ರಾಮನಿಗೆ ರಾಮನೇ ಸಾಟಿ.ಪಟ್ಟಾಭಿಷೇಕದ ಕರೆಯನ್ನು ಯಾವ ಮನದಿಂದ ಸ್ವೀಕರಿಸಿದ್ದನೋ ಅದೇ ಮನಸ್ಥಿತಿಯಲ್ಲಿ ವನವಾಸದ ಕರೆಯನ್ನೂ ಸ್ವೀಕರಿಸಿದನು.ಆದರೆ ಇಲ್ಲಿ ಅವನಿಗೆ ತನ್ನ ತಾಯಿ ಮತ್ತು ಸೀತೆಯನ್ನು ಸಂತೈಸುವ ಹೊಣೆಯಿತ್ತು.ಎಲ್ಲಾ ಹಿಂಬಾಲಕರನ್ನು ರಾಜಭವನದಲ್ಲೇ ಇರಲು ಹೇಳಿ ರಾಜಭವನದಿಂದ ರಾಮನೊಬ್ಬನೇ ನಿರ್ವಿಕಾರ ಭಾವದಿಂದ ತಾಯಿಯನ್ನು ಕಾಣಲೆಂದು ಹೊರಟನು.ತನ್ನ ಕಣ್ಣೆದುರೇ ನಡೆದ ಅನಿರೀಕ್ಷಿತ ಘಟನೆಗಳಿಂದ ಕೋಪಗೊಂಡ ನೊಂದುಕೊಂಡ ಲಕ್ಷ್ಮಣನೊಬ್ಬ ಅಣ್ಣನನ್ನು ಹಿಂಬಾಲಿಸಿದನು.ಈ ಸಂದರ್ಭದಲ್ಲಿ ನಾವು ಗಮನಿಸಬಹುದಾದದ್ದು -
. ರಾಮನು ವರಗಳ ಅನುಕ್ರಮಣಿಕೆಯ ಪ್ರಕಾರ ಭರತನಿಗೆ ಪಟ್ಟಾಭಿಷೇಕವಾದ ಬಳಿಕ ಹೊರಡಬಹಹುದಿತ್ತು
. ಕೈಕೇಯಿಯು ಎರಡನೇ ವರಕ್ಕೆ ಆದ್ಯತೆ ನೀಡಿ ಆದಷ್ಟು ಬೇಗ ರಾಮನು ದಂಡಕಾರಣ್ಯಕ್ಕೆ ಹೋಗಲಿ ಎಂದು ಅಪೇಕ್ಷೆ ಪಟ್ಟು ಅದಕ್ಕಾಗಿ ರಾಮನಿಗೆ ಒತ್ತಡ ಹೇರಿದ್ದು
.ರಾಮನೂ ಎರಡನೇ ವರಕ್ಕೆ ಆದ್ಯತೆ ನೀಡಿದ್ದು
ತನಗಾದ ನೋವಿಗೆ ದುಃಖ ಪಡದೆ ತನಗಾಗಿ ಇತರರು ಪಡುವ ನೋವಿಗೆ ಮತ್ತು ಇತರರ ನೋವಿಗೆ ದುಃಖ ಪಡುವ ರಾಮ ಇಲ್ಲಿ ತನಗಾಗಿ ದು:ಖಿಸದೆ ಇತರರ ನೋವಿಗೆ ಕರಗಿದನು.ಇನ್ನು ಹೆತ್ತ ತಾಯಿಯ ಕರುಳ ಸಂಕಟಕ್ಕೆ ಕರಗದಿದ್ದಾನೆಯೇ?ಮಗನ ಶ್ರೇಯೋಭಿವೃದ್ಧಿಗಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದ ಕೌಸಲ್ಯೆ ಮಗನಿಗೊದಗಿ ಬಂದ ವನವಾಸದ ಅನಿವಾರ್ಯತೆಯನ್ನು ತಿಳಿದು ಎಚ್ಚರದಪ್ಪಿದಳು.ಹದಿನಾಲ್ಕು ವರ್ಷಗಳ ಕಾಲ ದಂಡಕಾರಣ್ಯದಲ್ಲಿ ವಾನಪ್ರಸ್ಥಾಶ್ರಮದ ಕ್ರಮಗಳನ್ನನುಸರಿಸಿದ ಜೀವಿತ, ಭರತನಿಗೆ ಪಟ್ಟಾಭಿಷೇಕ.
ರಾಜನಾಗಬೇಕಿದ್ದ ಮಗ ಕಾಡುಪಾಲಾಗುವುದನ್ನು ಯಾವ ತಾಯಿ ತಾನೇ ಸಹಿಸಿಯಾಳು? ಪಟ್ಟ ಮಹಿಷಿ ಹೆಸರಿಗೆ, ಸುಮಿತ್ರೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕಿರಿ ರಾಣಿಯರಿಂದ ಉಪೇಕ್ಷಿಸಲ್ಪಟ್ಟ ಬದುಕು, ರಾಜಮಾತೆಯಾಗಿ ಮಗನ ಏಳಿಗೆಯನ್ನು ಕಾಣಬಹುದಲ್ಲ ಎಂದರೆ ಅದೂ....
ಕರುವನ್ನು ಬಿಟ್ಟಗಲಲಾರದ ಹಸುವಿನಂತೆ ಗೋಳಾಡುತ್ತಾ ನಾನೂ ನಿನ್ನೊಂದಿಗೆ ದಂಡಕಾರಣ್ಯಕ್ಕೆ ಬರುತ್ತೇನೆನ್ನುವ ನೊಂದ ಬೆಂದ ತಾಯಿಯನ್ನು ಸಮಾಧಾನಗೊಳಿಸುವ ಬಹುದೊಡ್ಡ ಸವಾಲು ರಾಮನಿಗೆದುರಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ