ದಶರಥನು ಮಕ್ಕಳ ಮದುವೆಗಳು ಮುಗಿದವು. ಮದುಮಕ್ಕಳೊಂದಿಗೆ ಎಲ್ಲರೂ ಸಂತೋಷದಿಂದ ಅಯೋಧ್ಯೆಯತ್ತ ಪಯಣಿಸ ತೊಡಗಿದರು. ಪಯಣದ ದಾರಿಯಲ್ಲಿ ಏಕಾಏಕಿ ಒಂದಷ್ಟು ಅಪಶಕುನಗಳು ಗೋಚರಿಸಿದಾಗ ದಶರಥನು ಕಂಗಾಲಾದನು. ಅದಾದ ಸ್ವಲ್ಪ ಹೊತ್ತಿನಲ್ಲಿ ಭೀಕರ ಬಿರುಗಾಳಿಯೊಂದಿಗೆ ರೌದ್ರಾಕಾರದ ಪರಶುರಾಮನು ಎದುರಾದನು. ವಸಿಷ್ಠ ವಾಮದೇವರುಗಳ ಉಪಚಾರ ಪಡೆದೂ ಶಾಂತನಾಗದ ಪರಶುರಾಮನು ರಾಮನಲ್ಲಿ- ತಾಟಕಿಯ ಸಂಹಾರದಿಂದ ತೊಡಗಿ ಶಿವಧನುಸ್ಸನ್ನು ಮುರಿಯುವ ತನಕವಿರುವ ನಿನ್ನ ಸಾಹಸವನ್ನು ಕೇಳಿದ್ದೇನೆ. ನೀನು ನಿಜವಾದ ಸಾಹಸಿಯಾದರೆ ಶಿವಧನುಸ್ಸಿಗೆ ಸಮಾನವಾದ ನನ್ನಲ್ಲಿರುವ ಈ ವೈಷ್ಣವ ಧನುಸ್ಸಿಗೆ ಶಿಂಜನಿಯನ್ನು ಕಟ್ಟಿ ಬಾಣ ಹೂಡಿ ನನ್ನೊಂದಿಗೆ ದ್ವಂದ್ವ ಯುದ್ಧಕ್ಕೆ ಬಾ. ಇದರಲ್ಲಿ ನೀನು ಗೆದ್ದರೆ ನಿನ್ನ ಶೌರ್ಯವನ್ನು ನಾನು ನಂಬುತ್ತೇನೆ-ಎಂದು ಆಹ್ವಾನವಿತ್ತನು.
ದಶರಥನು ಪರಿಪರಿಯಾಗಿ ವಿನಂತಿಸಿದರೂ ಪರಶುರಾಮನು ತನ್ನ ಸವಾಲಿನಿಂದ ಹಿಂದೆ ಬರಲಿಲ್ಲ. ರಾಮನು ಅನಿವಾರ್ಯವಾಗಿ ಸವಾಲನ್ನೊಪ್ಪಿ ಲೀಲಾಜಾಲವಾಗಿ ವೈಷ್ಣವ ಧನುಸ್ಸಿಗೆ ಶಿಂಜನಿ ಬಿಗಿದು ಬಾಣ ಹೂಡಿದನು. ಪರಶುರಾಮನ ಅಹಂಕಾರ ಅಡಗಿತು.ಆದರೆ ರಾಮ ಇಷ್ಟಕ್ಕೇ ಬಿಡಲಿಲ್ಲ. ರಾಮ ಹೂಡಿದ ಬಾಣ ಎಂದೂ ವ್ಯರ್ಥವಾಗದು.ನೀನು ಬ್ರಾಹ್ಮಣ. ನಿನ್ನನ್ನು ಕೊಲ್ಲಲಾರೆ. ಇದಕ್ಕೊಂದು ಗುರಿ ಕೊಡು ಎಂದು ಕೋಪೋದ್ರಿಕ್ತನಾಗಿ ಹೇಳಿದನು.ಕೊನೆಗೆ ಪರಶುರಾಮನು ನನಗೆ ಮಹೇಂದ್ರ ಪರ್ವತಕ್ಕೆ ಕ್ಷಣ ಮಾತ್ರದಲ್ಲಿ ಹೋಗಲಿರುವ ನನ್ನ ತಪಶ್ಶಕ್ತಿಯನ್ನುಳಿಸಿ ಉಳಿದ ನನ್ನ ತಪಶ್ಶಕ್ತಿಯನ್ನು ಗುರಿಯಾಗಿಸಿ ಬಾಣ ಪ್ರಯೋಗಿಸು ಎಂದನು.ರಾಮಬಾಣ ಗುರಿ ತಲುಪಿತು. ಪರಶುರಾಮ ತಪಶ್ಶಕ್ತಿಯನ್ನು ಕಳಕೊಂಡು ಕಳಾಹೀನನಾದನು. ಬಳಿಕ ರಾಮನನ್ನು ಮಹಾವಿಷ್ಣುವಿನ ಅವತಾರವೆಂದೆ ಕೊಂಡಾಡಿ ಪರಶುರಾಮನು ತಪಸ್ಸಿಗಾಗಿ ಮಹೇಂದ್ರ ಪರ್ವತಕ್ಕೆ ತೆರಳಿದನು. ಎದುರಾದ ಬಹುದೊಡ್ಡ ಗಂಡಾಂತರ ತಪ್ಪಿದ ತೃಪ್ತಿ- ಸಂತೋಷಗಳೊಂದಿಗೆ ದಶರಥನು ತನ್ನ ಪರಿವಾರದೊಂದಿಗೆ ಅಯೋಧ್ಯೆಗೆ ತೆರಳಿದನು.
ಬಾಲ ಕಾಂಡಕ್ಕೆ ಮಂಗಳ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ