ವಿಶ್ವಾಮಿತ್ರರು ರಾಮ ಲಕ್ಷ್ಮಣರೊಡನೆ ಸಿದ್ಧಾಶ್ರಮವನ್ನು ತಲುಪಿದರು.ಇಲ್ಲೇ ಮಹಾವಿಷ್ಣುವು ವಾಮನನಾಗಿ ತಪಶ್ಚರಣೆಯನ್ನು ಮಾಡಿ ಸಿದ್ಧಿಯನ್ನು ಪಡೆದನು.ಆದುದರಿಂದ ಇದು ವಾಮನಾಶ್ರಮ.ಮಹಾನ್ ತಪಸ್ವಿ ಕಾಶ್ಯಪನು ಇಲ್ಲಿ ಸಿದ್ಧಿಯನ್ನು ಪಡೆದುದರಿಂದ ಇದು ಸಿದ್ಧಾಶ್ರಮವಾಯಿತು.(ಮಹಾನ್ ಪರಾಕ್ರಮಿ ಬಲಿ ಚಕ್ರವರ್ತಿಯು ಯುದ್ಧದಲ್ಲಿ ಇಂದ್ರನನ್ನು ಸೋಲಿಸಿ ಸ್ವರ್ಗವನ್ನು ವಶಪಡಿಸಿಕೊಂಡನು.ಅವನನ್ನು ಮಣಿಸಲು ಮಹಾವಿಷ್ಣುವು ವಾಮನನಾಗಬೇಕಾಯಿತು.ಅವನು ಪುತ್ರಾಕಾಂಕ್ಷಿಗಳಾದ ಕಶ್ಯಪ -ಅದಿತಿಯರಿಗೆ ಮಗನಾಗಿ ಹುಟ್ಟಿ ದನು.ವಾಮನನಾದನು.ದೇವತೆಗಳ ಪ್ರಾರ್ಥನೆಯಂತೆ ಬಲಿಯನ್ನು ಪಾತಾಳಕ್ಕೆ ತಳ್ಳಿ ಇಂದ್ರನನ್ನು ಮತ್ತೆ ಸ್ವರ್ಗದ ಅಧಿಪತಿಯನ್ನಾಗಿ ಮಾಡಿದನು.
ಬಳಿಕ ವಾಮನನು ಇಲ್ಲಿಯೇ ವಾಸ ಮಾಡುತ್ತಿದ್ದನು.)
ನಾನೂ ಇಲ್ಲೇ ವಾಸ ಮಾಡುತ್ತಿದ್ದು ಮುಂದಿನ ಯಜ್ಞವು ಇಲ್ಲೇ ನಡೆಯಲಿದೆ ಎಂದು ವಿಶ್ವಾಮಿತ್ರರು ರಾಮನಿಗೆ ಹೇಳಿದರು.
ಏಳು ದಿನಗಳ ಕಾಲದ ಮಹಾನ್ ಯಜ್ಞಕ್ಕೆ ವಿಶ್ವಾಮಿತ್ರರು ದೀಕ್ಷಾಬದ್ಧರಾದರು.ಋಷಿಗಳ ಕೋರಿಕೆಯಂತೆ ರಾಮ ಲಕ್ಷ್ಮಣರಿಬ್ಬರೂ ಆರು ರಾತ್ರಿಗಳ ಕಾಲ ಯಜ್ಞ ರಕ್ಷಣೆಗೆ ದೀಕ್ಷಾಬದ್ಧರಾದರು.ಐದು ಇರಳುಗಳಲ್ಲಿ ಯಾವುದೇ ಸಮಸ್ಯೆಯಿಲ್ಲ.ಆರನೇ ಇರುಳು ಯಜ್ಞ ಭಂಜಕ ರಕ್ಕಸರಾದ ಸುಬಾಹು ಮಾರೀಚರು ಯಜ್ಞ ವೇದಿಕೆಯತ್ತ ರಕ್ತ ಮಾಂಸಗಳನ್ನು ಸುರಿಸುತ್ತಾ ಧಾವಿಸಿದರು.ಮೊದಲೇ ಯುದ್ಧ ಸನ್ನದ್ಧರಾಗಿದ್ದ ರಾಮ ಲಕ್ಷ್ಮಣರು ಸಮರ್ಥವಾಗಿಯೇ ಅವರನ್ನು ತಡೆದರು ಹಿಮ್ಮೆಟ್ಟಿಸಿದರು.ಶ್ರೀರಾಮನು ಮಾನವಾಸ್ತ್ರದ ಮೂಲಕ ಮಾರೀಚನನ್ನು ಕೊಲ್ಲದೆ ಸಮುದ್ರದ ಮಧ್ಯೆ ಬೀಳಿಸಿದನು.ಆಗ್ನೇಯಾಸ್ತ್ರದ ಮೂಲಕ ಸುಬಾಹುವನ್ನು ಕೊಂದು ಕೆಡಹಿದನು.ಇವರಿಬ್ಬರೇ ಉಳಿದಿಲ್ಲವೆಂದ ಮೇಲೆ ಅವರೊಂದಿಗೆ ಬಂದ ಉಳಿದ ರಕ್ಕಸರ ಪಾಡು ಹೇಳಬೇಕೇ?
ಯಜ್ಞ ಯಶಸ್ವಿಯಾಗಿ ಸಂಪನ್ನಗೊಂಡಿತು.ವಿಶ್ವಾಮಿತ್ರರು ಸುಪ್ರಸನ್ನರಾದರು.
ಮೇಲ್ನೋಟಕ್ಕೆ ರಾಮ ಲಕ್ಷ್ಮಣರು ಬಂದ ಉದ್ದೇಶ ಈಡೇರಿತು.ಆದರೆ....
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ