ರಾಮಾಯಣ ಹಕ್ಕಿನೋಟ-16: ಪ್ರತಿದಿನ ರಾಮಾಯಣ ಕಿರು ಮಾಹಿತಿ

Upayuktha
0

 


ಶ್ರೀರಾಮಾಯನಮ:


ಅಂಶುಮಂತನು ಸಗರನ ಉತ್ತರಾಧಿಕಾರಿಯಾಗಿ ಚೆನ್ನಾಗಿ ರಾಜ್ಯವನ್ನಾಳಿದನು.ತನ್ನ ಮಗ ದಿಲೀಪನಿಗೆ ಪಟ್ಟ ಕಟ್ಟಿ ತಾನು ಗಂಗಾವತರಣಕ್ಕಾಗಿ ತಪಸ್ಸು ಮಾಡಲು ತೆರಳಿದನು.ವಿಫಲನಾಗಿ ಸ್ವರ್ಗಕ್ಕೆ ಹೋದನು.ಅವನ ಮಗ ದಿಲೀಪನೂ ಇದೇ ದಾರಿ ಹಿಡಿದು ಮಗ ಭಗೀರಥನಿಗೆ ರಾಜ್ಯಾಧಿಕಾರವನ್ನು ನೀಡಿ ತಪಗೈದು ಸ್ವರ್ಗಸ್ಥನಾದನು.

ಭಗೀರಥನು ಪರಮಧಾರ್ಮಿಕನು.ಅವನಿಗೆ ಮಕ್ಕಳಿರಲಿಲ್ಲ.ಇದರಿಂದ ಚಿಂತಿತನಾದ ಅವನು ಸಂತತಿಗಾಗಿ ಗೋಕರ್ಣ ಕ್ಷೇತ್ರದಲ್ಲಿ ಬ್ರಹ್ಮನ ಕುರಿತು ಘೋರ ತಪಸ್ಸನ್ನು ಮಾಡಿದನು.ಬ್ರಹ್ಮನು ಭಗೀರಥನ ತಪಸ್ಸಿಗೊಲಿದು ಏನು ಬೇಕು ಎಂದಾಗ ಭಗೀರಥನು ದೇವಾ-ನನಗೆ ಪುತ್ರ ಭಾಗ್ಯ ಕರುಣಿಸು ಹಾಗೂ ನನ್ನ ಪಿತೃಗಳಿಗೆ ಸದ್ಗತಿ ದೊರಕಿಸಲು ಗಂಗಾವತರಣವಾಗುವಂತೆ ಆದೇಶಿಸು-ಎಂದು ಪ್ರಾರ್ಥಿಸಿದನು.ಮೊದಲನೆಯ ಬೇಡಿಕೆಗೆ ಅಸ್ತು ಎಂದ ಬ್ರಹ್ಮನು ಎರಡನೆಯ ಬೇಡಿಕೆಗೆ ಶಿವನನ್ನು ಪ್ರಾರ್ಥಿಸಲು ಹೇಳಿದನು.ಗಂಗೆ ದೇವಲೋಕದಿಂದ ಇಳಿಯುವಾಗ ಆಕೆಯನ್ನು ಧರಿಸಿ ಧರಣಿಯನ್ನು ಸಂರಕ್ಷಿಸಲು ಶಿವನಿಗೆ ಮಾತ್ರ ಸಾಧ್ಯ-ಎಂದು ಆಶೀರ್ವದಿಸಿ ತನ್ನ ಲೋಕಕ್ಕೆ ತೆರಳಿದನು.


ಲೋಕಹಿತಕ್ಕಾಗಿ ಪಿತೃಗಳ ಸದ್ಗತಿಗಾಗಿ ಶಿವನ ಕುರಿತು ಮಾಡುತ್ತಿದ್ದ ತಪಸ್ಸಿಗೆ ಶಿವನು ಬೇಗನೇ ಒಲಿದನು.ಭಗೀರಥನ ಇಚ್ಛೆಯಂತೆ ಗಂಗೆಯನ್ನು ತನ್ನ ಶಿರದಲ್ಲಿ ಧರಿಸಲು ಒಪ್ಪಿದನು.ಗಂಗಾವತರಣವಾಯಿತು.ದೇವಲೋಕದ ಗಂಗೆಗೆ ಇಳೆಗಿಳಿಯುವ ಹೊತ್ತಿಗೆ ಮನಸಿನಲ್ಲಿ ಒಂದು ಅಹಂಕಾರ ಸುಳಿಯಿತು.ತಾನೇಕೆ ತನ್ನನ್ನು ಧರಿಸಲು ನಿಂತ ಶಂಕರನನ್ನು ಸೆಳೆದುಕೊಂಡು ಪಾತಾಳಕ್ಕೆ ಹೋಗಬಾರದು?-ಎಂದು.ಗಂಗೆಯ ಇಂಗಿತವನ್ನರಿತ ಶಂಕರನು ಆಕೆ ತನ್ನ ಶಿರವನ್ನು ಸೇರಿದೊಡನೆ ಹೊರಬಾರದಂತೆ ನಿರ್ಬಂಧಿಸಿದನು.ಗಂಗೆಯ ಹಮ್ಮು ಇಳಿಯಿತು.ಆದರೆ ಆಕೆ ಸಗ್ಗದಿಂದಿಳಿದ ಉದ್ದೇಶ ಉಳಿಯಿತು.
ಕಾಲ ಉರುಳಿತು.ಭಗೀರಥನ ಸತತ ತಪಸ್ಸಿನ ಪ್ರಯತ್ನಕ್ಕೆ ಒಲಿದ ಶಿವನು ಕೊನೆಗೆ ಗಂಗೆಯನ್ನು ಬ್ರಹ್ಮನಿಂದ ನಿರ್ಮಿತವಾದ ಬಿಂದು ಸರೋವರದಲ್ಲಿ ಬಿಟ್ಟನು.ಅಲ್ಲಿಂದ ಗಂಗೆ ಏಳು ಪ್ರವಾಹಗಳ ರೂಪದಲ್ಲಿ ಹರಿದಳು.ಏಳನೆಯ ಪ್ರವಾಹವೇ ಭಗೀರಥನನ್ನು ಹಿಂಬಾಲಿಸಿದ ಗಂಗೆ.ಮುಂದೆ ಮುಂದೆ ರಥದಲ್ಲಿ ಭಗೀರಥ; ಹಿಂದೆ ಹಿಂದೆ ವೇಗವಾಗಿ ಹರಿದು ಬರುತ್ತಿರುವ ಪರಿಪೂರ್ಣ ಗಂಗೆ.ಆಕೆಯ ವೇಗವನ್ನು ಅಹಂಕಾರವೆಂದು ಭಾವಿಸಿದ ಮಹಾನ್ ತಪಸ್ವಿ ಜಹ್ನು ಮಹರ್ಷಿಯು ಆಕೆಯನ್ನು ಪೂರ್ಣವಾಗಿ ಕುಡಿದುಬಿಟ್ಟನು.ಇದನ್ನು ಕಂಡ ಋಷಿಗಳು ದೇವತೆಗಳು ಅವನ ಮನವನ್ನು ಒಲಿಸಿ ಆಕೆಯನ್ನು ಬಿಟ್ಟು ಬಿಡುವಂತೆ ಪ್ರಾರ್ಥಸಿದರು.ಒಲಿದ ಮುನಿಯು ಆಕೆ ಅಶುದ್ಧಳಾಗಬಾರದೆಂದು ತನ್ನ ಎರಡೂ ಕಿವಿಗಳಿಂದ ಹೊರಬಿಟ್ಟನು.ಇದರಿಂದಾಗಿ ಗಂಗೆ ಜಾಹ್ನವಿ ಎಂಬ ಹೆಸರಿನಿಂದಲೂ ಪ್ರಸಿದ್ಧಳಾದಳು.ಬಳಿಕ ಗಂಗೆ ದೇವಗಂಗೆ ಭಗೀರಥನನ್ನು ಅನುಸರಿಸಿ ರಸಾತಳಕ್ಕೆ ಹೋಗಿ ಅವನ ಮುತ್ತಜ್ಜಂದಿರ ಭಸ್ಮವನ್ನು ಮುಳುಗಿಸಿ ಅವರಿಗೆ ಸದ್ಗತಿಯನ್ನು ನೀಡಲು ಸಹಕರಿಸಿದಳು.ಭಗೀರಥನು ಕೊನೆಗೂ ತನ್ನ ಪಿತೃಗಳು ಮುಕ್ತಿ ಪಡೆಯುವಂತೆ ಮಾಡಿ ಕೃತಾರ್ಥನಾದನು,ಧನ್ಯನಾದನು.


ಇದೇ ಭಗೀರಥ ಪ್ರಯತ್ನ.ಇಂದೂ ನಮ್ಮ ನಾಲಿಗೆಯಲ್ಲಿ ನಲಿಯುತ್ತಿರುವ ಪರಮ ಪಾವನವಾದ ನುಡಿಮುತ್ತು.ಪುರುಷ ಪ್ರಯತ್ನದ ಶಬ್ದರೂಪ.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top