ಸ್ವಾತಂತ್ರ್ಯ ಹೋರಾಟದ ಮಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ತಾಯಿ ಭಾರತಿಯ ವೀರ ಪುತ್ರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ಗಲ್ಲು ಶಿಕ್ಷೆಯನ್ನು ಘೋಷಿಸಲಾಗಿತ್ತು.
ಗಲ್ಲಿಗೇರಿಸುವ ದಿನಗಳು ಹತ್ತಿರವಾಗಿತ್ತು. ಆದರೂ ಆ ಮೂರು ಜನರ ಮುಖದಲ್ಲಿನ ಕ್ಷಾತ್ರ ತೇಜ ಕಿಂಚಿತ್ತು ಕಮ್ಮಿಯಾಗಿರಲಿಲ್ಲ. ಮುಖದಲ್ಲಿನ ನಗು ಮಾಯವಾಗಿರಲಿಲ್ಲ. ಸಾವು ಹತ್ತಿರವಾಗುತ್ತಿದ್ದರು ಒಂದಿನಿತೂ ಅಳುಕಿಲ್ಲದ, ಅಂಜದ, ತಡಬಡಾಯಿಸದ ಧೀರ ವ್ಯಕ್ತಿತ್ವ ಅವರದು.
ಗಲ್ಲಿಗೇರಿಸುವ ಆ ದಿನ ಬಂದೇ ಬಿಟ್ಟಿತು. ಅಂದು ಲಾಹೋರ ನ ಜಿಲ್ಲಾ ನ್ಯಾಯಾಧೀಶರು, ಡೆಪ್ಯೂಟಿ ಕಮಿಷನರ್, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಇನ್ಸ್ಪೆಕ್ಟರ್ ಜನರಲ್ ಆಫ್ ಪ್ರಿಸನ್ ಮತ್ತು ಓರ್ವ ವೈದ್ಯರು ಹಾಜರಿದ್ದರು.
ನಸುಕಿನ ಜಾವದಲ್ಲಿಯೇ ಸ್ನಾನ ಮಾಡಿ ಜೈಲಿನ ಸಿಬ್ಬಂದಿ ಕೊಟ್ಟ ಬಟ್ಟೆಗಳನ್ನು ಧರಿಸಿದ ಆ ಮೂವರು ವೀರ ಪುತ್ರರ ಕೈಕಾಲುಗಳನ್ನು ಕೋಳಗಳಲ್ಲಿ ಬಂಧಿಸಿ ಕರೆದೊಯ್ಯಲಾರಂಭಿಸಿದರು. ಜೈಲಿನ ಆವರಣದಲ್ಲಿ ನಡೆಯುತ್ತಾ ಅತ್ಯಂತ ಹುಮ್ಮಸ್ಸಿನಿಂದ ಎದೆ ಉಬ್ಬಿಸಿ ನಡೆಯುತ್ತಿದ್ದ ಈ ಮೂರು ಜನ ಯೋಧರನ್ನು ಕಂಡು ಅಲ್ಲಿನ ಪೊಲೀಸ್ ಅಧಿಕಾರಿ ಆಶ್ಚರ್ಯಚಕಿತನಾದನು. ಕುತೂಹಲ ತಡೆಯಲಾರದೆ ಆ ಮೂವರನ್ನು ಈ ಕುರಿತು ಏಕಿಷ್ಟು ಹುಮ್ಮಸ್ಸಿನಿಂದ ಇರುವಿರಿ ಎಂದು ಕೇಳಿದಾಗ ಭಗತ್ ಸಿಂಗ್ ಉತ್ತರಿಸಿದ್ದು ಇಲ್ಲಿರುವ ನೀವು ಐದು ಜನ ಅಧಿಕಾರಿಗಳು ಅದೃಷ್ಟವಂತರು ಎಂದು.
ಅದಕ್ಕೆ ಆ ಪೊಲೀಸ ಅಧಿಕಾರಿ ಗಲ್ಲುಗಂಬದ ಕುಣಿಕೆಯ ಹಗ್ಗ ಕೊರಳಲ್ಲಿ ಬಿದ್ದ ಕೆಲವೇ ಕ್ಷಣಗಳಲ್ಲಿ ಹೆಣವಾಗಿ ಹೋಗುವ ನೀವು ನಮ್ಮ ಅದೃಷ್ಟವನ್ನು ಹೇಗೆ ಹೇಳುವಿರಿ ಎಂದು ಪ್ರಶ್ನಿಸಿದನು.
ಅದಕ್ಕುತ್ತರವಾಗಿ ಭಗತ್ ಸಿಂಗ್ ಪ್ರಸ್ತುತ 30 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ತಾಯಿ ಭಾರತೀಯ ದಾಸ್ಯ ಮುಕ್ತಿಗಾಗಿ ಸ್ವಾತಂತ್ರದ ಪ್ರಾಪ್ತಿಗಾಗಿ ಹೋರಾಡಿ ಅತ್ಯಂತ ಸಂತಸದಿಂದ ಗಲ್ಲು ಶಿಕ್ಷೆಯನ್ನು ಸ್ವೀಕರಿಸಲು ಹೋಗುತ್ತಿರುವ ನಾವು ಮೂವರನ್ನು ನೋಡುವ ಭಾಗ್ಯ ಕೇವಲ ಈ ಜೈಲಿನ ಅಧಿಕಾರಿಗಳಾದ ನಿಮ್ಮದಾಗಿದೆ. ಯೋಚನೆ ಮಾಡಿ ಇಂಥದ್ದೊಂದು ಅದ್ಭುತ ಮಾತೃಭಕ್ತಿಯನ್ನು ದೇಶಪ್ರೇಮವನ್ನು ತಾಯಿ ಭಾರತಿಯ ಮಕ್ಕಳ ವಿನಾ ಬೇರೆಲ್ಲಾದರೂ ಕಾಣಸಿಗುವುದೇ ಎಂದು. ಆದ್ದರಿಂದಲೇ ನೀವುಗಳು ಅದೃಷ್ಟವಂತರು ಎಂದು ಹೇಳಿದ್ದು.
ಹೀಗೆ ಹೇಳಿ ಧೀರೋದಾತ್ತವಾಗಿ ಗಲ್ಲು ಗಂಬದ ಕಟ್ಟೆಯನೇರಿ ನೇಣಿನ ಕುಣಿಕೆಯನ್ನು ಚುಂಬಿಸಿ ಕೊರಳಿಗೆ ಹಾಕಿಕೊಂಡ ಪ್ರೇರಣಾ ಈ ಕಥೆ ನಮ್ಮ ಮಕ್ಕಳಿಗೆ ಹೇಳಲೇಬೇಕು. ಅವರ ತ್ಯಾಗ ಬಲಿದಾನಗಳ ಸಮಾಧಿಯ ಮೇಲೆ ನಮ್ಮ ಭವಿಷ್ಯ ನಿಂತಿದೆ. ಅವರು ನಮಗೆ ನೀಡಿದ ಸ್ವಾತಂತ್ರ್ಯದ ಕಾಣಿಕೆಯನ್ನು ಮಹಾಪ್ರಸಾದವಾಗಿ ಸ್ವೀಕರಿಸಿ ಅದನ್ನು ಇನ್ನಿಲ್ಲದಂತೆ ಕಾಪಾಡಿಕೊಳ್ಳುವ ಹೊಣೆ ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯದು ಅಲ್ಲವೇ.
(ಕೃಪೆ -ಭಾರತ ದರ್ಶನ ಶ್ರವಣ ಮಾಲಿಕೆ, ಶ್ರೀ ವಿದ್ಯಾನಂದ ಶೆಣೈ)
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ