಮಾನುಸಾರ ತಂದೆಯನ್ನು ಧಿಕ್ಕರಿಸಿ ಪಟ್ಟಾಭಿಷೇಕ ಮಾಡಿಸುತ್ತೇನೆ ಎನ್ನುತ್ತಿದ್ದ ತಮ್ಮನಿಗೆ ಶಾಶ್ವತ ಅಲೌಕಿಕ ಧರ್ಮದ ಮಹತ್ವವನ್ನು ಹೇಳುತ್ತಾ ನನಗೆ ಪುರವಾಸವೂ ಒಂದೇ ವನವಾಸವೂ ಒಂದೇ. ಇವೆರಡೂ ವಿಧಿ ನಿರ್ಣಯ. ಎಂದೂ ನಮ್ಮೊಂದಿಗೆ ಭೇದ ಭಾವ ತೋರದ ತಾಯಿ ಕೈಕೇಯಿಯು ಮಂಥರೆಯ ಮಾತು ಕೇಳಿ ಇಂದು ತೋರಿದ್ದಾಳೆಂದರೆ ಅದು ವಿಧಿಯಿಚ್ಛೆ. ಅದನ್ನು ಮೀರಿ ಹೋಗಲಾರೆ-ಎಂದ ರಾಮನಿಗೆ ಲಕ್ಷ್ಮಣನು ಕೊಡುವ ಈ ಉತ್ತರ ಯುವಶಕ್ತಿಯ ಕೆಚ್ಚಿನ ಪ್ರತೀಕ- ಅಣ್ಣಾ ನನ್ನೀ ಬಾಹುಗಳು ಶರೀರದ ಶೋಭೆಗಾಗಿ ಧರಿಸಿಲ್ಲ. ಈ ಬಿಲ್ಲಿರುವುದು ಅಲಂಕಾರಕ್ಕಲ್ಲ. ಸೊಂಟಕ್ಕೆ ಕಟ್ಟಿಕೊಳ್ಳಲೆಂದು ಕತ್ತಿಯನ್ನು ಇಟ್ಟುಕೊಂಡದ್ದಲ್ಲ. ಊರುಗೋಲಿಗಾಗಿ ಈ ಬಾಣಗಳಿರುವುದಲ್ಲ. ಇದು ಶತ್ರುಗಳ ಧ್ವಂಸಕ್ಕಾಗಿರುವುದು-ಎಂದ ಲಕ್ಷ್ಮಣನಲ್ಲಿ ಪಟ್ಟಾಭಿಷೇಕಕ್ಕಾಗಿ ಮಾಡಿದ ಏರ್ಪಾಡುಗಳನ್ನೆಲ್ಲಾ ವನವಾಸಕ್ಕೆ ಹೊರಡಲು ಸಿದ್ಧತೆ ಗೊಳಿಸುವಂತೆ ಮಾಡಿದ ರಾಮನ ಚಾಕಚಕ್ಯತೆ ಅಪೂರ್ವ. ಒಂದೇ ಸಲಕ್ಕೆ ಎದುರಾದ ಎರಡು ಸಮಸ್ಯೆಗಳನ್ನು ರಾಮ ಪರಿಹರಿಸಿದ ರೀತಿ ಅವನ ದೃಢ ಸಂಕಲ್ಪ, ಸಮಸ್ಯಾ ನಿವಾರಣಾ ಕುಶಲತೆಗಳಿಗೆ ಸಾಕ್ಷಿ.ಎಷ್ಟಾದರೂ ರಾಮನಿಗೆ ರಾಮನೇ ಸಾಟಿ.ರಾಮನಿಗಿಂತ ಮೊದಲೂ ಮತ್ತೆಯೂ ಒಬ್ಬ ರಾಮನಿರಲಿಲ್ಲ ಮತ್ತೊಬ್ಬ ರಾಮ ಹುಟ್ಟಲಿಲ್ಲ. ಕರಗಿದ ಕೌಸಲ್ಯೆಯು ರಾಮನನ್ನು ಹರಸಿ ಕಳುಹಿಸಲು ಮಂಗಳಕಾರ್ಯಗಳನ್ನು ನಡೆಸತೊಡಗಿದಳು.


ತೊಡಕಾಗಿದ್ದ ಲಕ್ಷ್ಮಣ ತಾನೇ ಪಟ್ಟಾಭಿಷೇಕದ ತಯಾರಿಯನ್ನು ನಿಲ್ಲಿಸಲು ಆದೇಶ ನೀಡತೊಡಗಿದನು.ವಿಧಿಯಿಚ್ಛೆ!


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top